ಹಮಾಸ್ ಉಗ್ರರಿಗಾಗಿ ಮೂಲೆ ಮೂಲೆಯಲ್ಲೂ ಶೋಧ! – ಗಾಜಾದಲ್ಲಿ ಉಗ್ರ ಮುಖಂಡನ ಮನೆಯಲ್ಲಿ ಬಾಂಬ್ ಇಟ್ಟು ಉಡಾಯಿಸಿದ ಇಸ್ರೇಲ್
ಹಮಾಸ್ ಹಾಗೂ ಇಸೇಲ್ ನಡುವಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಮಾಸ್ ಉಗ್ರರನ್ನು ನಿರ್ಮಾನ ಮಾಡುವವರೆಗೂ ಸುಮ್ಮನೆ ಕೂರುವುದಿಲ್ಲ ಅಂತಾ ಇಸ್ರೇಲ್ ಹೇಳಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಇಸ್ರೇಲ್ ಸೇನೆ ಗಾಜಾದ ಮೂಲೆ ಮೂಲೆಯಲ್ಲೂ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಇದೀಗ ಹಮಾಸ್ ಉಗ್ರ ಸಂಘಟನೆಯ ಮುಖಂಡನ ಮನೆಯನ್ನೇ ಇಸ್ರೇಲ್ ವಾಯುಸೇನೆ ಬಾಂಬ್ ಹಾಕಿ ಉಡಾಯಿಸಿದೆ.
ಹಮಾಸ್ ಪ್ರಮುಖ ಉಗ್ರ, ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೇಹ್ ಎಂಬಾತನ ಮನೆಯನ್ನು ಇಸ್ರೇಲ್ ಸೇನೆಯು ಬಾಂಬ್ ಇಟ್ಟು ಧ್ವಂಸಗೊಳಿಸಿದೆ. “ಇಸ್ರೇಲ್ ಫೈಟರ್ ಜೆಟ್‌ಗಳು ಇಸ್ಮಾಯಿಲ್ ಹನಿಯೇಹ್ ಮನೆಯನ್ನು ಧ್ವಂಸಗೊಳಿಸಿವೆ” ಎಂದು ವಿಡಿಯೊಗಳ ಸಮೇತ ಇಸ್ರೇಲ್ ಡಿಫೆನ್ಸ್ ಫೋರ್ಸ್ ಪೋಸ್ಟ್ ಮಾಡಿದೆ. ಇದೀಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಹಣ ಹಾಕುವ ಮುನ್ನ ಪ್ರತಿ ತಿಂಗಳು 2 ಸಾವಿರ ರೂ. ನಾಡ ದೇವತೆಗೆ ಅರ್ಪಣೆ!
ಮನೆ ಧ್ವಂಸಗೊಳಿಸಿದ ಬಳಿಕ ಇಸ್ರೇಲ್ ಸೈನಿಕರು ಆ ಮನೆಯನ್ನು ಶೋಧ ಮಾಡಿದ ವಿಡಿಯೊವನ್ನು ಕೂಡ ಹಂಚಿಕೊಳ್ಳಲಾಗಿದೆ. ಆದರೆ, ಇಸ್ಮಾಯಿಲ್ ಹನಿಯೇಹ್ ಹತ್ಯೆಗೀಡಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಹಮಾಸ್ ಉಗ್ರ ಸಂಘಟನೆಯ ಹಲವು ಮುಖಂಡರನ್ನು ಇಸ್ರೇಲ್ ಹತ್ಯೆಗೈದಿದೆ.
ಅಲ್-ಶಿಫಾ ಆಸ್ಪತ್ರೆಯ ಕೆಳಗೆ ಹಮಾಸ್ ಉಗ್ರರ ಸುರಂಗವಿದೆ. ಆಸ್ಪತ್ರೆ ಮೂಲಕ ಸುರಂಗದೊಳಗೆ ಹೋಗುವುದು, ಅಲ್ಲಿಂದ ಬರುವುದು, ಆಸ್ಪತ್ರೆಯಲ್ಲಿಯೇ ದಾಳಿಗೆ ಸಂಚು ರೂಪಿಸುವುದು ಸೇರಿ ಹಲವು ಕೃತ್ಯಗಳಲ್ಲಿ ಹಮಾಸ್ ಉಗ್ರರು ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಸ್ರೇಲ್ ಸೇನೆ ಕಾರ್ಯಾಚರಣೆಗೆ ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಉಗ್ರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಹಮಾಸ್ ಉಗ್ರರಿಗೆ ಇಸ್ರೇಲ್ ಗಡುವು ನೀಡಿತ್ತು. ಆದರೆ, ಹಮಾಸ್ ಉಗ್ರರು ಇದಕ್ಕೆ ಸೊಪ್ಪು ಹಾಕದ ಕಾರಣ ಭೀಕರವಾಗಿ ದಾಳಿ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಉಂಟಾಗಿರುವ ಸಾರ್ವಜನಿಕರ ಸಾವು-ನೋವಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.