“ಬೊಮ್ಮಾಯಿ ಅಂಕಲ್ ಸ್ಯಾಂಕಿ ಮೇಲ್ಸೇತುವೆ ಬೇಡ” – 2 ಸಾವಿರ ಮಕ್ಕಳಿಂದ ಸಿಎಂಗೆ ಪತ್ರ

“ಬೊಮ್ಮಾಯಿ ಅಂಕಲ್ ಸ್ಯಾಂಕಿ ಮೇಲ್ಸೇತುವೆ ಬೇಡ” – 2 ಸಾವಿರ ಮಕ್ಕಳಿಂದ ಸಿಎಂಗೆ ಪತ್ರ

ಬೆಂಗಳೂರಿನ ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆ ಯೋಜನೆ ಪರಿಸರಕ್ಕೆ ಮಾರಕವಾಗಿದೆ ಎಂದು ಅಲ್ಲಿನ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಯೋಜನೆಯಿಂದ ಬಿಬಿಎಂಪಿ ಮಾತ್ರ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಬೆಂಗಳೂರಿನ ಕೆಲವು ನಿವಾಸಿಗಳು ಆನ್‌ಲೈನ್‌ ಅರ್ಜಿ ಅಭಿಯಾನ ಆರಂಭಿಸಿದ್ದರು. ಇದೀಗ ಈ ಅಭಿಯಾನಕ್ಕೆ ಸುಮಾರು 2 ಸಾವಿರ ಮಕ್ಕಳು ಸಾಥ್ ನೀಡಿದ್ದು, “ಆತ್ಮೀಯ ಬೊಮ್ಮಾಯಿ ಅಂಕಲ್, ದಯವಿಟ್ಟು ನಮ್ಮ ಪರಿಸರವನ್ನು ರಕ್ಷಿಸಿ” ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಸಿದ್ಧಗಂಗಾ ಶ್ರೀಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆ – ಲಕ್ಷಾಂತರ ಭಕ್ತರಿಗೆ ಭರ್ಜರಿ ಭೋಜನ!

ಪರಿಸರವಾದಿಗಳು, ಸ್ಥಳೀಯರ ಜೊತೆಗೆ ಈಗ ಶಾಲಾ ಮಕ್ಕಳು ಸಹ ಸ್ಯಾಂಕಿ ಕೆರೆ ಉಳಿವಿಗಾಗಿ ಪಣ ತೊಟ್ಟಿದ್ದಾರೆ. ಪತ್ರದಲ್ಲಿ, ಆತ್ಮೀಯ ಬೊಮ್ಮಾಯಿ ಅಂಕಲ್, ದಯವಿಟ್ಟು ನಮ್ಮ ಪರಿಸರವನ್ನು ರಕ್ಷಿಸಿ. ನಾವು ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಕಲಿಯಲು ಮತ್ತು ಒಟ್ಟಿಗೆ ಆಡಲು ಬಯಸುತ್ತೇವೆ” ಎಂದು ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಕೈಬರಹದ ಪೋಸ್ಟ್‌ಕಾರ್ಡ್‌ಗಳನ್ನು ಕಳುಹಿಸಿದ್ದಾರೆ.

ನಗರದಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಅದೇ ರಸ್ತೆಯ ಭಾಷ್ಯಂ ವೃತ್ತದಿಂದ ಮಲ್ಲೇಶ್ವರಂ 18ನೇ ಕ್ರಾಸ್‌ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಸರ್ಕಾರ ಟೆಂಡರ್ ಕರೆದಿತ್ತು. ಇದೀಗ ಕಾಮಗಾರಿ ಪ್ರಾರಂಭಿಸಿದೆ. ಈ ಯೋಜನೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಂತ ರಾಜಧಾನಿಯ ಪಾರಂಪರಿಕ 40 ಮರಗಳಿಗೆ ಕೊಡಲಿ ಹಾಕಲು ನಿರ್ಧರಿಸಲಾಗಿದೆ. ಇದಕ್ಕೆ ಪರಿಸರವಾದಿಗಳು ಸೇರಿದಂತೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

‘ಮಕ್ಕಳು ಪ್ರಾರ್ಥನೆ ಸಲ್ಲಿಸುವ, ಕ್ರೀಡಾ ಚಟುವಟಿಕೆ ನಡೆಸುವ ಮತ್ತು ಊಟ ಮಾಡುವ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಸಮೀಪವಿರುವ ಪೂರ್ಣಪ್ರಜ್ಞ ಶಾಲೆಗೂ ಸಂಕಷ್ಟ ಉಂಟಾಗಲಿದ್ದು, ವಿದ್ಯಾರ್ಥಿಗಳು ನಿತ್ಯವೂ ಕ್ರೀಡಾ ಚಟುವಟಿಕೆಗೆ ಮೈದಾನಕ್ಕೆ ಹೋಗಲು ಸಮಸ್ಯೆಯಾಗಲಿದೆ. ನಮಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

suddiyaana