T-20ಗೆ ಸಂಜು Or ಶ್ರೇಯಸ್ ಕ್ಯಾಪ್ಟನ್ – ಸೂರ್ಯನ ಸಾರಥ್ಯ ಕೊನೆಯಾಗುತ್ತಾ?
IPLನಲ್ಲೇ ನಾಯಕನ ಆಡಿಷನ್!

ಹೊಸ ನೀರು ಬಂದಾಗ ಹಳೇ ನೀರು ಕೊಚ್ಚಿಕೊಂಡು ಹೋಯ್ತು ಅನ್ನೋ ಹಾಗೇ ಕ್ರಿಕೆಟ್ನಲ್ಲೂ ಹಿರಿಯರೆಲ್ಲಾ ತೆರೆಮರೆಗೆ ಸರೀತಿದ್ರೆ ಕಿರಿಯರು ಮೆರೆಯೋಕೆ ಶುರು ಮಾಡಿದ್ದಾರೆ. ಈಗ ಭಾರತದ ಟಿ-20ಐ ತಂಡಕ್ಕೂ ಹೊಸ ನಾಯಕನ ಚರ್ಚೆ ನಡೀತಿದೆ. ಮಾಜಿ ಕ್ರಿಕೆಟಿಗರೇ ಈ ಬಗ್ಗೆ ಧ್ವನಿ ಎತ್ತಿರೋದ್ರಿಂದ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ. 2026ರ ಟಿ-20 ವಿಶ್ವಕಪ್ ಭಾರತಕ್ಕೆ ತುಂಬಾನೇ ಸ್ಪೆಷಲ್. ಕಳೆದ 2 ಬಾರಿ ಟ್ರೋಫಿಗಳನ್ನ ವಿದೇಶಿ ನೆಲದಲ್ಲಿ ಗೆದ್ದಿದ್ರೆ ಈ ಸಲ ಭಾರತದ ನೆಲದಲ್ಲೇ ಕಪ್ ಗೆದ್ದಿದ್ದು ಎಂದೆಂದಿಗೂ ಮರೆಯಲಾಗದ ಖುಷಿ ನೀಡಿದೆ. ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್. ಹೀಗಿದ್ರೂ ವಿಶ್ವಕಪ್ ಬಳಿಕ ಸೂರ್ಯನ ನಿವೃತ್ತಿ ಬಗ್ಗೆ ಚರ್ಚೆಗಳು ಶುರುವಾಗಿವೆ. ಸ್ವತಃ ಸೂರ್ಯಕುಮಾರ್ ಯಾದವ್ ಇದನ್ನ ನಿರಾಕರಿಸಿದ್ರೂ ಕೂಡ ಒಂದಷ್ಟು ಮಾಜಿ ಕ್ರಿಕೆಟಿಗರು ಹೊಸ ನಾಯಕನ ಬಗ್ಗೆ ಸ್ಟೇಟ್ಮೆಂಟ್ಗಳನ್ನ ಪಾಸ್ ಮಾಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬಿಸಿಸಿಐ ಮ್ಯಾನೇಜ್ಮೆಂಟ್ ಕಠಿಣ ನಿರ್ಧಾರ ತೆಗೆದುಕೊಳ್ಬೇಕು ಎಂದಿದ್ದಾರೆ. ಹಾಗೇ ಯಾರನ್ನ ಮಾಡ್ಬೋದು ಅನ್ನೋ ಬಗ್ಗೆಯೂ ಸಜೇಷನ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ : Jokers of Cricket ಪಾಕಿಸ್ತಾನ! – ಟ್ರಾಫಿಕ್ ಪೊಲೀಸರಿಂದಲೂ ಟ್ರೋಲ್
ಟಿ-20ಐಗೆ ಮುಂದಿನ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಎಂದ ಚೋಪ್ರಾ!
ಟೀಂ ಇಂಡಿಯಾದ ಟಿ-20ಐ ತಂಡಕ್ಕೆ ಮುಂದಿನ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅಂತಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಮುನ್ನಡೆಸುವ ಶ್ರೇಯಸ್ ಮುಂದೆ ಭಾರತಕ್ಕೆ ಚುಟುಕು ಮಾದರಿಯ ನಾಯಕನಾಗುವ ಅವಕಾಶವನ್ನ ಹೊಂದಿದ್ದಾರೆ ಎನ್ನೋ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ಅಸಲಿಗೆ ಇತ್ತೀಷೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ 2026ಕ್ಕೆ ಶ್ರೇಯಸ್ ಆಯ್ಕೆನೇ ಆಗಿರಲಿಲ್ಲ. ಹೀಗಿದ್ರೂ 2026ರಲ್ಲೂ ಪಂಜಾಬ್ ತಂಡವನ್ನ ಅದ್ಭುತವಾಗಿ ನಿಭಾಯಿಸಿದ್ರೆ ಫ್ಯೂಚರ್ನಲ್ಲಿ T20I ಸೆಟಪ್ನಲ್ಲಿ ಸ್ಥಾನ ಪಡೆಯುವುದು ಮಾತ್ರವಲ್ಲದೆ ತಂಡವನ್ನು ಸಮರ್ಥವಾಗಿ ಮುನ್ನಡೆಸಬಹುದು ಎಂದು ಚೋಪ್ರಾ ತಿಳಿಸಿದ್ದಾರೆ. ಹಾಗೇ ಮುಂದಿನ ದಿನಗಳಲ್ಲಿ ಮಿಡಲ್ ಆರ್ಡರ್ ನಲ್ಲಿ ಅವಕಾಶ ಪಡೆಯುತ್ತಾ ಎಂದಿದ್ದಾರೆ. ಇನ್ನು 2024ರ ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನ ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ 2025ನೇ ಸಾಲಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ಗೆ ಕೊಂಡೊಯ್ಯುವ ಮೂಲಕ ತಮ್ಮ ಕ್ಯಾಪ್ಟನ್ಸಿ ಪವರ್ ತೋರಿಸಿದ್ರು. ಇನ್ನು ಶ್ರೇಯಸ್ ಅಯ್ಯರ್ ಅಷ್ಟೇ ಅಲ್ದೇ ಬೇರೆಯವ್ರೂ ರೇಸ್ನಲ್ಲಿದ್ದಾರೆ.
ಇಶಾನ್ ಕಿಶನ್, ಸಂಜು & ಅಕ್ಷರ್ ಹೆಸರೂ ಚರ್ಚೆ!
ಇನ್ನು ಈ ಬಾರಿ ಟಿ-20 ವಿಶ್ವಕಪ್ ಗೆಲುವಿನಲ್ಲಿ ಅದ್ಭುತ ಪ್ರದರ್ಶನ ನೀಡಿರೋ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಹಾಗೇ ಅಕ್ಷರ್ ಪಟೇಲ್ ಹೆಸರೂ ಚರ್ಚೆಯಲ್ಲಿದೆ. ಟಿ-20ಐ ಮಾದರಿಯಲ್ಲಿ ಮಾತ್ರ ಆಡ್ತಿರೋ ಸಂಜು ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಪ್ಲೇಯಿಂಗ್ 11ನಲ್ಲೇ ಚಾನ್ಸ್ ಸಿಗದೇ ಇದ್ದ ಸಂಜು ಆ ನಂತ್ರ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿದ್ರು. ಅದೂ ಅಲ್ದೇ ಐಪಿಎಲ್ನಲ್ಲಿ ಕ್ಯಾಪ್ಟನ್ ಆಗಿ ಸಾಕಷ್ಟು ಎಕ್ಸ್ಪೀರಿಯನ್ಸ್ ಇದೆ. ಹೀಗಾಗೇ ಸಿಎಸ್ಕೆ ಟೀಂ ಈ ಸಲ ಸಂಜುರನ್ನ ಕರೆಸಿಕೊಂಡು ಧೋನಿ ಉತ್ತರಾಧಿಕಾರಿ ಮಾಡೋಕೆ ಪ್ಲ್ಯಾನ್ ಮಾಡಿದಂತಿದೆ. ಧೋನಿಯಂತೆಯೇ ಕೂಲ್ ಌಂಡ್ ಕಾಮ್ ಆಗಿ ಲೀಡ್ ಮಾಡ್ತಾರೆ. ಇನ್ನು ಇಶಾನ್ ಕಿಶನ್ ಕೂಡ ಇತ್ತೀಚೆಗೆ ಭಾರತ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೂ ಎಫೆಕ್ಟೀವ್ ಪರ್ಫಾಮೆನ್ಸ್ ನೀಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ನಲ್ಲಿ ಶತಕ ಗಳಿಸಿ ಜಾರ್ಖಂಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿದ್ರು. ಆ ಬಳಿಕ ಭಾರತ ತಂಡ ಸೇರಿರೋ ಕಿಶನ್ 13 ಪಂದ್ಯಗಳನ್ನ ಆಡಿದ್ದಾರೆ. 27 ವರ್ಷದ ಕಿಶನ್ 207 ಸ್ಟ್ರೈಕ್ ರೇಟ್ನಲ್ಲಿ 532 ರನ್ ಗಳಿಸಿದ್ದಾರೆ. ಹಾಗೇ ಟಿ20 ವಿಶ್ವಕಪ್ನಲ್ಲಿ 317 ರನ್ ಗಳಿಸಿದ್ದು ಟೂರ್ನಿಯಲ್ಲಿ ಟಾಪ್ 3 ಹೈಯೆಸ್ಟ್ ಸ್ಕೋರರ್ ಆಗಿದ್ದಾರೆ. ಇನ್ನು ಅಕ್ಷರ್ ಪಟೇಲ್ ಬ್ಯಾಟ್ ಹಾಗೇ ಬಾಲ್ ಎರಡ್ರಲ್ಲೂ ಬಿಗ್ ಬ್ರೇಕ್ ಥ್ರ್ಯೂಗಳನ್ನ ತಂದುಕೊಟ್ಟಿದ್ದಾರೆ. ಜೊತೆಗೆ ಟಿ-0ಐ ತಂಡಕ್ಕೆ ವೈಸ್ ಕ್ಯಾಪ್ಟನ್ ಕೂಡ ಆಗಿದ್ದಾರೆ. ಐಪಿಎಲ್ನಲ್ಲಿ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನೂ ಲೀಡ್ ಮಾಡಿರೋ ಅನುಭವ ಇದೆ. ಹೀಗಾಗಿ ಈ ಮೂವರ ಹೆಸರೂ ರೇಸ್ನಲ್ಲಿದೆ.
ಕ್ಯಾಪ್ಟನ್ ಮಾಡಲೆಂದೇ ಗಿಲ್ ಗೆ ಚಾನ್ಸ್ ಕೊಟ್ಟಿದ್ದ ಬಿಸಿಸಿಐ!
ಅಸಲಿಗೆ ಬಿಸಿಸಿಐ ಮ್ಯಾನೇಜ್ಮೆಂಟ್ ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಹಿಂದೆ ರೋಹಿತ್ ಮತ್ತು ವಿರಾಟ್ ಅವರ ಮೇಲೆ ಒತ್ತಡ ಹೇರಿ ನಿವೃತ್ತಿ ಘೋಷಿಸುವಂತೆ ಮಾಡಿದ್ರು. ಈಗ ಸೂರ್ಯಕುಮಾರ್ ಅವರಿಗೂ ವಿಶ್ರಾಂತಿ ನೀಡಿ ಯುವ ನಾಯಕತ್ವಕ್ಕೆ ಮಣೆ ಹಾಕೋ ಪ್ಲ್ಯಾನ್ನಲ್ಲಿದ್ದಾರೆ. ಇದೇ ಕಾರಣಕ್ಕೆ ಶುಭ್ಮನ್ ಗಿಲ್ರನ್ನ ಆಲ್ಫಾರ್ಮೆಟ್ ಕ್ಯಾಪ್ಟನ್ ಮಾಡಲೆಂದೇ ಟಿ-20ಐ ತಂಡಕ್ಕೆ ವಾಪಸ್ ಕರೆ ತಂದಿದ್ರು. ಏಷ್ಯಾಕಪ್ ಮೂಲಕ ಓಪನರ್ ಆಗಿ ಕಣಕ್ಕಿಳಿಸಿದ್ರು. ಬಟ್ ಬ್ಯಾಡ್ಲಕ್ ಅಂದ್ರೆ ಗಿಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಹೀಗಾಗಿ ಟಿ-20 ವಿಶ್ವಕಪ್ಗೂ ಮುನ್ನ ತಂಡದಿಂದಲೇ ಹೊರಗಿಟ್ರು.
ಹಾರ್ದಿಕ್ ಪಾಂಡ್ಯ ಬೆಸ್ಟ್ ಅನ್ಸಿದ್ರೂ ಇಂಜುರಿ ನೆಪ!
ಇನ್ನು 2024ರಲ್ಲಿ ರೋಹಿತ್ ಶರ್ಮಾ ನಿವೃತ್ತಿಯಾದಾಗ್ಲೇ ಹಾರ್ದಿಕ್ ಕ್ಯಾಪ್ಟನ್ ಆಗ್ತಾರೆ ಅನ್ಸಿತ್ತು. ಆದ್ರೆ ಸೂರ್ಯನಿಗೆ ನಾಯಕತ್ವ ನೀಡಿದ್ರು. ಕ್ಯಾಪ್ಟನ್ ಆಗೋಕೆ ನಿಜಕ್ಕೂ ಪಾಂಡ್ಯಗೆ ಎಲ್ಲಾ ಕ್ವಾಲಿಟೀಸ್ ಇದೆ. ಜಿಟಿ ತಂಡವನ್ನ ಚಾಂಪಿಯನ್ ಮಾಡಿದ್ರು. ಹೀಗಾಗಿ ಎಂಐನಲ್ಲೂ ನಾಯಕತ್ವ ಸಿಕ್ಕಿತ್ತು. ಬಟ್ ಇಂಜುರಿ ಕಾರಣದಿಂದಾಗಿ ಟಿ-20ಐ ನಾಯಕತ್ವ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಐಪಿಎಲ್ ಆದ್ಮೇಲೆ ಹೊಸ ನಾಯಕನ ಕಡೆ ನೋಡೋ ನಿರೀಕ್ಷೆ ಇದೆ. ಯಾಕಂದ್ರೆ ಐಪಿಎಲ್ ಬಹಳ ಹಿಂದಿನಿಂದಲೂ ಭಾರತದ ಟಿ20 ಕ್ರಿಕೆಟ್ನ ಅತಿದೊಡ್ಡ ಲ್ಯಾಬೋರೇಟರಿಯಾಗಿದೆ. ಗಂಭೀರ್ ಅವರ ಐಪಿಎಲ್ ಯಶಸ್ಸೇ ರಾಷ್ಟ್ರೀಯ ಕೋಚಿಂಗ್ ಕೆಲಸಕ್ಕೆ ಬಾಗಿಲು ತೆರೆದಿತ್ತು, ಹೀಗಾಗಿ ಐಪಿಎಲ್ 2026ರ ಸೀಸನ್ ಭಾರತದ ಮುಂದಿನ ಟಿ20ಐ ನಾಯಕನನ್ನು ಸದ್ದಿಲ್ಲದೆ ರೂಪಿಸಬಹುದು. ಪ್ರೆಶರ್, ಗೇಮ್ಪ್ಲ್ಯಾನ್, ಕ್ಯಾಪ್ಟನ್ಸಿ ಕ್ವಾಲಿಟೀಸ್ ಮೇಲೆ ಬಿಸಿಸಿಐ ಆಯ್ಕೆದಾರರು ಸದಾ ಕಣ್ಣಿಟ್ಟಿರುತ್ತಾರೆ.

ನೋಡಿರಿ

