ಅಯೋಧ್ಯೆ ರಾಮಮಂದಿರದ ಆವರಣಕ್ಕೆ ಸರಯೂ ನದಿ ನೀರು ಹರಿಸಲು ಚಿಂತನೆ!

ಅಯೋಧ್ಯೆ ರಾಮಮಂದಿರದ ಆವರಣಕ್ಕೆ ಸರಯೂ ನದಿ ನೀರು ಹರಿಸಲು ಚಿಂತನೆ!

ಅಯೋಧ್ಯೆ ರಾಮಮಂದಿರದ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಜನವರಿ 22 ರಂದು ಅಯೋಧ್ಯಾ ನಗರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಇದೀಗ ಅಯೋಧ್ಯೆಯಲ್ಲಿ ಮಹತ್ವದ ಯೋಜನೆಯೊಂದನ್ನು ಕೈಗೊಳ್ಳಲಾಗುತ್ತಿದೆ. ರಾಮ ಜನ್ಮ ಭೂಮಿ ಆವರಣದಲ್ಲಿ ಲಭ್ಯವಿರುವ ನೀರು ಸಾಕಾಗದಿದ್ದಲ್ಲಿ ಸರಯೂ ನದಿಯ ನೀರು ಹರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ‘ರಾಮ ಜನ್ಮಭೂಮಿ ಆವರಣದಲ್ಲಿ ಲಭ್ಯವಿರುವ ನೀರು ಸಾಕಾಗದಿದ್ದಲ್ಲಿ ಸರಯೂ ನದಿಯ ನೀರು ಹರಿಸುವ ಕುರಿತು ಯೋಜನೆ ರೂಪಿಸಲಾಗುವುದು’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಏಕಕಾಲಕ್ಕೆ 9 ದೇಶಗಳ ಸಮಯ ತೋರಿಸುತ್ತೆ ಈ ಗಡಿಯಾರ – ಅಯೋಧ್ಯೆ ರಾಮ ಮಂದಿರಕ್ಕೆ ವಿಶೇಷ ಉಡುಗೊರೆ ನೀಡಿದ ತರಕಾರಿ ವ್ಯಾಪಾರಿ

ರಾಮಮಂದಿರ ನಿರ್ಮಾಣವಾಗುತ್ತಿರುವ 70 ಎಕರೆ ಆವರಣದಲ್ಲಿ ಸುಮಾರು 20 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನೂರು ವರ್ಷಕ್ಕೂ ಹಿಂದಿನ ಮರಗಳಿರುವ ದಟ್ಟ ಹಸಿರು ಪ್ರದೇಶವಿದೆ. ಸೂರ್ಯನ ಕಿರಣಗಳೂ ಈ ಪ್ರದೇಶದಲ್ಲಿ ಹಾಯುವುದು ಕಷ್ಟ. ಹೀಗಾಗಿ ರಾಮಜನ್ಮಭೂಮಿಯಲ್ಲಿ ಅಂತರ್ಜಲ ಮಟ್ಟ ಎಂದಿಗೂ ಕುಸಿಯದು. ಒಂದೊಮ್ಮೆ ಹಾಗಾದಲ್ಲಿ ಸರಯೂ ನದಿ ನೀರನ್ನು ಹರಿಸಲು ಕ್ರಮ ಜರುಗಿಸಲಾಗುವುದು. ಮಂದಿರ ನಿರ್ಮಾಣದಲ್ಲಿ ಶೂನ್ಯ ತ್ಯಾಜ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಇಲ್ಲಿ ಯಾವುದನ್ನೂ ವ್ಯರ್ಥ ಮಾಡಲಾಗದು’ ಎಂದರು.

‘ರಾಮಮಂದಿರ ಪ್ರದೇಶವು ಆತ್ಮನಿರ್ಭರವಾಗಿದೆ. ಇಲ್ಲಿ ದಟ್ಟ ಹಸಿರು ಪ್ರದೇಶ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಅಗ್ನಿ ಶಾಮಕ ಕೇಂದ್ರ ಮತ್ತು ಪ್ರತ್ಯೇಕ ವಿದ್ಯುತ್ ಪೂರೈಕೆ ಘಟಕ ಇದೆ. ಮೊದಲ ಹಂತದ ನಿರ್ಮಾಣ ಅಂತಿಮ ಘಟ್ಟಕ್ಕೆ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜ. 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಡಿ. 30ರಂದು ಅಯೋಧ್ಯೆಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಮರು ಅಭಿವೃದ್ಧಿಗೊಂಡ ರೈಲು ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಹೇಳಿದರು.

Shwetha M