ಈದ್ ಮಿಲಾದ್ ಕಟೌಟ್ ವಿಚಾರಕ್ಕೆ ಶಿವಮೊಗ್ಗ ಉದ್ವಿಘ್ನ – ಇದೆಲ್ಲಾ ಏನ್ ಹೊಸದಾಗಿ ನಡೆಯುತ್ತಿದೆಯಾ ಎಂದು ಗೃಹಸಚಿವರ ಉಡಾಫೆ

ಈದ್ ಮಿಲಾದ್ ಕಟೌಟ್ ವಿಚಾರಕ್ಕೆ ಶಿವಮೊಗ್ಗ ಉದ್ವಿಘ್ನ – ಇದೆಲ್ಲಾ ಏನ್ ಹೊಸದಾಗಿ ನಡೆಯುತ್ತಿದೆಯಾ ಎಂದು ಗೃಹಸಚಿವರ ಉಡಾಫೆ

ಕೋಮು ವಿಚಾರದಲ್ಲಿ ಸೂಕ್ಷ್ಮ ಜಿಲ್ಲೆಯಾಗಿರುವ ಶಿವಮೊಗ್ಗ ಮತ್ತೊಮ್ಮೆ ಕೊತಕೊತ ಕುದಿಯುತ್ತಿದೆ. ಶಿವಮೊಗ್ಗದ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಈದ್​ ಮಿಲಾದ್​ ಮೆರವಣಿಗೆ ವೇಳೆ ಕಟೌಟ್​ ವಿಚಾರವಾಗಿ ಶುರುವಾದ ವಾಗ್ವಾದ ಹಿಂಸಾರೂಪಕ್ಕೆ ತಿರುಗಿದೆ. ಘಟನೆ ನಡೆದ ಪ್ರದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್​ ಜಾರಿ ಮಾಡಿದ್ದಾರೆ.

ಇದನ್ನೂ ಓದಿ : ರಾಜ್ಯಕ್ಕೆ ಮತ್ತೊಮ್ಮೆ ಶಾಕ್‌ ಕೊಟ್ಟ ಸಿಡಬ್ಲ್ಯೂಎಂಎ! – ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ

ಶಿವಮೊಗ್ಗ ಹೇಳಿ ಕೇಳಿ ಕೋಮು ವಿಚಾರದಲ್ಲಿ ಸದಾ ಉದ್ವಿಘ್ನವಾಗಿರುತ್ತದೆ. ಭಾನುವಾರ ಈದ್​ ಮಿಲಾದ್​ ಅಂಗವಾಗಿ ಶಿವಮೊಗ್ಗದಲ್ಲಿ ಬೃಹತ್​ ಮಟ್ಟದಲ್ಲಿ ಮೆರವಣಿಗೆಯನ್ನು ಆಯೋಜನೆ ಮಾಡಲಾಗಿತ್ತು. ಮೆರವಣಿಗೆ ರಾಗಿಗುಡ್ಡ ತಲುಪಿದ ವೇಳೆ ಕಟೌಟ್​ ವಿಚಾರವಾಗಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆಯಾಗಿದೆ. ಈ ವೇಳೆ ಕೆಲ ವ್ಯಕ್ತಿಗಳು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಎರಡು ಕೋಮಿನ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದ ಪರಿಣಾಮ 7ಕ್ಕೂ ಹೆಚ್ಚು ಕಾರುಗಳು ಹಾಗೂ ಮನೆಯ ಕಿಟಕಿ ಗಾಜುಗಳು ಜಖಂಗೊಂಡಿವೆ. ಕಲ್ಲು ತೂರಾಟದಿಂದ ಕೆಲವರಿಗೆ ಗಂಭೀರ ಗಾಯಗಳು ಸಹ ಆಗಿವೆ. ಘಟನೆಯಲ್ಲಿ 35ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 40ಕ್ಕೂ ಹೆಚ್ಚು ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ. ಪೊಲೀಸರು, ಮನೆಗಳ ಮೇಲೆ ಕಲ್ಲು ತೂರಿದ್ದವರನ್ನು ಬಂಧಿಸಲಾಗಿದೆ. ಒಂದು ಧರ್ಮದವರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ನಮ್ಮ‌ ಸರ್ಕಾರ ದೇವರು ಧರ್ಮದ ವಿಚಾರದಲ್ಲಿ ಇಂತಹ ಕೃತ್ಯ ಎಸಗುವವರನ್ನ ಸಹಿಸುವುದಿಲ್ಲ. ಹೀಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.

ಈ ಬಗ್ಗೆ ಮಾತನಾಡಿರುವ ಡಾ.ಜಿ ಪರಮೇಶ್ವರ್ ಉಡಾಫೆ ಉತ್ತರ ನೀಡಿದ್ದಾರೆ. ಇದೆಲ್ಲ ಏನ್ ಹೊಸದಾಗಿ ನಡೆಯುತ್ತಿದೆಯಾ? ಪೊಲೀಸರು ದೊಡ್ಡ ಪ್ರಮಾಣದಲ್ಲಿ ಆಗಬೇಕಿದ್ದ ಗಲಾಟೆ ತಪ್ಪಿಸಿದ್ದಾರೆ. ಹಬ್ಬ ಮತ್ತಿತರೆ ಸಂದರ್ಭದಲ್ಲಿ ಬ್ಯಾನರ್ ಕಟ್ಟುತ್ತಾರೆ, ಪೋಸ್ಟರ್ ಹಾಕುತ್ತಾರೆ. ಇದನ್ನೇ ಕೆಲವರು ಅಡ್ವಾಂಟೇಜ್ ಆಗಿ ತೆಗೆದುಕೊಳ್ಳುತ್ತಾರೆ. ಶಿವಮೊಗ್ಗ ಘಟನೆಗೆ ಕಾರಣ ಏನೆಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ಸಂಭವಿಸಲು ಬಿಡುವುದಿಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

Shantha Kumari