ಸರ್ಫರಾಝ್ ಖಾನ್ ಸಿಡಿಲಬ್ಬರದ ಶತಕ – ಸ್ಫೋಟಕ ಸೆಂಚುರಿ ಸಿಡಿಸಿ ತಕ್ಕ ಉತ್ತರ ನೀಡಿದ ಯುವ ದಾಂಡಿಗ

ಸರ್ಫರಾಝ್ ಖಾನ್ ಸಿಡಿಲಬ್ಬರದ ಶತಕ – ಸ್ಫೋಟಕ ಸೆಂಚುರಿ ಸಿಡಿಸಿ ತಕ್ಕ ಉತ್ತರ ನೀಡಿದ ಯುವ ದಾಂಡಿಗ

ರಣಜಿ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಸರ್ಫರಾಝ್ ಖಾನ್ ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿಲ್ಲ. ಇದರ ಬೆನ್ನಲ್ಲೇ ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ ಸರ್ಫರಾಝ್ ಭರ್ಜರಿ ಶತಕ ಸಿಡಿಸಿದ್ದಾರೆ. ತನ್ನನ್ನು ಕಡೆಗಣಿಸಿದವರಿಗೆ ಶತಕದ ಮೂಲಕ ಉತ್ತರ ನೀಡಿದ್ದಾರೆ. ದೇಶೀಯ ಅಂಗಳದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿರುವ ಯುವ ದಾಂಡಿಗನಿಗೆ ಇದುವರೆಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

ಇದನ್ನೂ ಓದಿ: 2 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ ವಿರಾಟ್ ಕೊಹ್ಲಿ – ಕಿಂಗ್ ಕೊಹ್ಲಿಯ ಬದಲಿಗೆ ಆಡುವ ಆಟಗಾರ ಯಾರು?

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಸರ್ಫರಾಝ್ ಖಾನ್ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಲಯನ್ಸ್ ತಂಡವು 152 ರನ್ ಗಳಿಸಿ ಆಲೌಟ್ ಆಗಿತ್ತು. ಆ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಅಭಿಮನ್ಯು ಈಶ್ವರನ್ (58) ಹಾಗೂ ದೇವದತ್ ಪಡಿಕ್ಕಲ್ (105) ಉತ್ತಮ ಆರಂಭ ಒದಗಿಸಿದ್ದರು. ಇದಾದ ಬಳಿಕ ಕಣಕ್ಕಿಳಿದ ಸರ್ಫರಾಝ್ ಖಾನ್ ಸ್ಪೋಟಕ ಬ್ಯಾಟಿಂಗ್ ನೊಂದಿಗೆ ಮಿಂಚಿದ್ದಾರೆ.

ಇಂಗ್ಲೆಂಡ್ ಲಯನ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಸರ್ಫರಾಝ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್‌ಗಳ ಸುರಿಮಳೆಗೈದರು. ಪರಿಣಾಮ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಕೇವಲ 89 ಎಸೆತಗಳಲ್ಲಿ ಸರ್ಫರಾಝ್ ಖಾನ್ ಶತಕ ಪೂರೈಸಿದರು. ಈ ಸ್ಪೋಟಕ ಶತಕದೊಂದಿಗೆ ಸರ್ಫರಾಝ್ ಖಾನ್ ಮತ್ತೊಮ್ಮೆ ಟೀಮ್ ಇಂಡಿಯಾದ ಕದ ತಟ್ಟಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿ ಕೂಡ ಆಯ್ಕೆ ಸಮಿತಿ ಸರ್ಫರಾಝ್ ಅವರನ್ನು ಕಡೆಗಣಿಸಿದ್ದರು. ಅಲ್ಲದೆ ವಿಕೆಟ್ ಕೀಪರ್ ಬ್ಯಾಟರ್ ಆಗಿ 23 ವರ್ಷದ ಧ್ರುವ್ ಜುರೇಲ್‌ಗೆ ಮಣೆ ಹಾಕಿದ್ದರು. ಹಾಗೆಯೇ ವೈಯುಕ್ತಿಕ ಕಾರಣಗಳಿಂದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಬದಲಿ ಆಟಗಾರನಾಗಿ ರಜತ್ ಪಾಟಿದಾರ್ಗೆ ಚಾನ್ಸ್ ನೀಡಲಾಗಿದೆ. ಈ ಆಯ್ಕೆಗಳ ಬೆನ್ನಲ್ಲೇ ಇದೀಗ ಸ್ಪೋಟಕ ಬ್ಯಾಟಿಂಗ್ ಮೂಲಕ ಸರ್ಫರಾಝ್ ಖಾನ್ ಅಬ್ಬರಿಸಿರುವುದು ವಿಶೇಷ. ಇನ್ನು ಸರ್ಫರಾಝ್ ಖಾನ್ ಅವರ ಈ ಬಿರುಸಿನ ಶತಕದ ನೆರವಿನಿಂದ ಭಾರತ ತಂಡವು 73 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 313 ರನ್ ಕಲೆಹಾಕಿದೆ. ಈ ಮೂಲಕ ಇಂಗ್ಲೆಂಡ್ ಲಯನ್ಸ್ ವಿರುದ್ಧ 161 ರನ್ಗಳ ಮುನ್ನಡೆ ಸಾಧಿಸಿದೆ.

Sulekha