ಶಿವ ಮೆಚ್ಚಿದ ಗಾಯಕಿ ಶಿವಾನಿ! -ಸರಿಗಮಪದಲ್ಲಿ ಬೀದರ್ ಹುಡುಗಿ ಹವಾ!

ಶಿವಾನಿ ಶಿವದಾಸ ಸ್ವಾಮಿ.. ಹಣೆ ತುಂಬಾ ವಿಭೂತಿ.. ಶಿವನ ಅಪ್ಪಟ ಭಕ್ತೆ.. ಇದೀಗ ಸರಿಗಮಪ ಸೀಸನ್ 21 ರಲ್ಲೂ ಈಕೆ ತನ್ನ ಗಾಯನದ ಮೂಲಕ ಮೋಡಿ ಮಾಡ್ತಿದ್ದಾರೆ. ಪ್ರತಿ ಸಂಚಿಕೆಯಲ್ಲೂ ಅದ್ಭುತ ಗಾಯನದ ಮೂಲಕ ಕರುನಾಡಿನ ಜನರ ಮನಗೆದ್ದಿದ್ದಾರೆ ಹಳ್ಳಿ ಪ್ರತಿಭೆ. ಅಂದ್ಹಾಗೆ ಶಿವಾನಿ ಸರಿಗಮಪ ಶೋಗೂ ಮುನ್ನ ಸಾಕಷ್ಟು ವೇದಿಕೆಗಳಲ್ಲಿ ಹಾಡಿದ್ದಾರೆ. ಅಷ್ಟೇ ಅಲ್ಲ ಕೆಲ ಹಿಂದಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದಾರೆ. ಅಷ್ಟಕ್ಕೂ ಶಿವಾನಿ ಹಿನ್ನೆಲೆ ಏನು? ಯಾವ ಯಾವ ಶೋ ನಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ; ರಾಹುಲ್ Vs ಗಿಲ್.. ಕ್ಯಾಪ್ಟನ್ಸಿ ವಾರ್ – ಟೆಸ್ಟ್ ನಾಯಕತ್ವಕ್ಕೆ ಯಾರು ಬೆಸ್ಟ್?
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಸರಿಗಮಪ ಕೂಡ ಒಂದು. 2006 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ ಈ ಶೋನಿಂದ ಸಾಕಷ್ಟು ಪ್ರತಿಭಾವಂತರು ಬೆಳಕಿಗೆ ಬಂದಿದ್ದಾರೆ. ಈ ವೇದಿಕೆ ಮೂಲಕವೇ ಕನ್ನಡ ಸಿನಿಮಾರಂಗಕ್ಕೆ ಅದ್ಭುತ ಗಾಯಕರ ಪರಿಚಯ ಆಗಿದ್ದಾರೆ. ಸರಿಗಮಪ ಸೀಸನ್ 21 ರಲ್ಲೂ 6 ವರ್ಷ ದಿಂದ 60 ವರ್ಷದ ವರೆಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಸೀಸನ್‌ನಲ್ಲಿ ಬೀದರ್ ನ ಶಿವಾನಿ ತಮ್ಮ ಕಂಠದ ಮೂಲಕ ಕರುನಾಡಿನ ಜನರ ಮನ ಗೆದ್ದಿದ್ದಾರೆ. ಪ್ರತಿವಾರ ವಿಭಿನ್ನ ಹಾಡುಗಳನ್ನ ಹಾಡಿ ವೀಕ್ಷಕರನ್ನ ರಂಜಿಸ್ತಿದ್ದಾರೆ.
ಅಂದ್ಹಾಗೆ ಶಿವಾನಿ ಹುಟ್ಟಿದ್ದು, 2006 ರ ಡಿಸೆಂಬರ್ ನಲ್ಲಿ. ತಂದೆ ಶಿವದಾಸ ಸ್ವಾಮಿ.. ತಾಯಿ ಕವಿತಾ.. ಶಿವಾನಿ ಕುಟುಂಬ ಸಂಗೀತ ಸಾಧಕರ ಕುಟುಂಬವಾಗಿದೆ. ಇಡೀ ಕುಟುಂಬ ಸಂಗೀತದಿಂದಲೇ ಜೀವನ ನಡೆಸುತ್ತಿದ್ದಾರೆ. ಶಿವಾನಿಗೆ ತಂದೆ ತಾಯಿಯೇ ಮೊದಲ ಗುರು. 3ನೇ ವರ್ಷದಲ್ಲಿದ್ದಾಗಲೇ ಶಿವಾನಿ ಹಾಡು ಹಾಡೋದನ್ನು ಕಲಿಯಲು ಆರಂಭಿಸಿದ್ದರು. ಅಲ್ಲಿಂದ ಶುರುವಾದ ಶಿವಾನಿ ಸಂಗೀತ ಪಯಣ ಈಗ ದೊಡ್ಡ ದೊಡ್ಡ ವೇದಿಕೆಯಲ್ಲಿ ಹಾಡುವಂತೆ ಮಾಡಿದೆ. ಇದೀಗ ಸಂಗೀತ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸುತ್ತಿದ್ದಾರೆ. ಇನ್ನು ಶಿವಾನಿ ಅಪ್ಪಟ ಶಿವ ಭಕ್ತೆ. ಆಕೆ ಸದಾ ಕೊರಳಲ್ಲಿ ಇಷ್ಟಲಿಂಗವನ್ನ ಧರಿಸಿಕೊಂಡೇ ಇರ್ತಾರೆ. ಹಾಡುವಾಗಲು ಆಕೆ ಚಪ್ಪಲಿ ಧರಿಸಲ್ಲ.. ಬರೀಗಾಲಿನಲ್ಲಿ ನಿಂತು ಹಾಡ್ತಾರೆ. ಅಷ್ಟರ ಮಟ್ಟಿಗೆ ಆಕೆ ಸಂಗೀತವನ್ನ ಆರಾಧಿಸ್ತಾರೆ. ಈಕೆಯ ಕಂಠಸಿರಿಯಲ್ಲಿ ಮೂಡಿ ಬರುವ ಹಾಡು ಕೇಳಿದ್ರೆ ಎಂತವರೂ ಕಳೆದು ಹೋಗೋದಂತೂ ಪಕ್ಕಾ..
ಅಂದ್ಹಾಗೆ ಶಿವಾನಿ ಈಗಾಗಲೇ ಬೇರೆ ಬೇರೆ ಭಾಷೆಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಸರಿಗಮಪ ಸೀಸನ್ 21 ಕ್ಕೂ ಮೊದಲು, 2023 ರಲ್ಲಿ ಶಿವಾನಿ ಸೋನಿ ಟಿವಿಯಲ್ಲಿ ಪ್ರಸಾರವಾಗುವ ಇಂಡಿಯನ್ ಐಡಲ್-14 ನಲ್ಲಿ ಭಾಗವಹಿಸಿದ್ರು.. ಶಿವಾನಿ ಗಾಯನಕ್ಕೆ ಶ್ರೇಯಾ ಘೋಷಾಲ್ ಕೂಡ ಮನಸೋತಿದ್ರು. ಇನ್ನು 2020ರಲ್ಲಿ ಝೀ ಟಿವಿಯ ‘ಸರಿಗಮಪ’ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಈ ಶೋನಲ್ಲಿ ಬೆಳ್ಳಿ ಪದಕ ಗೆದ್ದಿದ್ರು. ಅದಾದ್ಮೇಲೆ ಹೈದ್ರಾಬಾದ್‌ನಲ್ಲಿ ನಡೆದ ‘ಪ್ರೈಡ್ ಆಫ್ ತೆಲಂಗಾಣ’ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ ಚಾ ಆವಾಜ್ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದ್ದಾರೆ. ಇನ್ನು ಶಿವಾನಿ ಸ್ಯಾಂಡಲ್‌ವುಡ್ ಚಿತ್ರದಲ್ಲೂ ಹಾಡಿದ್ದಾರೆ. ವಿನಯ್ ರಾಜ್‌ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾಕ್ಕೆ ಶಿವಾನಿ ಹಾಡು ಹಾಡಿದ್ದಾರೆ. ಇದೀಗ ಶಿವಾನಿ ಸರಿಗಮಪ ವೇದಿಕೆಯಲ್ಲಿ ತಮ್ಮ ಹಾಡಿನ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ.