ಸಾನಿಯಾ ಮಿರ್ಜಾ ಗ್ರ್ಯಾಂಡ್ ಸ್ಲಾಮ್ ಪಯಣ ಅಂತ್ಯ – ಕೊನೇ ಪಂದ್ಯದ ಬಳಿಕ ಮೂಗುತಿ ಸುಂದರಿ ಭಾವುಕ
ಸಿಡ್ನಿ: ಭಾರತದ ಟೆನಿಸ್ ಲೆಜೆಂಡ್ ಸಾನಿಯಾ ಮಿರ್ಜಾ ಅವರ ಗ್ರ್ಯಾಂಡ್ ಸ್ಲಾಮ್ ಪಯಣ ಅಂತ್ಯವಾಗಿದೆ. ತಮ್ಮ ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಮ್ ಪಂದ್ಯದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ಸಾನಿಯಾ ಮಿರ್ಜಾ ತಮ್ಮ ಸುದೀರ್ಘ ಪಯಣಕ್ಕೆ ಗುಡ್ ಬೈ ಹೇಳಿದ್ದಾರೆ. ಭಾರತದ ತಾರಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಓಪನ್ 2023 ಮಿಶ್ರ ಡಬಲ್ಸ್‌ನ ಫೈನಲ್‍ನಲ್ಲಿ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು. ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‍ನ ಜೋಡಿ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮ್ಯಾಟೋಸ್ ವಿರುದ್ಧ ಸಾನಿಯಾ, ಬೋಪಣ್ಣ ಜೋಡಿ 6-7 (2-6), 2-6 ಅಂತರದಲ್ಲಿ ಸೋಲಬೇಕಾಯ್ತು.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರಿಗೆ ಧೋನಿ ಸರ್‌ಪ್ರೈಸ್ -–ಡ್ರೆಸ್ಸಿಂಗ್ ರೂಮ್‌ನಲ್ಲಿ ಫುಲ್ ಜೋಶ್
ಈ ಮೊದಲು ಸೆಮಿಫೈನಲ್‍ನಲ್ಲಿ ಸಾನಿಯಾ, ಬೋಪಣ್ಣ ಬ್ರಿಟನ್‍ನ ಆನ್ ಸ್ಕುಪ್‍ಸ್ಕಿ ಮತ್ತು ಅಮೆರಿಕದ ಡಿ ಕರಾವ್‍ಜಿಕ್ ಜೋಡಿಯನ್ನು 7-6, 6-7, 10-6 ಅಂತರದಲ್ಲಿ ಮಣಿಸಿ ಫೈನಲ್‍ಗೆ ಎಂಟ್ರಿಯಾಗಿದ್ದರು. ಇದು ಸಾನಿಯಾ ಅವರ ಕೊನೆಯ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾಗಿತ್ತು. ಈ ಟೂರ್ನಿ ಆರಂಭಕ್ಕೂ ಮುನ್ನವೇ ಅವರು ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಫೈನಲ್ ಪ್ರವೇಶಿಸಿದ್ದರಿಂದ ಪ್ರಶಸ್ತಿಯೊಂದಿಗೆ ಗ್ರ್ಯಾಂಡ್ ಸ್ಲಾಮ್‍ಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು. ಆದರೆ ಫೈನಲ್‍ನಲ್ಲಿ ಸೋತು ನಿರಾಸೆ ಅನುಭವಿಸಿದರು. ಈವರೆಗೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದಲ್ಲಿ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಸಾನಿಯಾ ಮಿರ್ಜಾ ಕೆಲ ಹೊತ್ತು ಭಾವುಕರಾದರು.