ʼಸಪ್ತಪದಿʼ ಇನ್ನುಮುಂದೆ ʼಮಾಂಗಲ್ಯ ಭಾಗ್ಯʼ! – ಬಿಜೆಪಿ ಸರ್ಕಾರದ ಸಾಮೂಹಿಕ ವಿವಾಹ ಯೋಜನೆ ಹೆಸರನ್ನು ಬದಲಿಸಿದ ಕಾಂಗ್ರೆಸ್ !
ಬಿಎಸ್ ಯಡಿಯೂರಪ್ಪ ಅವರು ಸಿಎಂ ಅಗಿದ್ದ ಅವಧಿಯಲ್ಲಿ ಆರಂಭಿಸಿದ್ದ ʼಸಪ್ತಪದಿʼ ವಿವಾಹ ಯೋಜನೆಯ ಹೆಸರನ್ನು ‘ಮಾಂಗಲ್ಯ ಭಾಗ್ಯ’ ಎಂದು ಬದಲಿಸಿದೆ ಮುಂದಾಗಿದೆ ಎಂದು ವರದಿಯಾಗಿದೆ
ಬಡ ವರ್ಗದ ವಧು-ವರರ ಸರಳ ವಿವಾಹಕ್ಕಾಗಿ ಬಿಎಸ್ ಯಡಿಯೂಪ್ಪ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಯೋಜನೆ ಜಾರಿ ಮಾಡಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಈ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಯೋಜನೆಯ ಹೆಸರನ್ನು ‘ಮಾಂಗಲ್ಯ ಭಾಗ್ಯ’ ಎಂದು ಬದಲಿಸಿದೆ. ಈ ಸಂಬಂಧ ರಾಜ್ಯ ಮುಜರಾಯಿ ಇಲಾಖೆ ಹೊಸ ಮಾರ್ಗಸೂಚಿಗಳೊಂದಿಗೆ ಸುತ್ತೋಲೆ ಹೊರಡಿಸಿದೆ.
ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಆರಂಭಿಸಿರುವ ಯೋಜನೆ ಇದಾಗಿದೆ. ಇತ್ತೀಚೆಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಯೋಜನೆಗೆ ‘ಮಾಂಗಲ್ಯ ಭಾಗ್ಯ’ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ವಿದೇಶದಲ್ಲೂ ದೀಪಾವಳಿ ಸಂಭ್ರಮ! – ಹಿಂದೂ ಸಮುದಾಯದೊಂದಿಗೆ ಹಬ್ಬ ಆಚರಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್!
ʼಮಾಂಗಲ್ಯ ಭಾಗ್ಯʼದ ಮಾರ್ಗಸೂಚಿಗಳೇನು?
ವರನಿಗೆ ಅಂಗಿ, ಧೋತಿ ಹಾಗೂ 5000 ರೂ. ನಗದು, ವಧುವಿಗೆ ಮಂಗಳಸೂತ್ರಕ್ಕಾಗಿ ಸೀರೆ, 1,000 ರೂ. ನಗದು ಮತ್ತು 8 ಗ್ರಾಂ. ಚಿನ್ನ (ತಾಳಿ-ಗುಂಡುಗಳು) ನೀಡಲಾಗುತ್ತದೆ. ಇದರ ಒಟ್ಟು ವೆಚ್ಚವು 55 ಸಾವಿರ ರೂ. ಆಗಲಿದೆ. ಜತೆಗೆ ವಧು-ವರರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿಗಳೇ ಮಾಡಲಿವೆ. ಈ ಹಿಂದೆ ಸಪ್ತಪದಿ ಯೋಜನೆಯಡಿ ಇದ್ದ ಈ ಎಲ್ಲಾ ಮಾರ್ಗಸೂಚಿಗಳನ್ನು ‘ಮಾಂಗಲ್ಯ ಭಾಗ್ಯ’ದಲ್ಲೂ ಅಳವಡಿಸಲಾಗಿದೆ. ಆದರೆ ಈ ಹಿಂದೆ ಆಯ್ದ 100 ದೇವಾಲಯಗಳಲ್ಲಿ ಮಾತ್ರ ಜಾರಿಗೆ ತಂದಿದ್ದ ಈ ಯೋಜನೆಯನ್ನು ಇದೀಗ ಎಲ್ಲಾ’ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಈ ಯೋಜನೆಯಡಿ ಕೈಗೊಳ್ಳುವ ಸಾಮೂಹಿಕ ವಿವಾಹಕ್ಕೆ ತಗಲುವ ವೆಚ್ಚವನ್ನು ದೇವಾಲಯದ ನಿಧಿಯಿಂದಲೇ ಭರಿಸಲಾಗುವುದು. ಒಂದೊಮ್ಮೆ ಕಾರ್ಯಕ್ರಮ ನಡೆಸಲು ಸದರಿ ದೇವಾಲಯದಿಂದ ಸಾಧ್ಯವಾಗದಿದ್ದಾಗ ಮಾತ್ರ ವಿವಾಹವಾಗುವ ವಧು-ವರರಿಗೆ ನೀಡುವ ಪ್ರೋತ್ಸಾಹ ಧನದ ಆರ್ಥಿಕ ಸಹಾಯ ಧನವನ್ನು ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುತ್ತದೆ.
ʼಮಾಂಗಲ್ಯ ಭಾಗ್ಯʼ ಸರಳ ವಿವಾಹ ಯಾವಾಗ?
2023ರ ನವೆಂಬರ್, ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ಸಾಮೂಹಿಕ ವಿವಾಹಕ್ಕಾಗಿ ವಧು-ವರರ ಹೆಸರು ನೋಂದಾಯಿಸಿಕೊಳ್ಳಲು ದೇವಾಲಯಗಳು ಸಜ್ಜಾಗಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ 16, 19 ಮತ್ತು 29ರಂದು ದಿನಾಂಕಗಳನ್ನು ಗೊತ್ತುಪಡಿಸಿದರೆ, ಡಿಸೆಂಬರ್ 7, 10ರಂದು, ಅದೇ ರೀತಿ ಜನವರಿ 28 ಮತ್ತು 31ರಂದು ದಿನಾಂಕಗಳನ್ನು ನಿಗದಿಪಡಿಸಲಾಗಿದೆ.