ವಿಮಾನದಲ್ಲಿ ತಾಂತ್ರಿಕ ದೋಷ – ಟೈಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ

ವಿಮಾನದಲ್ಲಿ ತಾಂತ್ರಿಕ ದೋಷ – ಟೈಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ

ಅಹಮದಾಬಾದ್‌ನಲ್ಲಿ ವಿಮಾನ ಪತನಗೊಂಡಿದ್ದು 241 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಮಾಸುವ ಮುನ್ನವೇ, ಇತರೇ ವಿಮಾನಗಳಲ್ಲೂ ಒಂದಿಲ್ಲೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ವರದಿಯಾಗುತ್ತಿದೆ. ಇದೀಗ ಹಜ್‌ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿಯಾ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಇದನ್ನೂ ಓದಿ: ಇನ್ನೂ ಪತ್ತೆಯಾಗಿಲ್ಲ ಗುಜರಾತ್ ವಿಮಾನ ದುರಂತದಲ್ಲಿ ಮೃತಪಟ್ಟ 18 ಜನರ ಗುರುತು

ವಿಮಾನ ಚಕ್ರಗಳು ರನ್‌ವೇಗೆ ಇಳಿಯುತ್ತಿದ್ದಂತೆ ಟೈಯರ್‌ನಿಂದ ಬೆಂಕಿ ಕಿಡಿಗಳು ಚಿಮ್ಮಿದ್ದು, ದಟ್ಟ ಹೊಗೆ ಹೊಮ್ಮಿದೆ. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸದೇ ನೂರಾರು ಯಾತ್ರಿಕರು, ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ವೈರಲ್‌ ಆಗಿದೆ.

ಮೂಲಗಳ ಪ್ರಕಾರ, SV3112 ಸಂಖ್ಯೆಯ ವಿಮಾನ ಶನಿವಾರ ರಾತ್ರಿ 10:45ಕ್ಕೆ ಜೆಡ್ಡಾದಿಂದ 250 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು, ಸಿಬ್ಬಂದಿಗಳೂ ಇದ್ದರು. ಹಜ್‌ಗೆ ಹೊರಟಿದ್ದ ವೇಳೆ ಬೆಳಗ್ಗೆ 6:30ರ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ವಿಮಾನದ ಟೈಯರ್‌ನಿಂದ ಬೆಂಕಿಯ ಕಿಡಿಗಳು ಚಿಮ್ಮಿದೆ ಜೊತೆಗೆ ಟೈರ್‌ನಿಂದ ದಟ್ಟ ಹೊಗೆ ಬಂದಿದೆ.

ತಾಂತ್ರಿಕ ದೋಷ ಉಂಟಾದ ಕೆಲವೇ ಕ್ಷಣಗಳಲ್ಲಿ ಪೈಲಟ್‌ ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಿದ್ದರು. ಈ ವೇಳೆ ವಿಮಾನ ನಿಲ್ದಾಣದ ಅಗ್ನಿಶಾಮಕ ಮತ್ತು ರಕ್ಷಣಾ ತಂಡವು ತಕ್ಷಣವೇ ನೆರವಿಗೆ ಧಾವಿಸಿ ಕೇವಲ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು.

ಪ್ರಾಥಮಿಕ ತನಿಖೆಯಲ್ಲಿ ಹೈಡ್ರಾಲಿಕ್ ಸಿಸ್ಟಮ್ ಸೋರಿಕೆಯೇ ತಾಂತ್ರಿಕ ದೋಷಕ್ಕೆ ಕಾರಣ ಎಂದು ತಿಳಿದುಬಂದಿದೆ. ಒಂದು ವೇಳೆ ವಿಮಾನ ಟೇಕ್‌ ಆಫ್‌ ಸಮಯದಲ್ಲಿ ದೋಷ ಕಾಣಿಸಿಕೊಂಡಿದ್ದರೆ, ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ವಿಮಾನಯಾನ ತಜ್ಞರು ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *