ಆನ್‌ಲೈನ್ ಪೇಮೆಂಟ್ ನಡುವೆ ಕ್ಯಾಶ್ ವ್ಯವಹಾರ ಹೆಚ್ಚಳ – ಜನ ಹಣವನ್ನ ಕೈಯಲ್ಲಿ ಯಾಕೆ ಇಟ್ಟುಕೊಳ್ಳುತ್ತಿದ್ದಾರೆ ಗೊತ್ತಾ?

ಎಸ್‌ಬಿಐನ ಇತ್ತೀಚಿನ ಅಧ್ಯಯನ ವರದಿಯು ಒಂದು ಸ್ವಾರಸ್ಯಕರ ಸಂಗತಿಯನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಯುಪಿಐ ಮತ್ತು ಇತರ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದರೂ, ನಗದು ಚಲಾವಣೆಯೂ ಏಕಕಾಲದಲ್ಲಿ ಹೆಚ್ಚುತ್ತಿದೆ. ಇದು ‘ಹೈಬ್ರಿಡ್ ಸಮತೋಲನ’ವನ್ನು ಸೃಷ್ಟಿಸುತ್ತಿದೆ. ಈ ವರದಿ ಪ್ರಕಾರ, ಚಲಾವಣೆಯಲ್ಲಿರುವ ನಗದು 2026ರಲ್ಲಿ ₹41.6 ಟ್ರಿಲಿಯನ್‌ಗೆ ತಲುಪಿದ್ದು, 11.9% ಬೆಳವಣಿಗೆ ಕಂಡಿದೆ. 2016ರ ನೋಟು ಅಮಾನ್ಯೀಕರಣದ ನಂತರ ಇದು ಅತಿ ಹೆಚ್ಚಿನ ಬೆಳವಣಿಗೆಯಾಗಿದೆ. ಇದೇ ಸಮಯದಲ್ಲಿ, ಯುಪಿಐ ವಹಿವಾಟುಗಳ ಮೌಲ್ಯ ₹314 ಟ್ರಿಲಿಯನ್‌ಗೆ (20.6% ಹೆಚ್ಚಳ) ಮತ್ತು ವಹಿವಾಟುಗಳ ಸಂಖ್ಯೆ 241.6 ಬಿಲಿಯನ್‌ಗೆ (30% ಹೆಚ್ಚಳ ಏರಿದೆ.
ಎಸ್‌ಬಿಐ ವರದಿಯು ಈ ದ್ವಿಮುಖ ಬೆಳವಣಿಗೆಯನ್ನು ‘ಕ್ಯಾಶ್ ಪ್ಯಾರಡಾಕ್ಸ್’ ಎಂದು ಕರೆಯುತ್ತದೆ. ಭಾರತಕ್ಕೆ ನಗದು ಮತ್ತು ಡಿಜಿಟಲ್ ಪಾವತಿ ಎರಡೂ ಅನಿವಾರ್ಯ ಎಂದು ವರದಿ ಹೇಳುತ್ತದೆ. ಇವೆರಡೂ ಒಂದಕ್ಕೊಂದು ಪರ್ಯಾಯವಲ್ಲ, ಬದಲಾಗಿ ಪರಸ್ಪರ ಪೂರಕವಾಗಿ ಬೆಳೆಯುತ್ತಿವೆ. ವಿಶೇಷವಾಗಿ, ಸಣ್ಣ ಮೊತ್ತದ ವಹಿವಾಟುಗಳಲ್ಲಿ ಯುಪಿಐ ಪ್ರಾಬಲ್ಯ ಹೊಂದಿದೆ. ವರದಿಯ ಪ್ರಕಾರ, ವ್ಯಾಪಾರಿಗಳಿಗೆ ಮಾಡುವ ಪಾವತಿಗಳಲ್ಲಿ (P2M) ಸುಮಾರು 86% ಮತ್ತು ವ್ಯಕ್ತಿಗಳ ನಡುವಿನ ಪಾವತಿಗಳಲ್ಲಿ ( ಸುಮಾರು 60% ₹500 ಕ್ಕಿಂತ ಕಡಿಮೆ ಮೊತ್ತದ್ದಾಗಿವೆ. ಅದೇ ಸಮಯದಲ್ಲಿ, ಜನರು ಅನೌಪಚಾರಿಕ ಅಗತ್ಯಗಳಿಗಾಗಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ನಗದನ್ನು ಅವಲಂಬಿಸಿದ್ದಾರೆ.
ನೋಟುಗಳ ಚಲಾವಣೆಗೆ ಬಂದರೆ, ಹೆಚ್ಚಿನ ಮೌಲ್ಯದ ನೋಟುಗಳದ್ದೇ ಸಿಂಹಪಾಲು. ಒಟ್ಟು ನಗದು ಮೌಲ್ಯದ ಸುಮಾರು 86% ₹500 ಮುಖಬೆಲೆಯ ನೋಟುಗಳೇ ಇವೆ. ಆದಾಗ್ಯೂ, ಸಣ್ಣ ಮೌಲ್ಯದ ನೋಟುಗಳ ಚಲಾವಣೆ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ನೀಡಿದ ಸೂಚನೆಯ ನಂತರ, ₹100 ನೋಟುಗಳ ಪಾಲು ಮಾರ್ಚ್ 2025ರಲ್ಲಿ 6.2% ಇದ್ದದ್ದು, ಮಾರ್ಚ್ 2026ರಲ್ಲಿ 8.2%ಕ್ಕೆ ಏರಿದೆ. ಇದೇ ವೇಳೆ, ಭಾರತದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಇನ್ನೂ ಆರಂಭಿಕ ಹಂತದಲ್ಲಿದೆ. ಕೇವಲ ₹1,016 ಕೋಟಿ ಮೌಲ್ಯದ ಸಿಬಿಡಿಸಿ ಮಾತ್ರ ಚಲಾವಣೆಯಲ್ಲಿದ್ದು, ಇದು ಒಟ್ಟು ನಗದು ಚಲಾವಣೆಯ ಕೇವಲ 0.02% ಆಗಿದೆ. ‘ಯುಪಿಐ ಜನಪ್ರಿಯವಾಗುತ್ತಿದ್ದರೂ, ಹಣವೇ ಈಗಲೂ ಕಿಂಗ್’ ಎಂದು ಹೇಳುವ ಎಸ್‌ಬಿಐ ವರದಿ, ಆರ್ಥಿಕತೆ ಮತ್ತಷ್ಟು ವ್ಯವಸ್ಥಿತಗೊಂಡಂತೆ ನಗದು ಮತ್ತು ಡಿಜಿಟಲ್ ಪಾವತಿಗಳು ಒಟ್ಟಿಗೆ ಬೆಳೆಯಲಿವೆ ಎಂದು ಭವಿಷ್ಯ ನುಡಿದಿದೆ.

ನೋಡಿರಿ

