ವಿಜಯ್ ಮಲ್ಯ ಒಡೆತನದ ಸಂಪೂರ್ಣ ಆಸ್ತಿ ಜಪ್ತಿ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ!
![ವಿಜಯ್ ಮಲ್ಯ ಒಡೆತನದ ಸಂಪೂರ್ಣ ಆಸ್ತಿ ಜಪ್ತಿ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ!](https://suddiyaana.com/wp-content/uploads/2023/03/Malya.jpg)
ಸಾಲ ಮಾಡಿಯಾದ್ರೂ ತುಪ್ಪ ತಿನ್ನೋ ಅನ್ನೋ ಕೆಟಗರಿಯ ವಿಜಯ್ ಮಲ್ಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದಾನೆ. ಇದೀಗ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ಇದ್ದ ಅಡೆತಡೆಗಳು ನಿವಾರಣೆಯಾಗಿದೆ.
ವಂಚನೆ ಪ್ರಕರಣದಲ್ಲಿ ತನ್ನನ್ನ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ ಮುಂಬೈ ಕೋರ್ಟ್‌ನ ನಿರ್ಧಾರವನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಭಾರತದ ಬ್ಯಾಂಕ್‌ಗಳ ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ಆಘಾತ ನೀಡಿದೆ. ವಿಜಯ್ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ್ದ ಮುಂಬೈ ಕೋರ್ಟ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೂಡ ಅನುಮತಿ ನೀಡಿತ್ತು. ಮುಂಬೈ ಕೋರ್ಟ್‌ನ ಈ ಆದೇಶದ ವಿರುದ್ಧ ವಿಜಯ್ ಮಲ್ಯ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಅದರೆ, ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್‌ನಲ್ಲೂ ರಿಲೀಫ್ ಸಿಕ್ಕಿಲ್ಲ. ವಿಜಯ್ ಮಲ್ಯ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡುವುದರೊಂದಿಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಸರಾಗವಾಗಿದೆ.
ಇದನ್ನೂ ಓದಿ : ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ! -‘ಮೆಸ್ಸಿ ನಿನಗಾಗಿ ಕಾಯುತ್ತಿದ್ದೇವೆ’ ಎಂದು ಜೀವ ಬೆದರಿಕೆ
ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಮುಂಬೈ ಕೋರ್ಟ್ ಘೋಷಣೆ ಮಾಡಿದ ಅದರ ಪ್ರಕ್ರಿಯೆ ಭಾಗವಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ಆದರೆ, ತಮ್ಮನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದ ಮುಂಬೈ ಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವುದರೊಂದಿಗೆ ಮಲ್ಯರನ್ನು ಸುಪ್ರೀಂ ಕೋರ್ಟ್ ಕೂಡ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ್ದು ಮಾತ್ರವಲ್ಲದೆ, ಅವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳೋದಕ್ಕೂ ಅನುಮತಿ ನೀಡಿದಂತಾಗಿದೆ. ಒಂದೇ ಅರ್ಜಿಯ ನಿರ್ಧಾರದೊಂದಿಗೆ ಮಲ್ಯಗೆ ಎರಡು ದೊಡ್ಡ ಶಾಕ್ ಸಿಕ್ಕಿದೆ. ಒಂದೆಡೆ ಆರ್ಥಿಕ ಅಪರಾಧಿಯಾಗಿ ಅವರು ಉಳಿಯಲಿದ್ದರೆ, ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಮಲ್ಯ ಪರ ವಕೀಲರನ್ನು ಹಲವು ವಿಚಾರದಲ್ಲಿ ಪ್ರಶ್ನೆ ಮಾಡಿತು. ಈ ವೇಳೆ ತಮ್ಮ ಕಕ್ಷಿದಾರ ಈ ಕುರಿತಾಗಿ ಯಾವುದೇ ರೀತಿಯ ಸಂಪರ್ಕದಲ್ಲಿಲ್ಲ ಎಂದರು. ಇದರ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡುವ ತೀರ್ಮಾನ ಮಾಡಿತು. ಈ ವಿಚಾರದಲ್ಲಿ ಅರ್ಜಿದಾರರಿಂದ ಯಾವುದೇ ಸೂಚನೆಗಳನ್ನು ಪಡೆಯುತ್ತಿಲ್ಲ ಎಂದು ಮಲ್ಯ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ನಂತರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿದಾರರು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದರು. ಈ ಹೇಳಿಕೆಯನ್ನು ಪರಿಗಣಿಸಿ, ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಪ್ರಾಸಿಕ್ಯೂಷನ್ ಮಾಡದಿರುವ ಅರ್ಜಿಯನ್ನು ವಜಾಗೊಳಿಸಿತು.
2019ರ ಜನವರಿ 5 ರಂದು ಬಾಂಬೆ ಹೈಕೋರ್ಟ್‌ನ ವಿಶೇಷ ಸೆಲ್ ನೀಡಿದ್ದ ತೀರ್ಪಿನಲ್ಲಿ ವಿಜಯ್ ಮಲ್ಯ ಅವರನ್ನು ಪರಾರಿ ಎಂದು ಘೋಷಣೆ ಮಾಡಿತ್ತು. ಪರಾರಿ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿಯನ್ನು ಕೋರ್ಟ್ ಫುಗೆಟಿವ್ ಅಥವಾ ಆರ್ಥಿಕ ಅಪರಾಧ ಮಾಡಿ ಪರಾರಿ ಎಂದು ಘೋಷಣೆ ಮಾಡಿದ್ದಲ್ಲಿ, ತನಿಖಾ ಸಂಸ್ಥೆಗಳಿಗೆ ಅವರ ಆಸ್ತಿಯನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿರುತ್ತದೆ. 9 ಸಾವಿರ ಕೋಟಿ ರೂಪಾಯಿ ಸಾಲ ಮಾಡಿ, 2016ರಲ್ಲಿ ವಿಜಯ್ ಮಲ್ಯ ಇಂಗ್ಲೆಂಡ್‌ಗೆ ಪರಾರಿಯಾಗಿದ್ದರು.