ಅರ್ಜೆಂಟೀನಾ ವಿರುದ್ಧ ಗೆಲುವು.. ಸೌದಿಯಲ್ಲಿ ಸರ್ಕಾರಿ ರಜೆ
ಮೆಸ್ಸಿಗೆ ಮುಖಭಂಗ.. ಸಾಕರ್ ಶಾಕ್.. ಸೌದಿ ಸೆಲೆಬ್ರೇಷನ್

ಅರ್ಜೆಂಟೀನಾ ವಿರುದ್ಧ ಗೆಲುವು.. ಸೌದಿಯಲ್ಲಿ ಸರ್ಕಾರಿ ರಜೆಮೆಸ್ಸಿಗೆ ಮುಖಭಂಗ.. ಸಾಕರ್ ಶಾಕ್.. ಸೌದಿ ಸೆಲೆಬ್ರೇಷನ್

ಕತಾರ್: ಫುಟ್ಬಾಲ್ ಅನ್ನೋ ಕ್ರೀಡೆಯೇ ಹಾಗೆ. ಅಲ್ಲಿ ಯಾವುದನ್ನೂ ಕೂಡ ಊಹಿಸೋಕೆ ಸಾಧ್ಯವಿಲ್ಲ. ಹೀಗೇ ಆಗುತ್ತೆ ಅಂತಾ ಭವಿಷ್ಯ ನುಡಿಯೋಕೆ ಆಗುವುದಿಲ್ಲ. ವಿಜಯಲಕ್ಷ್ಮೀ ಆಟದ ಕೊನೆಯ ಸೆಕುಂಡ್​ವರೆಗೂ ಚಂಚಲೆಯಾಗಿಯೇ ಇರುತ್ತಾಳೆ. ಎಂಥಾ ಘಟಾನುಘಟಿ ತಂಡಗಳೇ ಆದ್ರೂ, ಅದೆಷ್ಟೇ ಸ್ಟಾರ್ ಆಟಗಾರರನ್ನ ಹೊಂದಿದ್ರೂ ಬಾಲಂಗೋಚಿ ಟೀಮ್​ಗಳ ಎದುರೂ ಕೂಡ ಮಣ್ಣು ಮುಕ್ಕಿ ಬಿಡುತ್ತೆ.

 

ನಿನ್ನೆ ಕತಾರ್​ ವಿಶ್ವಕಪ್​ ಟೂರ್ನಿಯಲ್ಲಿ ನಡೆದಿದ್ದು ಕೂಡ ಇದೇ. ಫಿಫಾ ರ್ಯಾಂಕಿಂಗ್​ನಲ್ಲಿ ಮೂರನೇ ಸ್ಥಾನದಲ್ಲಿರೋ ಅರ್ಜೆಂಟೀನಾ ತಂಡವನ್ನ 51ನೇ ರ್ಯಾಂಕಿಂಗ್​ನ ಸೌದಿ ಅರೇಬಿಯಾ 2-1 ಗೋಲ್​ಗಳಿಂದ ಮಣಿಸಿತ್ತು. ಪಂದ್ಯದ ಮೊದಲ ಅವಧಿಯಲ್ಲಿ ಮೆಸ್ಸಿ ಪೆನಾಲ್ಟಿ ಕಿಕ್ ಮೂಲಕ ಒಂದು ಗೋಲ್ ಬಾರಿಸಿದ್ದರು. ಆದರೆ, ಮ್ಯಾಚ್​ನ ಎರಡನೇ ಅವಧಿಯಲ್ಲಿ ಸೌದಿ ತಂಡ ಮೇಲಿಂದ ಮೇಲೆ ಎರಡು ಗೋಲ್​ಗಳನ್ನ ಬಾರಿಸುವ ಮೂಲಕ ಅರ್ಜೆಂಟೀನಾಗೆ ಶಾಕ್ ಕೊಟ್ಟಿತ್ತು. ಕೊನೆಯ ಕ್ಷಣದವರೆಗೂ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಾಗರರು ಅದೆಷ್ಟೇ ಹರಸಹಾಸ ಪಟ್ರೂ ಮತ್ತೊಂದು ಗೋಲ್ ದಾಖಲಿಸೋಕೆ ಸಾಧ್ಯವಾಗಿಲ್ಲ. ಪುಟ್ಬಾಲ್ ಜಗತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಲ್ಫ್​​ ರಾಷ್ಟ್ರವೊಂದು ಅರ್ಜೆಂಟೀನಾ ತಂಡವನ್ನ ಮಣಿಸಿದ ಹಗ್ಗಳಿಕೆ ಸೌದಿ ಅರೇಬಿಯಾದ್ದು. ಇದೇ ಖುಷಿಗೆ ಸೌದಿ ದೊರೆ ಕಿಂಗ್ ಸಲ್ಮಾನ್ ಇಂದು ಇಡೀ ದೇಶಕ್ಕೆ ಸರ್ಕಾರಿ ರಜೆ ಘೋಷಿಸಿದ್ದಾರೆ.  ಸರ್ಕಾರಿ, ಖಾಸಗಿ ಸೇರಿ ಎಲ್ಲಾ ಕಚೇರಿಗಳು ಕೂಡ ಇಂದು ಸೌದಿಯಲ್ಲಿ ಬಂದ್ ಆಗಿವೆ. ಶಾಲೆ, ಕಾಲೇಜುಗಳಿಗೆ ಕೂಡ ರಜೆ ಘೋಷಿಸಲಾಗಿದೆ. ದೇಶಾದ್ಯಂತ ನಿನ್ನೆಯ ಐತಿಹಾಸಿಕ ಗೆಲುವನ್ನ ಸಂಭ್ರಮಿಸಲಾಗುತ್ತಿದೆ. ಸೌದಿ ಫುಟ್ಬಾಲ್ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಮತ್ತೊಂದೆಡೆ ಅರ್ಜೆಂಟೀನಾ ಅಭಿಮಾನಿಗಳು ನಿನ್ನೆಯ ಶಾಕ್​ನಿಂದ ಇನ್ನೂ ಕೂಡ ಹೊರಬಂದಿಲ್ಲ. ಲಿಯೋನೆಲ್ ಮೆಸ್ಸಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ಮಧ್ಯೆ, ನಿನ್ನೆಯ ಶಾಕಿಂಗ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರೋ ಮೆಸ್ಸಿ, ಮುಂದಿನ ಪಂದ್ಯದಲ್ಲಿ ಮೆಕ್ಸಿಕೋ ತಂಡವನ್ನ ಸೋಲಿಸೋಕೆ ಶಕ್ತಿಮೀರಿ ಪ್ರಯತ್ನಿಸುತ್ತೇವೆ. ನಮಗೆ ನಮ್ಮ ಮೇಲೆ ವಿಶ್ವಾಸ ಇದೆ. ಅಭಿಮಾನಿಗಳು ಕೂಡ ನಮ್ಮೆ ಮೇಲಿನ ನಂಬಿಕೆ ಕಳೆದುಕೊಳ್ಳಬಾರದು ಅಂತಾ ಮನವಿ ಮಾಡಿದ್ದಾರೆ.

suddiyaana