ಅಮೆರಿಕ -ಇರಾನ್ ನಡುವೆ ಗುರವಾರ ಮತ್ತೊಂದು ಸುತ್ತಿನ ಮಾತುಕತೆ? – ಯುದ್ಧ ನಿಲ್ಲುತ್ತಾ? ಮುಂದುವರಿಯುತ್ತಾ?

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಇತ್ತೀಚೆಗೆ ನಡೆದ ಯುಎಸ್ ಮತ್ತು ಇರಾನ್ ನಡುವಿನ ಯುದ್ದ ಒಪ್ಪಂದ ಮಾತುಕತೆ ವಿಫಲವಾಗಿದೆ. ಅಣ್ವಸ್ತ್ರ ಕಾರ್ಯಕ್ರಮ ಕೈಬಿಡಬೇಕು ಎಂಬ ಅಮೆರಿಕದ ಷರತ್ತನ್ನು ಇರಾನ್ ನಿರಾಕರಿಸಿದ್ದು, ಮಾತುಕತೆ ಮುರಿದು ಬೀಳಲು ಪ್ರಮುಖ ಕಾರಣವಾಗಿದೆ. ಈ ನಡುವೆ ಮುಂದಿನ ವಾರ ಕದನ ವಿರಾಮ ಮುಕ್ತಾಯಗೊಳ್ಳಲಿದ್ದು, ಅದರೊಳಗೆ ಸಂಘರ್ಷ ಶಮನ ಮಾಡುವ ಗುರಿಯನ್ನು ಎರಡೂ ಕಡೆಯ ನಾಯಕರು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವೈಯಕ್ತಿಕ ಮಾತುಕತೆಗೆ ಮುಂದಾಗಿದ್ದು, ಈ ಬೆಳವಣಿಗೆಯ ಕುರಿತು ಇಬ್ಬರು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಮಾತುಕತೆ ನಡೆಸಿದ ನಿಯೋಗವೇ ಎರಡನೇ ಸುತ್ತಿನ ಮಾತುಕತೆಯಲ್ಲೂ ಭಾಗಿಯಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.ಮೊದಲ ಸುತ್ತಿನ ಚರ್ಚೆಯ ಸ್ಥಳವಾದ ಇಸ್ಲಾಮಾಬಾದ್ ಅನ್ನು ಮತ್ತೊಮ್ಮೆ ಆತಿಥೇಯ ಸ್ಥಳವಾಗಿ ಮಾಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಇಲ್ಲವೇ ಜಿನೀವಾದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ, ಇದುವರೆಗೆ ಸ್ಥಳ ಮತ್ತು ಸಮಯವನ್ನು ನಿರ್ದಿಷ್ಟವಾಗಿ ನಿರ್ಧರಿಸಿಲ್ಲ. ಗುರುವಾರ ಮಾತುಕತೆ ನಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಬಾಲಕಿಗೆ ಉರುಳಾಯ್ತು ಜೋಕಾಲಿ ಕಟ್ಟಿದ್ದ ಸೀರೆ – ಆಟವಾಡುತ್ತಿದ್ದಾಕೆ ದುರಂತ ಅಂತ್ಯ!
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮಗೆ ಇನ್ನೊಂದು ಕಡೆಯಿಂದ ಕರೆ ಬರುತ್ತಿದ್ದು, ಅವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದಿದ್ದಾರೆ. ಕದನ ವಿರಾಮ ಮುಗಿಯುವ ಮುನ್ನ ಮುಂದಿನ ದಿನಗಳಲ್ಲಿ ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಸಲು ಪಾಕಿಸ್ತಾನ ಪ್ರಸ್ತಾಪ ಮುಂದಿಟ್ಟಿದೆ ಎಂದು ಇಬ್ಬರು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಧಿಕಾರಿಗಳು, ಬೇರೆ ಪ್ರದೇಶದಲ್ಲಿ ಮಾತುಕತೆಗೆ ಪಕ್ಷಗಳು ಮನವಿ ಮಾಡಿವೆ. ಮೊದಲ ಮಾತುಕತೆ ಒಪ್ಪಂದದಲ್ಲಿ ಅಂತ್ಯವಾಗದಿದ್ದರೂ ರಾಜತಾಂತ್ರಿಕ ಪ್ರಕ್ರಿಯೆ ಪ್ರಯತ್ನದ ಭಾಗವಾಗಿದೆ ಎಂದರು.ಕದನ ವಿರಾಮ ಒಪ್ಪಂದವನ್ನು ಸಾಧಿಸುವಲ್ಲಿ ಆರಂಭಿಕ ಹಿನ್ನಡೆಯ ಬಳಿಕ ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಮೊದಲ ಸುತ್ತಿನ ಮಾತುಕತೆಯಲ್ಲಿ ಸಕಾರಾತ್ಮಕ ಪ್ರಗತಿ ಮಾತ್ರ ಕಂಡಿದ್ದು, ಮಾತುಕತೆ ಮುಗಿದ ಬಳಿಕ ಯಾವುದೇ ನಕಾರಾತ್ಮಕ ಬೆಳವಣಿಗೆ ಆಗಿಲ್ಲ. ಮುಂದಿನ ಸುತ್ತಿನ ಮಾತುಕತೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದಿದ್ದಾರೆ.

ನೋಡಿರಿ

