ಏರ್‌ಇಂಡಿಯಾದಿಂದ ಮರೆಯಾಗಲಿದೆ ಸೀರೆ ಟ್ರೆಂಡ್! – ಗಗನಸಖಿಯರಿಗೆ ಹೊಸ ಸಮವಸ್ತ್ರ ಡಿಸೈನ್ ಮಾಡೋದು ಯಾರು?
ನವದೆಹಲಿ: ಏರ್‌ಇಂಡಿಯಾದ ಮಹಿಳಾ ಸಿಬ್ಬಂದಿಗಳು ಭಾರತೀಯ ಉಡುಗೆಯಾದ ಸೀರೆಯನ್ನು ಸಮವಸ್ತ್ರವಾಗಿ ಧರಿಸುತ್ತಿದ್ದಾರೆ. ಇದೀಗ ಕಳೆದ 60 ವರ್ಷಗಳ ಬಳಿಕ ಏರ್ ಇಂಡಿಯಾ ತನ್ನ ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಸಮವಸ್ತ್ರದಲ್ಲಿ ಬದಲಾವಣೆಯನ್ನು ತರಲು ಆಲೋಚಿಸುತ್ತಿದೆ. ಇನ್ನುಮುಂದೆ ಗಗನಸಖಿಯರ ಸೀರೆ ಟ್ರೆಂಡ್ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತನ್ನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಹಾಗೂ ಆಧುನಿಕತೆಗೆ ತೆರೆದುಕೊಂಡಿದ್ದರೂ, ತನ್ನ ಗಗನಸಖಿಯರಿಗೆ ಮಾಡರ್ನ್ ಡ್ರೆಸ್‌ಗಳ ಬದಲು ಸಾಂಪ್ರದಾಯಿಕ ಸೀರೆಯ ಸಮವಸ್ತ್ರವನ್ನೇ ಮುಂದುವರಿಸಿತ್ತು. ಆದರೆ, ಈಗ ಏರ್ ಇಂಡಿಯಾ ಮರಳಿ ಟಾಟಾ ಸನ್ಸ್ ತೆಕ್ಕೆಗೆ ಸೇರ್ಪಡೆಗೊಂಡಿದೆ. ಇದರ ಬೆನ್ನಲ್ಲಿಯೇ ಗಗನಸಖಿಯರ ಸೀರೆ ಟ್ರೆಂಡ್ ಬದಲಾಗುವ ಸಾಧ್ಯತೆ. ಹೊಸ ಯುಗಕ್ಕೆ ಅನುಗುಣವಾಗಿ ಹೊಸ ಸಮವಸ್ತ್ರಗಳನ್ನು ಗಗನಸಖಿಯರಿಗೆ ಪರಿಚಯಿಸಲಿದೆ. ಮುಂದಿನ ನವೆಂಬರ್ ತಿಂಗಳಿನಿಂದ ಏರ್‌ಇಂಡಿಯಾ ಸಮವಸ್ತ್ರ ಬದಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: ಮಂತ್ರಾಲಯದ ರಾಯರ ಮಠಕ್ಕೆ ಹರಿದು ಬಂತು ಭರ್ಜರಿ ಕಾಣಿಕೆ! ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ ಆದಾಯ!
ಮಹಿಳಾ ಸಿಬ್ಬಂದಿಗಳಿಗೆ ಡಿಸೈನರ್ ಚೂಡಿದಾರ್‌ಗಳು ಹಾಗೂ ಪುರುಷ ಸಿಬ್ಬಂದಿಗೆ ಡಿಸೈನರ್ ಸೂಟ್‌ಗಳನ್ನು ಕಂಪನಿ ವಿನ್ಯಾಸ ಮಾಡುತ್ತಿದೆ. ವರದಿಗಳ ಪ್ರಕಾರ ಪ್ರಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಈ ಹೊಸ ಸಮವಸ್ತ್ರಗಳನ್ನು ವಿನ್ಯಾಸ ಮಾಡಲಿದ್ದಾರೆ. ಆದರೆ, ಯಾವುದೇ ವಿಚಾರವನ್ನು ಬಹಿರಂಗಪಡಿಸದೇ ಇರುವ ಒಪ್ಪಂದ ಏರ್ ಇಂಡಿಯಾ ಹಾಗೂ ಮನೀಶ್ ಮಲ್ಹೋತ್ರಾ ನಡುವೆ ಆಗಿರುವ ಕಾರಣ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಪುರುಷ ಸಿಬ್ಬಂದಿಗೆ ಸೂಟ್, ಮಹಿಳಾ ಸಿಬ್ಬಂದಿಗೆ ಚೂಡಿದಾರ್ ಅನ್ನು ಸಮವಸ್ತ್ರವಾಗಿ ನೀಡುವ ಸಾಧ್ಯತೆ ಇದೆ. ಏರ್ ಇಂಡಿಯಾದ ಸಿಗ್ನೇಚರ್ ಶೈಲಿಯನ್ನು ಪ್ರತಿಬಿಂಬಿಸುವ ಹೊಸ ಸಮವಸ್ತ್ರಗಳು ಗಾಢ ಕೆಂಪು ಮತ್ತು ಚಿನ್ನದ ಬಣ್ಣಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.ಇನ್ನು ಏರ್ ಇಂಡಿಯಾ ಜೊತೆ ವಿಲೀನ ಪ್ರಕ್ರಿಯೆ ಪೂರ್ಣಗೊಂದ ಬಳಿಕ, ವಿಸ್ತಾರ ಏರ್‌ಲೈನ್ಸ್ ಕೂಡ ಈ ಸಮವಸ್ತ್ರವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಸಮವಸ್ತ್ರ ಬದಲಾವಣೆಯ ಬಗ್ಗೆ ಏರ್ ಇಂಡಿಯಾ ಯಾವುದೇ ಮಾಹಿತಿ ನೀಡಿಲ್ಲ.