ರಾಜ್ಯದಲ್ಲಿ ಎರಡನೇ ಹಂತದ ಮತದಾನ ಆರಂಭ – ಬಿಸಿಗಾಳಿ ಎದುರಿಸಲು ಚುನಾವಣಾ ಆಯೋಗದಿಂದ ವಿಶೇಷ ವ್ಯವಸ್ಥೆ

ರಾಜ್ಯದಲ್ಲಿ ಎರಡನೇ ಹಂತದ ಮತದಾನ ಆರಂಭ –  ಬಿಸಿಗಾಳಿ ಎದುರಿಸಲು ಚುನಾವಣಾ ಆಯೋಗದಿಂದ ವಿಶೇಷ ವ್ಯವಸ್ಥೆ

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಮೂರನೇ ಹಂತದಲ್ಲಿ 11 ರಾಜ್ಯಗಳ 92 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಒಟ್ಟು 1,300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ ಸುಮಾರು 120 ಮಹಿಳೆಯರಾಗಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ 2ನೇ ಹಂತದ ಚುನಾವಣೆಗೆ ಕೌಂಟ್‌ ಡೌನ್‌ – ಭದ್ರವಾಗಲಿದೆ 14 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ!

ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕೋಡಿ, ದಾವಣಗೆರೆ, ಧಾರವಾಡ, ಹಾವೇರಿ, ಕೊಪ್ಪಳ, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ.

ಇನ್ನು ಉತ್ತರ ಕರ್ನಾಟಕ ಭಾಗದಲ್ಲೂ ಬಿರುಸಿನಿಂದ ಮತದಾನ ನಡೆಯುತ್ತಿದೆ.  ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ ಮತದಾನ ನಡೆಯುವ ಪ್ರದೇಶಗಳಲ್ಲಿ ಹೀಟ್‌ವೇವ್ ಎಚ್ಚರಿಕೆಯನ್ನು ನೀಡಿದ್ದು, ಉತ್ತರ ಕರ್ನಾಟಕದ ಒಳಭಾಗಗಳಲ್ಲಿ ತಾಪಮಾನ 42-44 ಡಿಗ್ರಿ ಸೆಲ್ಸಿಯಸ್ ನಷ್ಟಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮತದಾನ ನಡೆಯಲಿರುವ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಕಲಬುರಗಿ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ರೆಡ್ ಹೀಟ್ ವೇವ್ ಅಲರ್ಟ್ ನೀಡಿದೆ.

ಬಿಸಿಗಾಳಿ ಎದುರಿಸಲು ಚುನಾವಣಾ ಆಯೋಗ ಮತದಾರರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿದೆ.  ಮತದಾನ ಸಂದರ್ಭದಲ್ಲಿ ಮತದಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಬಿಸಿ ಗಾಳಿಯ ಆಘಾತದಕ್ಕೊಳಗಾಗುವವರ ಚಿಕಿತ್ಸೆಗೆ  ಆಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

Shwetha M