ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಎರಡನೇ ಬಲಿ – ಚಿಕ್ಕಮಗಳೂರಿನಲ್ಲೂ ದಿನೇ ದಿನೇ ಜಾಸ್ತಿಯಾಗುತ್ತಿದೆ ಕೆಎಫ್‌ಡಿ ಪ್ರಕರಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಎರಡನೇ ಬಲಿ – ಚಿಕ್ಕಮಗಳೂರಿನಲ್ಲೂ ದಿನೇ ದಿನೇ ಜಾಸ್ತಿಯಾಗುತ್ತಿದೆ ಕೆಎಫ್‌ಡಿ ಪ್ರಕರಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಮಿತಿಮೀರಿದೆ. ಈಗಾಗಲೇ ಮಂಗನ ಕಾಯಿಲೆಗೆ ಇಬ್ಬರು ಬಲಿಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ದಿನೇ ದಿನೇ ಜಿಲ್ಲೆಯಾದ್ಯಂತ ಮಂಗನ ಕಾಯಿಲೆಯ ಹಾವಳಿ ಜಾಸ್ತಿಯಾಗಿದ್ದು, ರೋಗ ಹರಡುವಿಕೆ ಕೂಡಾ ಜಾಸ್ತಿಯಾಗಿದೆ.

ಇದನ್ನೂ ಓದಿ:ಮಲೆನಾಡಿಗೆ ಮಾರಕವಾದ ಮಂಗನ ಕಾಯಿಲೆ..! – ಕೆಎಫ್ ಡಿಗೆ 18 ವರ್ಷದ ಯುವತಿ ಸಾವು

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊರ್ಲಕೈ ಗ್ರಾಮದಲ್ಲಿ ಮಂಗನ ಕಾಯಿಲೆಯ ಆತಂಕ ಹೆಚ್ಚಾಗಿದೆ.  60 ವರ್ಷದ ವೃದ್ಧೆ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಐದು ದಿನಗಳ ಹಿಂದಷ್ಟೇ ಸಿದ್ದಾಪುರ ತಾಲೂಕಿನ ಮಹಿಳೆಯೊಬ್ಬರು ಮಂಗನ ಕಾಯಿಲೆಗೆ ಬಲಿಯಾಗಿದ್ದರು. ಈಗ ಮತ್ತೊಬ್ಬರು ಕೂಡಾ ಮಂಗನ ಕಾಯಿಲೆಗೆ ಬಲಿಯಾಗಿದ್ದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಮಂಗನಕಾಯಿಲೆಗೆ ಬಲಿಯಾದ ಮಹಿಳೆ 20 ದಿನಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣಗಳ ಸಂಖ್ಯೆ 43ಕ್ಕೇರಿದೆ. ಮತ್ತೊಂದೆಡೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ನುಗ್ಗಿ ಗ್ರಾಮ ಪಂಚಾಯಿತಿಯ ಎರಡು ಹಳ್ಳಿಗಳಲ್ಲೂ ಮಂಗನ ಕಾಯಿಲೆ ಪ್ರಕರಣ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಒಟ್ಟು 26 ಪ್ರಕರಣಗಳಿದ್ದು, ಈ ಪೈಕಿ 24 ಪ್ರಕರಣ ಕೊಪ್ಪ ತಾಲೂಕಿನಲ್ಲೆ ದಾಖಲಾಗಿವೆ. 79 ವರ್ಷ ವಯಸ್ಸಿನ ಒಬ್ಬರು ಮೃತಪಟ್ಟಿದ್ದು, ಉಳಿದವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇನ್ನೂ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಂಗನ ಕಾಯಿಲೆಗೆ ಕ್ಯಾಸನೂರು ಕಾಡಿನ ಕಾಯಿಲೆ(ಕೆಎಫ್‌ಡಿ) ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಹರಡಿದ ಮಂಗಗಳಿಗೆ ಕಚ್ಚಿದ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗ ಹರಡುತ್ತಿದೆ. ಮಂಗಗಳು ಸಾಯುವುದು ಈ ರೋಗದ ಮುನ್ಸೂಚನೆ. ಅರಣ್ಯಕ್ಕೆ ಹೋದ ಜನರಿಗೆ ಉಣ್ಣೆಗಳು ಕಚ್ಚಿದರೆ ಅವರಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ಕೊಪ್ಪ ತಾಲ್ಲೂಕಿನಲ್ಲಿ ಹರಡಿರುವ ಮಂಗನ ಕಾಯಿಲೆಗೆ ಮರಗಳನ್ನು ಕಡಿಯಲು ಹೋಗಿದ್ದೇ ಕಾರಣವಾಗಿದೆ. ಬೇರುಕೂಡಿಗೆ ಬಳಿ ಅರಣ್ಯ ಇಲಾಖೆ ಜಾಗದಲ್ಲಿದ್ದ ಅಕೇಷಿಯಾ ಮರಗಳನ್ನು ಕಡಿದು ಸಾಗಿಸುವ ಕೆಲಸ ನಡೆಯುತ್ತಿದೆ. ಮರ ಕಡಿಯಲು ಹೋಗಿರುವ ಜನರಿಂದಲೇ ಕಾಯಿಲೆ ಹರಡಿರಬಹುದು ಎನ್ನಲಾಗ್ತಿದೆ.

Sulekha