ಐಸಿಸಿಯ ಏಳನೇ ಸಿಇಒ ನೇಮಕ – ಸಂಜೋಗ್ ಗುಪ್ತಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚುಕ್ಕಾಣಿ

ಐಸಿಸಿಯ ಏಳನೇ ಸಿಇಒ  ನೇಮಕ –  ಸಂಜೋಗ್ ಗುಪ್ತಾಗೆ  ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚುಕ್ಕಾಣಿ

 

ಭಾರತೀಯ ಮಾಧ್ಯಮದ ಅನುಭವಿ ಸಂಜೋಗ್ ಗುಪ್ತಾ ಅವರನ್ನು  ಜಯ್ ಶಾ ನೇತೃತ್ವದ  ಐಸಿಸಿ ಹೊಸ ಸಿಇಒ ಆಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ ಅವರ ಬದಲಿಗೆ, ಸಂಜೋಗ್‌ ಅಧಿಕಾರ ಸ್ವೀಕರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಈ ವರ್ಷದ ಆರಂಭದಲ್ಲಿ ಜೆಫ್ ಅಲಾರ್ಡೈಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮೊದಲು ಅವರು 4 ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು.

ಇದನ್ನೂ ಓದಿ: ಕಾಂತಾರ -1’ ರಿಲೀಸ್ ಡೇಟ್ ಫಿಕ್ಸ್ – ಅ.2ಕ್ಕೆ ರಿಷಬ್ ದಂತಕಥೆ ದರ್ಶನ

ಸಂಜೋಗ್ ಗುಪ್ತಾ ಪ್ರಸ್ತುತ ಜಿಯೋಸ್ಟಾರ್‌ನಲ್ಲಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ವಿವಿಧ ಕಾರ್ಯಗಳ ಅನುಭವವಿದೆ. ಸಂಜೋಯ್ ಗುಪ್ತಾ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹೊಸ ಹುದ್ದೆಯನ್ನ ವಹಿಸಿಕೊಳ್ಳಲಿದ್ದಾರೆ. ಸಂಜೋಗ್ ಗುಪ್ತಾ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2010ರಲ್ಲಿ ಸ್ಟಾರ್ ಇಂಡಿಯಾ  ಸೇರಿದರು. 2020ರಲ್ಲಿ ಡಿಸ್ನಿ ಮತ್ತು ಸ್ಟಾರ್ ಇಂಡಿಯಾದಲ್ಲಿ ಕ್ರೀಡಾ ಮುಖ್ಯಸ್ಥರಾಗಿ ನೇಮಕಗೊಂಡರು.

ನವೆಂಬರ್ 2024ರಲ್ಲಿ ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ವಿಲೀನದ ನಂತರ ಸಂಜೋಗ್ ಗುಪ್ತಾ ಅವರನ್ನು ಜಿಯೋಸ್ಟಾರ್ ಸ್ಪೋರ್ಟ್ಸ್‌ನ ಸಿಇಒ ಆಗಿ ನೇಮಿಸಲಾಯಿತು. ಐಸಿಸಿಯ ಸಿಇಒ ಹುದ್ದೆಯನ್ನು ಈ ಹಿಂದೆ ಆಸ್ಟ್ರೇಲಿಯನ್ನರಾದ ಡೇವಿಡ್ ರಿಚರ್ಡ್ಸ್, ಮಾಲ್ಕಮ್ ಸ್ಪೀಡ್ ಮತ್ತು ಅಲಾರ್ಡೈಸ್, ದಕ್ಷಿಣ ಆಫ್ರಿಕನ್ನರಾದ ಡೇವಿಡ್ ರಿಚರ್ಡ್ಸನ್ ಮತ್ತು ಆರನ್ ಲೋರ್ಗಟ್ ಮತ್ತು ಭಾರತ ಮೂಲದ ಮನು ಸಾಹ್ನಿ ನಿರ್ವಹಿಸಿದ್ದಾರೆ.

ಸಂಜೋಗ್ ಗುಪ್ತಾ ಐಸಿಸಿಯ ಏಳನೇ ಸಿಇಒ ಆಗಲಿದ್ದಾರೆ. ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಯು ಈ ಹುದ್ದೆಗೆ 25 ದೇಶಗಳಿಂದ 2,500ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಅದರಲ್ಲಿ 12 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಐಸಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಅಭ್ಯರ್ಥಿಗಳಲ್ಲಿ ಆಟದ ಆಡಳಿತ ಮಂಡಳಿಗಳ ಅಧಿಕಾರಿಗಳು ಮತ್ತು ಕಾರ್ಪೊರೇಟ್ ಜಗತ್ತಿನ ಹಿರಿಯ ಅಧಿಕಾರಿಗಳು ಸೇರಿದ್ದಾರೆ’ ಎಂದು ತಿಳಿಸಿದೆ.

Kishor KV