ಮೀನುಗಾರರಿಗೆ ‘ಬಜೆಟ್’ನಲ್ಲಿ ಭರ್ಜರಿ ಗಿಫ್ಟ್ – ಮೀನುಗಾರಿಕೆ ಉತ್ತೇಜನಕ್ಕೆ ಸೀ ಫುಡ್ ಪಾರ್ಕ್

ಮೀನುಗಾರರಿಗೆ ‘ಬಜೆಟ್’ನಲ್ಲಿ ಭರ್ಜರಿ ಗಿಫ್ಟ್ – ಮೀನುಗಾರಿಕೆ ಉತ್ತೇಜನಕ್ಕೆ ಸೀ ಫುಡ್ ಪಾರ್ಕ್

ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ಅವಧಿಯ ಕೊನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆ ಹಂತದಲ್ಲಿ ಮಂಡಿಸಲಾಗುತ್ತಿರುವ ಈ ಬಜೆಟ್ ಸಹಜವಾಗಿಯೇ ಜನಪ್ರಿಯ ಬಜೆಟ್ ಆಗಿದೆ. ಕಳೆದ ಬಾರಿ ಸಿಎಂ ಬೊಮ್ಮಾಯಿ 2 ಲಕ್ಷದ 65 ಸಾವಿರದ 720 ಕೋಟಿ ರೂಪಾಯಿ ಗಾತ್ರದ ಬಜೆಟ್​ ಮಂಡಿಸಿದ್ದರು. ಈ ವರ್ಷ 3.09 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್​ನಲ್ಲಿ ಈ ಬಾರಿ ಮೀನುಗಾರರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಮೀನಿನ ರಫ್ತು ಮತ್ತು ಮೌಲ್ಯವರ್ಧನೆಗಾಗಿ ಬೈಂದೂರು ತಾಲೂಕಿನ ಕಂಬದಕೋಣೆಯಲ್ಲಿ ಸೀ ಫುಡ್ ಪಾರ್ಕ್ (Seafood Park) ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು.

ರಾಜ್ಯದ 8 ಮೀನುಗಾರಿಕೆ ಬಂದರುಗಳ ನ್ಯಾವಿಗೇಷನ್ ಚಾನೆಲ್ ಗಳಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಟೆಂಡರ್ ಕರೆಯಲಾಗಿದೆ. ಇದರಿಂದ ಮೀನುಗಾರಿಕೆ ದೋಣಿಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ. ಸೀಗಡಿ ಉತ್ಪನ್ನಗಳ ರಫ್ತು ಪ್ರೋತ್ಸಾಹಿಸಲು ಕೇಂದ್ರ ಆಯವ್ಯಯದಲ್ಲಿ ರಫ್ತು ಸುಂಕವನ್ನು ಕಡಿಮೆ ಮಾಡಲಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕಲ್ಯಾಣ ಕರ್ನಾಟಕ ಭಾಗ  ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೀಗಡಿ ಕೃಷಿ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವುದು.

ಆಳಸಮುದ್ರ ಮೀನುಗಾರಿಕೆಯನ್ನು ಇನ್ನಷ್ಟು ಉತ್ತೇಜಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ (Deep sea fishing boats) ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ, ಮತ್ಸ್ಯ ಸಿರಿ ಎಂಬ ವಿಶೇಷ ಯೋಜನೆಯನ್ನು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರೂಪಿಸಲಾಗಿದೆ. ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ದೋಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.

suddiyaana