‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರದಲ್ಲಿ ಮುಂದುವರಿದ ಪ್ರೇಮಕಥೆ – – ಒಂದಾಗುತ್ತಾರಾ ಮನು-ಪ್ರಿಯಾ?
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರ ರಿಲೀಸ್ ಆಗಿದೆ. ಪ್ರೀತಿ, ನೋವು, ಅಸಹಾಯಕತೆ, ಹತಾಶೆ, ದ್ವೇಷ ಎಲ್ಲವೂ ಬೆರೆತಂತಿರುವ ಮನು ಪಾತ್ರಕ್ಕೆ ರಕ್ಷಿತ್ ಶೆಟ್ಟಿ ಜೀವ ತುಂಬಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾದಲ್ಲಿ ಮನು ಮತ್ತು ಪ್ರಿಯಾ ಕಥೆ ಅರ್ಧಕ್ಕೆ ನಿಂತಿತ್ತು. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರದಲ್ಲಿ ಆ ಕಥೆ ಮುಂದುವರಿದಿದೆ. ಪ್ರೇಕ್ಷಕರು ಊಹಿಸಲಾಗದಂತಹ ರೀತಿಯಲ್ಲಿ ಈ ಚಿತ್ರದ ಪ್ರೇಮಕಥೆ ಸಾಗಿದೆ.
ಇದನ್ನೂ ಓದಿ: ‘ಟೈಗರ್ 3’ ಭರ್ಜರಿ ಕಲೆಕ್ಷನ್ – ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಿದ ಬಾಲಿವುಡ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್
ಬದುಕಿನಲ್ಲಿ ಬಹುಬೇಗನೇ ಸೆಟ್ಲ್ ಆಗಬೇಕು, ತನ್ನ ಹುಡುಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ತನ್ನದಲ್ಲದ ತಪ್ಪನ್ನು ಒಪ್ಪಿಕೊಂಡು ಮನು (ರಕ್ಷಿತ್ ಶೆಟ್ಟಿ) ಜೈಲಿಗೆ ಹೋಗಿರುತ್ತಾನೆ. ನಂತರ ತಾನು ಒಪ್ಪಿಕೊಂಡು ಶಿಕ್ಷೆಗೆ ಗುರಿಯಾಗಿದ್ದು ತಪ್ಪು ಎಂದು ಗೊತ್ತಾಗುವ ವೇಳೆಗೆ ಕಾಲ ಸರಿದುಹೋಗಿರುತ್ತದೆ. ಮನುವಿನ ಬದುಕು ಸಮುದ್ರದಲ್ಲಿ ಮುಳುಗಿದ ಹಡಗಿನಂತಾಗಿರುತ್ತದೆ. ಮನುಗೆ 10 ವರ್ಷ ಜೈಲು ಶಿಕ್ಷೆ ಖಚಿತವಾದರೆ, ಇತ್ತ ಪ್ರೀತಿಸಿದ ಹುಡುಗಿ ಪ್ರಿಯಾ ಮತ್ತೊಬ್ಬನ ಜೊತೆ ಮದುವೆಯಾಗಿದ್ದಾಳೆ. ಇಲ್ಲಿಗೆ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ಕಥೆ ಬಂದು ನಿಂತಿತ್ತು. ಇದೀಗ ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ ತೆರೆಕಂಡಿದೆ. ಇಲ್ಲಿ ಮೊದಲ ಭಾಗದಲ್ಲಿ ಕಂಡ ಮನು ಕಾಣಸಿಗುವುದಿಲ್ಲ. ಅವನೀಗ ಸಂಪೂರ್ಣ ಬದಲಾಗಿದ್ದಾನೆ. ಮನುವಿನ ರೂಪದಲ್ಲೂ ಬದಲಾಗಿದೆ. ಜೊತೆಗೆ ಪ್ರೀತಿ ಕಳೆದುಕೊಂಡ ನೋವು ದುಪ್ಪಟ್ಟಾಗಿದೆ. ಮತ್ತೊಂದೆಡೆ ಪ್ರಿಯಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪತಿಯೊಡನೆ ಸಂಸಾರ ಸಾಗಿಸುತ್ತ, ತನ್ನದೇ ತಾಪತ್ರಯಗಳೊಂದಿಗೆ ಜೀವನ ನಡೆಸುತ್ತಿದ್ದಾಳೆ. ಇವರಿಬ್ಬರ ಕಥೆ ಮುಂದೇನಾಗಬಹುದು? ತನಗೆ ಅನ್ಯಾಯ ಮಾಡಿದವರಿಗೆ ಮನು ಸೇಡು ತೀರಿಸಿಕೊಳ್ಳುತ್ತಾನಾ? ಪ್ರಿಯಾ ಬದುಕಿಗೆ ಮತ್ತೆ ಎಂಟ್ರಿ ನೀಡುತ್ತಾನಾ.. ಅಥವಾ ಮನುಗೆ ಹೊಸ ಸಂಗಾತಿ ಸಿಗುತ್ತಾಳಾ.. ಅನ್ನೋ ಪ್ರಶ್ನೆಗಳೊಂದಿಗೆ ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ ಸಾಗುತ್ತದೆ.
ಪರಿಸ್ಥಿತಿಯ ಕಾರಣದಿಂದ ದೂರ ಆಗಿದ್ದ ಆ ಪ್ರೇಮಿಗಳು ಮತ್ತೆ ಒಂದಾಗಲಿ ಎಂಬ ಹಂಬಲ ‘ಸೈಡ್ ಎ’ ನೋಡಿದ ಪ್ರೇಕ್ಷಕರಲ್ಲಿ ಮೂಡಿತ್ತು. ಅದೇ ಆಶಾಭಾವವನ್ನೇ ಬಿತ್ತುತ್ತ ‘ಸೈಡ್ ಬಿ’ ಕಹಾನಿ ಆರಂಭಿಸಿದ್ದಾರೆ ನಿರ್ದೇಶಕ ಹೇಮಂತ್ ಎಂ. ರಾವ್. ಮುಂದುವರಿದ ಈ ಕಥೆಯಲ್ಲಿ ಮನು ಮತ್ತು ಪ್ರಿಯಾ ದೂರ ದೂರ ಇದ್ದರೂ ಕೂಡ ಪ್ರೀತಿಯ ತೀವ್ರತೆ ಕಡಿಮೆ ಆಗದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ದೂರದಲ್ಲಿ ಇದ್ದುಕೊಂಡೇ ಪ್ರೇಯಸಿಗಾಗಿ ಹಂಬಲಿಸುವ ಮಾಜಿ ಪ್ರೇಮಿಯಾಗಿ ರಕ್ಷಿತ್ ಶೆಟ್ಟಿ ಅವರು ಗಮನಾರ್ಹವಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಒಂದು ಕಾಡುವ ಗುಣವಿದೆ. ಆ ಗುಣವೇ ಈ ಚಿತ್ರದ ಪ್ಲಸ್ ಪಾಯಿಂಟ್. ಕೈ ತಪ್ಪಿಹೋದ ಪ್ರೇಮವನ್ನು ಮತ್ತೆ ಪಡೆಯುವ ಪ್ರಯತ್ನದಲ್ಲಿ ಮನು ಮುಳುಗಿಹೋಗುತ್ತಾನೆ. ಅಷ್ಟೇ ಚೆನ್ನಾಗಿ ಚೈತ್ರಾ ಜೆ. ಆಚಾರ್ ಕೂಡಾ ನಟಿಸಿದ್ದಾರೆ. ಹೆಚ್ಚು ಸಂಭಾಷಣೆಗಳು ಇಲ್ಲದೆಯೂ ರುಕ್ಮಿಣಿ ವಸಂತ್ ಗಮನಾರ್ಹವಾಗಿ ನಟಿಸಿದ್ದಾರೆ. ಇಡೀ ಸಿನಿಮಾದಲ್ಲಿ ನಾಯಕನ ಜೊತೆಗಿರುವಂತಹ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ರಮೇಶ್ ಇಂದಿರಾ ಅದೇ ಮ್ಯಾನರಿಸಂ ಮುಂದುವರಿಸಿದ್ದಾರೆ. ಇದರ ಕ್ಲೈಮ್ಯಾಕ್ಸ್ ಅಪೂರ್ಣ ಎಂಬಂತಿದೆ. ಮುಂದೆ ಏನೆಲ್ಲ ಆಗಿರಬಹುದು ಎಂಬುದನ್ನು ಪ್ರೇಕ್ಷಕರೇ ಊಹಿಸಿಕೊಳ್ಳಬೇಕು. ಆ ರೀತಿಯ ಒಂದು ಅಂತ್ಯದೊಂದಿಗೆ ಮನು-ಪ್ರಿಯಾ ಪ್ರೇಮಕಥೆಯು ಕಡಲಿನಲ್ಲಿ ಲೀನವಾಗುತ್ತದೆ.