ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಭಾರಿ ಕುಸಿತ – 12 ವರ್ಷಗಳಲ್ಲಿ 2ನೇ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆ!
ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಕರ್ನಾಟಕದಲ್ಲಿ ಬರದ ಛಾಯೆ ಮೂಡಿದೆ. ನದಿಗಳಲ್ಲಿ , ಜಲಾಶಯಗಳಲ್ಲಿ ನೀರಿನ ಮಟ್ಟ ತುಂಬಾ ಇಳಿಕೆಯಾಗಿದೆ. ಕೆಆರ್‌ಎಸ್ ಡ್ಯಾಂನಲ್ಲಿ ಕೂಡ ನೀರಿನ ಮಟ್ಟ ಸಂಪೂರ್ಣ ಇಳಿಕೆಯಾಗಿದೆ. ಹೀಗಿದ್ದರೂ ಕೂಡ ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಆರ್‌ಎಸ್ ಡ್ಯಾಂನಲ್ಲಿ ಬರೋಬ್ಬರಿ 12 ವರ್ಷಗಳಲ್ಲಿ 2ನೇ ಬಾರಿಗೆ ನೀರಿನ ಮಟ್ಟದಲ್ಲಿ ಭಾರಿ ಕುಸಿತ ಕಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶುಕ್ರವಾರ ಕರ್ನಾಟಕ ಬಂದ್ – ಇಂದು ರಾತ್ರಿಯಿಂದ ತಮಿಳುನಾಡಿಗೆ ಬಸ್ ಸಂಚಾರ ಬಂದ್
ಕೆಆರ್‌ಎಸ್ ಡ್ಯಾಂನಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸುವಷ್ಟು ಸಾಮರ್ಥ್ಯ ಹೊಂದಿದೆ. ಆದ್ರೆ 2023ರ ಸೆಪ್ಟೆಂಬರ್ 27 ರಂದು 20.54 ಟಿಎಂಸಿ ನೀರು ಇತ್ತು. 2011ರ ಬಳಿಕ ಇದು ಎರಡನೇ ಬಾರಿ ಜಲಾಶಯದಲ್ಲಿ ನೀರಿನ ಮಟ್ಟ ಭಾರಿ ಇಳಿಕೆಯಾಗಿದೆ. ಈ ವರ್ಷ ಕೆಆರ್‌ಎಸ್‌ನಿಂದ ನಿರಂತರವಾಗಿ ನೀರು ಬಿಡುಗಡೆ ಮಾಡುತ್ತಿರುವುದರಿಂದ, ಸೆ.27ರ ವೇಳೆಗೆ ಜಲಾಶಯದಲ್ಲಿ ನೀರಿನ ಮಟ್ಟವು 97 ಅಡಿಗೆ ಕುಸಿದಿದೆ. ಕಳೆದ ವರ್ಷ ಈ ವೇಳೆಗೆ 123.92 ಅಡಿ ನೀರು ಇತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
2016ರಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಲಾಶಯದಲ್ಲಿ 14.84 ಟಿಎಂಸಿಗೆ ನೀರು ಸಂಗ್ರಹವಾಗಿತ್ತು. 2015 ಮತ್ತು 2016 ರಲ್ಲಿ ಹೊರತುಪಡಿಸಿ ಉಳಿದ ವರ್ಷಗಳಲ್ಲಿ 43 ಟಿಎಂಸಿ ನೀರು ಶೇಖರಣೆಯಾಗಿತ್ತು. 2021 ರಲ್ಲಿ 35.35 ಟಿಎಂಸಿ ನೀರು ಸಂಗ್ರಹವಾಗಿತ್ತು. 2015ರ ಸೆಪ್ಟೆಂಬರ್ 27 ರಂದು 25.1 ಟಿಎಂಸಿ ನೀರು ಇತ್ತು. ಆದರೆ ಮುಂಗಾರು ಮಳೆ ನಂತರ ನವೆಂಬರ್ ವೇಳೆಗೆ ಜಲಾಶಯದಲ್ಲಿ ಸುಮಾರು 33 ಟಿಎಂಸಿಗಳಷ್ಟು ನೀರು ಸಂಗ್ರಹವಾಗಿತ್ತು. ಇದು ಕಾವೇರಿ ಕೊಳ್ಳದ ಜನರಲ್ಲಿ ಸಂಸತ ಮೂಡಿಸಿತ್ತು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಮಾಹಿತಿ ಪ್ರಕಾರ, 2017 ರಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು. ಸೆಪ್ಟೆಂಬರ್ 27ರ ವೇಳೆಗೆ ಜಲಾಶಯದಲ್ಲಿ 28.58 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಅಕ್ಟೋಬರ್‌ನಲ್ಲಿ ಅಕಾಲಿಕ ಮಳೆಯಾದ ಪರಿಣಾಮ ಸುಮಾರು 34 ಟಿಎಂಸಿಗೆ ಏರಿಕೆ ಆಯ್ತು ಎಂದು ತಿಳಿಸಿದೆ.