ಟೀಮ್ ಇಂಡಿಯಾ ಪಾದಾರ್ಪಣೆ ಕನಸು ನನಸು- ಖುಷಿಯಲ್ಲಿ ಕಣ್ಣೀರಿಟ್ಟ ಸರ್ಫರಾಜ್ ಖಾನ್ ಕುಟುಂಬ

ಟೀಮ್ ಇಂಡಿಯಾ ಪಾದಾರ್ಪಣೆ ಕನಸು ನನಸು- ಖುಷಿಯಲ್ಲಿ ಕಣ್ಣೀರಿಟ್ಟ ಸರ್ಫರಾಜ್ ಖಾನ್ ಕುಟುಂಬ

ಕ್ರಿಕೆಟ್‌ಗೂ ಭಾವನೆಗಳ ಸ್ಪಂದನೆಗೂ ಅವಿನಾಭಾವ ಸಂಬಂಧ. ಇಲ್ಲಿ ಅಭಿಮಾನವಿದೆ.. ಇಲ್ಲಿ ಸಾಧನೆಯ ಖುಷಿಯಿದೆ.. ಇಲ್ಲಿ ಕ್ರಿಕೆಟಿಗರ ಮನದಾಳದ ಮಾತು ಮನಮುಟ್ಟುತ್ತಿರುತ್ತದೆ. ಈ ಬಾರಿ ಕ್ರಿಕೆಟ್ ಅಂಗಣದಲ್ಲಿ ಭಾವನಾತ್ಮಕ ಸನ್ನಿವೇಶಕ್ಕೆ ಕಾರಣವಾಗಿತ್ತು ಸರ್ಫರಾಜ್ ಖಾನ್ ಎಂಟ್ರಿ. ತಂದೆಯ ಆನಂದಭಾಷ್ಪ, ಪತ್ನಿಯ ಭಾವುಕತೆ ಅಭಿಮಾನಿಗಳ ಕಣ್ಣಲ್ಲೂ ನೀರು ತಂದಿತ್ತು.

ಇದನ್ನೂ ಓದಿ: ಕಾಯುತ್ತಿದ್ದ ದಿನಗಳು ಬಂದೇ ಬಿಟ್ಟಿತು – ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್

ರಾಜ್​​ಕೋಟ್​ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಸರ್ಫರಾಝ್ ಖಾನ್ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಈ ಪಂದ್ಯದ ಆರಂಭಕ್ಕೂ ಮುನ್ನ ಲೆಜೆಂಡ್ ಅನಿಲ್ ಕುಂಬ್ಳೆ ಅವರು ಸರ್ಫರಾಝ್ ಖಾನ್​ಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು. ಸರ್ಫರಾಜ್ ಖಾನ್ ಬಹಳ ದಿನಗಳಿಂದ ಟೀಂ ಇಂಡಿಯಾ ಎಂಟ್ರಿಗಾಗಿ ಕಾಯುತ್ತಿದ್ದರು. ಕೊನೆಗೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಸರ್ಫರಾಜ್ ಖಾನ್ ಗೆ ಅವಕಾಶ ಸಿಕ್ಕಿದೆ.

ಕಳಪೆ ಫಾರ್ಮ್‌ನಿಂದಾಗಿ ಆಯ್ಕೆದಾರರು ಶ್ರೇಯಸ್ ಅಯ್ಯರ್ ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಕೈ ಬಿಟ್ಟಿದ್ದಾರೆ. ಅಯ್ಯರ್ ಅವರ ಸ್ಥಾನದಲ್ಲಿ ಸರ್ಫರಾಜ್​ ಖಾನ್​ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ರಾಜ್‌ಕೋಟ್‌ನಲ್ಲಿ ಆರಂಭವಾಗಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯವು ಸರ್ಫರಾಜ್ ಖಾನ್‌ಗೆ ಸ್ಮರಣೀಯವಾಗಿದೆ. ಸರ್ಫರಾಜ್​ ಖಾನ್​ ಗೆ ಇದು ಚೊಚ್ಚಲ ಪಂದ್ಯವಾಗಿದ್ದು,  ಮೈದಾನದಲ್ಲಿಯೇ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಮಗನಿಗೆ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಟೆಸ್ಟ್ ಕ್ಯಾಪ್ ನೀಡುತ್ತಿದ್ದರೆ, ಅತ್ತ ಸರ್ಫರಾಝ್ ಖಾನ್ ಅವರ ತಂದೆ ಭಾವುಕರಾಗಿ ಬಿಕ್ಕಳಿಸಿ ಅಳುತ್ತಿದ್ದರು. ಅಲ್ಲದೆ ಮಗನ ಬಹುದೊಡ್ಡ ಕನಸು ಈಡೇರಿದ ಸಂತಸದಲ್ಲಿ ನೌಶಾದ್ ಖಾನ್ ಅಳುತ್ತಾ ಟೆಸ್ಟ್ ಕ್ಯಾಪ್​ಗೆ ಮುತ್ತಿಟ್ಟರು. ಇದೇ ವೇಳೆ ಆನಂದಭಾಷ್ಪ ಹಾಕುತ್ತಿದ್ದ ಪತ್ನಿಯನ್ನು ಸರ್ಫರಾಝ್ ಸಂತೈಸಿದರು. ಇದೀಗ ರಾಜ್​ಕೋಟ್ ಸ್ಟೇಡಿಯಂನಲ್ಲಿ ಕಂಡು ಬಂದ ಈ  ಭಾವುಕ ಕ್ಷಣಗಳ ಫೋಟೋ ಮತ್ತು ವಿಡಿಯೋ  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Sulekha