ಸಾನ್ಯಾ ಐಯ್ಯರ್ ವಿವಾದ – ದೇವರ ಮೊರೆ ಹೋಗಿದ್ಯಾಕೆ ಕಂಬಳ ಸಮಿತಿ?
ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್ ಕೆಲದಿನಗಳ ಹಿಂದೆ ಪುತ್ತೂರಿನಲ್ಲಿ ನಡೆದ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಸಾನ್ಯಾ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಇಬ್ಬರೂ ಪರಸ್ಪರ ಕಪಾಳ ಮೋಕ್ಷ ಮಾಡಿಕೊಂಡಿದ್ದಾರೆ. ಬಳಿಕ ಸಾನ್ಯಾ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ಇದೊಂದು ವಿವಾದವಾಗಿ ಮಾರ್ಪಟ್ಟಿತ್ತು. ಇದೀಗ ಕಂಬಳ ಸಮಿತಿ ಈ ವಿವಾದ ಬಗೆಹರಿಸುವಂತೆ ದೇವರ ಮೊರೆ ಹೋಗಿದೆ.
ಇದನ್ನೂ ಓದಿ: ‘ಪಠಾಣ್ ಸೋತಿದ್ದರೆ ಹೋಟೆಲ್ನಲ್ಲಿ ಅಡುಗೆ ಮಾಡ್ತಿದ್ದೆ’ – ಶಾರುಖ್ ಖಾನ್ ಮಾಡಿದ್ದ ನಿರ್ಧಾರ ಏನು..?
ವಿವಾದ ಕುರಿತು ಮಾಜಿ ಶಾಸಕಿ, ಕಂಬಳ ಸಮಿತಿ ಗೌರವಾಧ್ಯಕ್ಷೆ ಶಕುಂತಲಾ ಶೆಟ್ಟಿ ಮಾತನಾಡಿದ್ದಾರೆ. ‘ಕಂಬಳಕ್ಕೆ ಸಾನ್ಯಾ ಅತಿಥಿಯಾಗಿ ಬಂದು, ತುಳುನಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಐ ಲವ್ ಯೂ ಪುತ್ತೂರು ಎಂದು ಹೇಳುವ ಮೂಲಕ ಅಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹೊರಟು ಹೋಗಿದ್ದರು. ಆದರೆ, ಮತ್ತೆ ಅವರು ಕಂಬಳ ನೋಡಲು ಸ್ನೇಹಿತೆಯರ ಜೊತೆ ವಾಪಸ್ಸಾಗಿದ್ದಾರೆ. ಆ ವೇಳೆಯಲ್ಲಿ ಹುಡುಗನೊಬ್ಬ ಸಾನ್ಯಾ ಐಯ್ಯರ್ ಜೊತೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕೈ ಹಿಡಿದು ಎಳೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕಂಬಳ ಸಮಿತಿಯ ಗಮನಕ್ಕೆ ಬಂದಿಲ್ಲ’ ಎಂದು ಹೇಳಿದ್ದಾರೆ.
‘ಯಾರೋ ಅಸಭ್ಯವಾಗಿ ವರ್ತಿಸಿದ್ದಾರೆಂದು ಇನ್ಯಾರನ್ನೋ ಗುರಿ ಮಾಡುವುದು ತಪ್ಪು. ಸುಖಾಸುಮ್ಮನೆ ಕಂಬಳ ಸಮಿತಿಯನ್ನು ಗುರಿ ಮಾಡುತ್ತಿರುವುದು ತಮಗೆ ಬೇಸರ ತಂದಿದೆ. ಕಂಬಳ ಸಮಿತಿಯನ್ನು ಕೆಟ್ಟ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಹಾಗಾಗಿ ನಿಂದಿಸಿದವರನ್ನು ನೀನೇ ನೋಡಿಕೋ ದೇವಾ… ನೀನೇ ನ್ಯಾಯ ಕೊಡಿಸು ಎಂದು ಮಹಾಲಿಂಗೇಶ್ವರನ ಬಳಿ ಕಂಬಳ ಸಮಿತಿ ಪ್ರಾರ್ಥನೆ ಸಲ್ಲಿಸಿದೆ ಎಂದರು.
‘ಈ ವಿಚಾರದಲ್ಲಿ ನಾವು ಸಾನ್ಯಾ ಪರವಾಗಿ ನಿಲ್ಲುತ್ತೇವೆ. ಸಾನ್ಯಾಗೆ ತೊಂದರೆಯಾಗಿದ್ದರೆ ಪೊಲೀಸರಿಗೆ ದೂರು ನೀಡಲಿ. ಆಕೆಗೆ ಬೇಕಿರುವ ಎಲ್ಲಾ ಸಹಾಯವನ್ನು ಸಮಿತಿ ಮಾಡುತ್ತದೆ. ಕೆಲವು ಶಕ್ತಿಗಳು ಈ ಪ್ರಕರಣಕ್ಕೆ ಹಿಂದೂ, ಮುಸ್ಲಿಂ ಬಣ್ಣ ಹಚ್ಚುತ್ತಿದ್ದಾರೆ. ಇದು ಬೇಸರ ತಂದಿದೆ’ ಎಂದು ಹೇಳಿದ್ದಾರೆ.