ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಶಾಕ್ – ಸಹೋದರಿ ಗಂಡನ ಮನೆ ಮೇಲೆ ಇಡಿ ರೈಡ್

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಶಾಕ್ – ಸಹೋದರಿ ಗಂಡನ ಮನೆ ಮೇಲೆ ಇಡಿ  ರೈಡ್

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಶಾಕ್ ಕೊಟ್ಟಿದ್ದಾರೆ. ಇವರ ಸಹೋದರಿ ಪತಿಯೂ ಆಗಿರುವ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಯ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭಾರಿ ದಾಳಿ ನಡೆಸಿದ್ದಾರೆ. ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ್  ಅವರಿಗೆ ಸೇರಿದ ಒಟ್ಟು 6 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಕೈಗೊಂಡಿದೆ.

ಇದನ್ನೂ ಓದಿ: ಗರ್ಭಿಣಿ ಸಮಂತಾರನ್ನು ಸತ್ಕರಿಸಿದ ಚಿರಂಜೀವಿ – ಮೆಗಾಸ್ಟಾರ್ ಮನೆಯಲ್ಲಿ ನಟಿಗೆ ವಿಶೇಷ ಉಡುಗೊರೆ

ಇಡಿ ಅಧಿಕಾರಿಗಳು ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ವೈ. ಮಂಜುನಾಥ್ ಅವರ ನಿವಾಸದ ಮೇಲೆ ರೈಡ್ ಮಾಡಿದ್ದಾರೆ.  ಗೋವಾ ಮತ್ತು ಬೆಂಗಳೂರಿನ ಜಾರಿ ನಿರ್ದೇಶನಾಲಯದ ಜಂಟಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ತನಿಖೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ 10 ಕ್ಕೂ ಹೆಚ್ಚು ಅರೆಸೇನಾ ಪಡೆಯ ಯೋಧರ ಕಾವಲಿನಲ್ಲಿ ಈ ದಾಳಿ ನಡೆಸಲಾಗಿದೆ.

ವೈ. ಮಂಜುನಾಥ್ ಅವರು ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಬೆಳಗಾವಿ ವಲಯದ ಪ್ರಮುಖ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಜುನಾಥ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ಇಡಿ ಅಧಿಕಾರಿಗಳು ಮಹತ್ವದ ದಾಖಲೆ ಪತ್ರಗಳು, ಆಸ್ತಿ ಪಾಸ್ತಿ ವಿವರ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರನಾಗಿರುವ ಮಂಜುನಾಥ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸೇರಿದಂತೆ ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.   ಬೆಳ್ಳಂ ಬೆಳಗ್ಗೆಯೇ ದಾಳಿ ನಡೆಸಿದ ಇಡಿ ಅಧಿಕಾರಿಗಳು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸಮಿಟ್ ಅಪಾರ್ಟ್ಮೆಂಟ್‌ನಲ್ಲಿ ಮಂಜುನಾಥನನ್ನ ವಶಕ್ಕೆ ಪಡೆದಿದ್ದಾರೆ.

Kishor KV