ದೇವ ಸುಂದರಿಗೆ ಸಕಲ ಸರ್ಕಾರಿ ಗೌರವ – ಅಭಿನಯ ಸರಸ್ವತಿ ಅಂತ್ಯಕ್ರಿಯೆಗೆ ಜಿಲ್ಲಾಡಳಿತದಿಂದ ಸಿದ್ಧತೆ

ದೇವ ಸುಂದರಿಗೆ ಸಕಲ ಸರ್ಕಾರಿ ಗೌರವ – ಅಭಿನಯ ಸರಸ್ವತಿ ಅಂತ್ಯಕ್ರಿಯೆಗೆ ಜಿಲ್ಲಾಡಳಿತದಿಂದ ಸಿದ್ಧತೆ

ಕನ್ನಡ ಚಿತ್ರರಂಗ ಕಂಡ ದೇವಸುಂದರಿ, ದಕ್ಷಿಣಭಾರತದ ಹಿರಿಯತಾರೆ, ಕಲಾದೇವಿ ಬಿ.ಸರೋಜಾದೇವಿ ಇನ್ನು ನೆನಪು ಮಾತ್ರ. ಅಗಲಿದ ಅಭಿನಯ ಸರಸ್ವತಿಗೆ ಚಿತ್ರರಂಗದ ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿದ್ದಾರೆ. ಅದರಲ್ಲೂ ತಮಿಳು ನಟರು ಕೂಡಾ ಆಗಮಿಸಿ ಸರೋಜಾದೇವಿಯವರಿಗೆ ಅಂತಿಮ ನಮನ ಸಲ್ಲಿಸಿದ್ದು ವಿಶೇಷ. ಇನ್ನು ಕಲಾವಿದರ ಪಾಲಿನ ಪ್ರೀತಿಯ ಅಮ್ಮನಿಗೆ ಸರ್ಕಾರಿ ಗೌರವ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಇದನ್ನೂ ಓದಿ:ಅಭಿನಯ ಸರಸ್ವತಿಗೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ – ನೇತ್ರದಾನದ ಮೂಲಕ ಸರೋಜಾದೇವಿ ಅಮರ

ಹಿರಿಯ ನಟಿ ಬಿ.ಸರೋಜಾದೇವಿ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ನಟ ಶಿವರಾಜಕುಮಾರ್, ರಾಘವೇಂದ್ರ ರಾಜ್​ಕುಮಾರ್, ಜಗ್ಗೇಶ್, ಉಪೇಂದ್ರ, ಶ್ರುತಿ, ತಾರಾ ಅನುರಾಧ, ಮಾಲಾಶ್ರೀ ಸೇರಿದಂತೆ ಹಲವು ನಟ-ನಟಿಯರು ಸರೋಜಾದೇವಿಯವರ ಅಂತಿಮ ದರ್ಶನ ಪಡೆದುಕೊಂಡ್ರು. ತಮಿಳು ನಟರಾದ ವಿಶಾಲ್‌, ಕಾರ್ತಿ ಕೂಡಾ ಸರೋಜಾ ದೇವಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಟ ಅರ್ಜುನ್ ಸರ್ಜಾ ಅವರು ಕೂಡ ಕುಟುಂಬ ಸಮೇತರಾಗಿ ಬಂದು ಸರೋಜಾ ದೇವಿ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.

ಇನ್ನು ಮಲ್ಲೇಶ್ವರಂ ನಿವಾಸಕ್ಕೆ ಸಿದ್ದರಾಮಯ್ಯ ಆಗಮಿಸಿ ಸರೋಜಾದೇವಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ್ರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಸಿದ್ದರಾಮಯ್ಯನವರು,  ಸರೋಜಾದೇವಿ ಅಗಲಿಕೆ ಚಿತ್ರರಂಗಕ್ಕೆ ನಷ್ಟವಾಗಿದೆ. ಚಿಕ್ಕವಯಸ್ಸಿನಲ್ಲೇ ಅಭಿನಯ ಸರಸ್ವತಿ ಬಿರುದು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರೊಬ್ಬರು ಮೇರು ನಟಿ. ಕನ್ನಡದಲ್ಲಷ್ಟೇ ಅಲ್ಲದೆ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೂ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ರು. ಎಲ್ಲಾ ಭಾಷೆಯ ಹೆಸರಾಂತ ನಟರ ಜೊತೆ ನಟಿಸಿದ್ರು. ಎಂಜಿಆರ್, ಎಂಟಿಆರ್, ರಾಜ್​ಕುಮಾರ್, ಶಿವಾಜಿ ಗಣೇಶನ್ ಜೊತೆ ನಟಿಸಿದ್ದರು. ಅವರು ಮಾಡೋ ಪ್ರತಿ ಪಾತ್ರಕ್ಕೂ, ಜೀವ ತುಂಬುತ್ತಿದ್ರು. ಕನ್ನಡ ಚಿತ್ರರಂಗ ಬೆಳೆಯೋಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅವ್ರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದರು. ಇದೇ ವೇಳೆ ಜಿಲ್ಲಾಡಳಿತದಿಂದ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ ಅಂತಾ ತಿಳಿಸಿದರು.

ಸರೋಜಾ ದೇವಿಯವರ ಅಂತ್ಯಕ್ರಿಯೆ ರಾಮನಗರ ಜಿಲ್ಲೆಯ ದಶವಾರ ಗ್ರಾಮದಲ್ಲಿ ನಡೆಯಲಿದೆ. ತಾಯಿ ರುದ್ರಮ್ಮ ಸಮಾಧಿ ಪಕ್ಕದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.

Sulekha