ಸ್ಯಾಂಡಲ್ ವುಡ್ ನ ಹಿರಿಯ ನಟ ಲಕ್ಷ್ಮಣ್  ಹೃದಯಾಘಾತದಿಂದ ನಿಧನ

ಸ್ಯಾಂಡಲ್ ವುಡ್ ನ ಹಿರಿಯ ನಟ ಲಕ್ಷ್ಮಣ್  ಹೃದಯಾಘಾತದಿಂದ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನ ಹೆಸರಾಂತ ನಟ ಲಕ್ಷ್ಮಣ್ ಅವರು ಹೃದಯಾಘಾತದಿಂದ ಇಂದು (ಸೋಮವಾರ) ಮುಂಜಾನೆ ನಿಧನರಾಗಿದ್ದಾರೆ.

ಲಕ್ಷ್ಮಣ್ ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮುಂಜಾನೆ ಸುಮಾರು 4 ಗಂಟೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಿನ್ನೆ ಸಂಜೆಯೂ ಲಕ್ಷ್ಮಣ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ನಾಗರಭಾವಿಯಲ್ಲಿರುವ ಜಿಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದರು. ಹೀಗಾಗಿ ಅವರನ್ನು ಮನೆಗೆ ಕರೆತರಲಾಗಿತ್ತು. ಆದರೆ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಲಕ್ಷ್ಮಣ್ ಅವರು ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿದ್ದಾರೆ. ಮಲ್ಲ, ಯಜಮಾನ, ಸೂರ್ಯವಂಶ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಟ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ಡಾ.ರಾಜ್ ಕುಮಾರ್, ಡಾ.ಅಂಬರೀಶ್, ಡಾ.ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

suddiyaana