ಸಾಯುವ ದಿನ ಮೊದಲೇ ಗೊತ್ತಾಗುತ್ತೆ! – ಎಷ್ಟು ದಿನ ಬದುಕುತ್ತೀರಿ ಅಂತ ಗೊತ್ತಾಗ್ಬೇಕಾ?
ಹುಟ್ಟು ಅನಿರೀಕ್ಷಿತ, ಸಾವು ಖಚಿತ. ಇದು ಎಲ್ಲರಿಗೂ ಗೊತ್ತಿರೋ ವಿಚಾರನೇ. ಆದ್ರೆ ಒಬ್ಬ ಮನುಷ್ಯ ಯಾವಾಗ ಸಾಯ್ತಾನೆ ಅಂತಾ ಹೇಳೋಕೆ ಸಾಧ್ಯ ಇಲ್ಲ. ಕೆಟ್ಟ ಕನಸು ಬೀಳುವುದು, ಕೆಟ್ಟ ಘಟನೆಗಳಾದ್ರೆ ಅಪಶಕುನ, ಏನೋ ಗಂಡಾಂತರ ಇದೆ ಅಂತಾ ಊಹೆ ಮಾಡುತ್ತಾರೆ. ಆದ್ರೆ ಇನ್ನು ಮುಂದೆ ಒಬ್ಬ ವ್ಯಕ್ತಿ ಯಾವಾಗ ಸಾಯುತ್ತಾನೆ ಅನ್ನೋ ಸಂಗತಿಯನ್ನು ಪತ್ತೆಹಚ್ಚಲಾಗುತ್ತಂತೆ. ಅದಕ್ಕಾಗಿ ಹೊಸ ತಂತ್ರಜ್ಞಾನವೊಂದನ್ನು ಕಂಡುಹಿಡಿಯಲಾಗಿದೆ.
ಇದನ್ನೂ ಓದಿ: ಇದು ವಾಷಿಂಗ್ ಮೆಷಿನ್ ಅಲ್ಲ.. ಕೋಳಿ ಗೂಡು..! – ಡೋರ್ ಓಪನ್ ಮಾಡಿದ್ರೆ ಬರುತ್ತೆ ಕೋಳಿಗಳು!
ಹೌದು, ಈಗ ಎಲ್ಲೆಡೆ ಆರ್ಟಿಫಿಶಿಯಲ್ ಇಂಟಿಲೆಜೆನ್ಸ್ ಹಾಗೂ ಚಾಟ್ ಜಿಪಿಟಿ ಸದ್ದು. ಇದ್ರಿಂದ ಒಳಿತು ಎಷ್ಟಿದ್ಯೋ, ಅಷ್ಟೇ ಕೆಡುಕು ಇದೆ. ಊಹೆಗೂ ನಿಲುಕದ ತಂತ್ರಜ್ಞಾನ ಈಗಾಗಲೇ ಹಲವು ಬಾರಿ ಅಚ್ಚರಿಗೆ ಕಾರಣವಾಗ್ತಿದೆ. ಇದರ ಜೊತೆಗೆ ಆತಂಕವೂ ಹೆಚ್ಚಾಗುತ್ತಿದೆ. AI ತಂತ್ರಜ್ಞಾನ ಬಳಸಿ ದಿಗ್ಗಜರ ಸೆಲ್ಫಿ ಫೋಟೋ ಸೃಷ್ಟಿಸಿರೋದು ಈಗಾಗ್ಲೇ ವೈರಲ್ ಆಗಿದೆ. ಇದೀಗ ಈ ತಂತ್ರಜ್ಞಾನ ಬಳಸಿಕೊಂಡು ಡೆನ್ಮಾರ್ಕ್ ನ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧಕರು ಸಾವಿನ ಮುನ್ಸೂಚಕವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. “ಡೂಮ್ ಕ್ಯಾಲ್ಕುಲೇಟರ್ʼ ಎಂಬ ಸಾಧನವೊಂದನ್ನು ಕಂಡುಹಿಡಿದಿದ್ದಾರೆ.
ಈ ಸಾಧನದಿಂದ ವ್ಯಕ್ತಿಯ ಜೀವಿತಾವಧಿಯ ಬಗ್ಗೆ ಮಾಹಿತಿ ಪಡೆಯಬಹುದಂತೆ. ಒಬ್ಬ ವ್ಯಕ್ತಿ ನಾಲ್ಕು ವರ್ಷಗಳಲ್ಲಿ ಸಾಯುತ್ತಾನೋ ಅಥವಾ ನಂತರ ಬದುಕುತ್ತಾನೋ ಅಂತಾ ಶೇ 78ರಷ್ಟು ನಿಖರತೆಯ ಮಾಹಿತಿಯನ್ನು ಇದು ನೀಡುತ್ತದೆ. ಈ ತಂತ್ರಜ್ಞಾನದ ತಿರುಳು ಲೈಫ್ 2ವೆಕ್ (life2vec) ಎಂಬ ಯಂತ್ರ-ಕಲಿಕೆ ಟ್ರಾನ್ಸ್ ಫಾರ್ಮರ್ ಮಾದರಿಯಲ್ಲಿದೆ. ಚಾಟ್ ಜಿಪಿಟಿಯಂಥ ಟ್ರಾನ್ಸ್ಫಾರ್ಮರ್ ಮಾದರಿಗಳಂತೆಯೇ ಕಾರ್ಯನಿರ್ವಹಿಸುತ್ತಿರುವ ಲೈಫ್ 2ವೆಕ್ ಡೆನ್ಮಾರ್ಕ್ನಲ್ಲಿ 6 ದಶಲಕ್ಷಕ್ಕೂ ಹೆಚ್ಚು ವ್ಯಕ್ತಿಗಳ ಮಾದರಿಯಿಂದ ವಯಸ್ಸು, ಆರೋಗ್ಯ ಸ್ಥಿತಿ, ಶೈಕ್ಷಣಿಕ ಹಿನ್ನೆಲೆ, ಉದ್ಯೋಗ ಇತಿಹಾಸ, ಆದಾಯ ಮತ್ತು ವಿವಿಧ ಜೀವನ ಘಟನೆಗಳನ್ನು ಒಳಗೊಂಡ ಡೇಟಾವನ್ನು ವಿಶ್ಲೇಷಿಸಿದೆ.
ಡ್ಯಾನಿಶ್ ಸರ್ಕಾರವು ಒದಗಿಸಿದ ಡೇಟಾವು ಈ ಅಲ್ಗಾರಿದಮ್ ನ ಆಧಾರವಾಗಿದೆ. “ಜೀವನ-ಘಟನೆಗಳ ಅನುಕ್ರಮವನ್ನು ಬಳಸಿ ಮಾನವ ಜೀವನದ ಬಗ್ಗೆ ಊಹಿಸುವುದು ಈ ತಂತ್ರಜ್ಞಾನವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಆತನ ಜೀವನದಲ್ಲಿ ಸಂಭವಿಸುವ ಘಟನೆಗಳನ್ನು ಅನುಕ್ರಮವಾಗಿ ಪ್ರತಿನಿಧಿಸುವ ಮೂಲಕ ಮಾನವ ಜೀವನವನ್ನು ವಿಶ್ಲೇಷಿಸಲು ನಾವು ಚಾಟ್ ಜಿಪಿಟಿಯ ತಂತ್ರಜ್ಞಾನ ಬಳಸುತ್ತೇವೆ.” ಎಂದು ಡಿಸೆಂಬರ್ 2023ರ ಅಧ್ಯಯನದ ಪ್ರಮುಖ ಸಂಶೋಧಕ ಸುನೆ ಲೆಹ್ಮನ್ , ದಿ ನ್ಯೂಯಾರ್ಕ್ ಟೈಮ್ಸ್ಗೆ ಮಾಹಿತಿ ನೀಡಿದ್ದಾರೆ.
2008ರಿಂದ 2020ರವರೆಗೆ ವಿವಿಧ ಲಿಂಗ ಮತ್ತು ವಯೋಮಾನದ ಆರು ಮಿಲಿಯನ್ ಡ್ಯಾನಿಷ್ ಜನಸಂಖ್ಯೆಯ ಮಾಹಿತಿಯನ್ನು ಲೈಫ್ 2ವೆಕ್ಗೆ ಅಳವಡಿಸಲಾಗಿತ್ತು. ಈ ವ್ಯಕ್ತಿಗಳ ಪೈಕಿ ಯಾರೆಲ್ಲ ಜನವರಿ 1, 2016ರ ನಂತರ ಕನಿಷ್ಠ ನಾಲ್ಕು ವರ್ಷಗಳ ಕಾಲ ಬದುಕುವ ಸಾಧ್ಯತೆಯಿದೆ ಎಂಬುದನ್ನು ಈ ಎಐ ವ್ಯವಸ್ಥೆ ನಿರ್ಣಯಿಸಿತ್ತು. ಈ ಎಐ ಆವಿಷ್ಕಾರವು ನಿಮ್ಮ ವಯಸ್ಸು, ಆರೋಗ್ಯ, ಅಭ್ಯಾಸಗಳು, ಕುಟುಂಬ ಇತಿಹಾಸ ಮತ್ತು ಜೀವನಶೈಲಿ ಸೇರಿದಂತೆ ವ್ಯಾಪಕ ಶ್ರೇಣಿಯ ಅಂಶಗಳನ್ನು ವಿಶ್ಲೇಷಿಸುತ್ತದೆ. ಅಲ್ಲದೆ ಈ ಉಪಕರಣವು ನಿರ್ದಿಷ್ಟ ವ್ಯಕ್ತಿಯ ಪ್ರೊಫೈಲ್ ಗೆ ಅನುಗುಣವಾಗಿ ವೈಯಕ್ತಿಕಗೊಳಿಸಿದ ಸಲಹೆ ಮತ್ತು ಶಿಫಾರಸುಗಳನ್ನು ನೀಡುತ್ತದೆ. ಅಲ್ಲದೆ ನೀವು ಮತ್ತಷ್ಟು ಆರೋಗ್ಯಕರವಾಗಿ ಹೇಗೆ ಬದುಕಬಹುದು ಎಂಬ ಮಾಹಿತಿಯನ್ನು ಕೂಡ ನೀಡುತ್ತದೆ ಎಂದು ಸಂಶೋಧಕರು ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ.