ಬೆಳಗಾವಿ ಗಡಿ ವಿವಾದ – ಕನ್ನಡಿಗರನ್ನು ಕೆಣಕಬೇಡಿ ಎಂದು ಸಿಡಿದೆದ್ದ ಸ್ಯಾಂಡಲ್‌ವುಡ್

ಬೆಳಗಾವಿ ಗಡಿ ವಿವಾದ – ಕನ್ನಡಿಗರನ್ನು ಕೆಣಕಬೇಡಿ ಎಂದು ಸಿಡಿದೆದ್ದ ಸ್ಯಾಂಡಲ್‌ವುಡ್

ಬೆಳಗಾವಿ ಗಡಿ ವಿವಾದದ ಬಗ್ಗೆ ಸ್ಯಾಂಡಲ್‌ವುಡ್ ಸಿಡಿದೆದ್ದಿದೆ. ಗಡಿ ವಿಚಾರ ಮುಂದಿಟ್ಟುಕೊಂಡು ಕನ್ನಡಿಗರನ್ನು ಕೆಣಕಬೇಡಿ, ಬೆಳಗಾವಿ ನಮ್ಮದು ಎನ್ನುವ ಮೂಲಕ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ದನಿಗೂಡಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಾಯಿಕುಮಾರ್, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್ ಸೇರಿದಂತೆ ಅನೇಕ ಕಲಾವಿದರು ಬೆಳಗಾವಿ ಗಡಿ ವಿವಾದದ ಬಗ್ಗೆ ಮಾತನಾಡಿ ಬೆಳಗಾವಿ ನಮ್ಮದು ಎಂದು ಸ್ಪಷ್ಪಪಡಿಸಿದ್ದಾರೆ.

ಇದನ್ನೂ ಓದಿ:  ‘ಸೀತೆ’ಯಾಗಿ ಬಾಲಿವುಡ್‌ಗೆ ‘ಸಾಯಿಪಲ್ಲವಿ’ ಬಿಗ್ ಎಂಟ್ರಿ

ಬೆಳಗಾವಿ ಗಡಿ ವಿವಾದದ ಬಗ್ಗೆ ಮಾತನಾಡಿರುವ ನಟ ಶಿವರಾಜ್ ಕುಮಾರ್, ‘ಗಡಿ ವಿವಾದದ ಸಮಯದಲ್ಲಿ ಕನ್ನಡ ಚಿತ್ರರಂಗ ಒಗ್ಗಾಟ್ಟಾಗಿರುತ್ತದೆ. ಕನ್ನಡ ಮತ್ತು ಕರ್ನಾಟಕದ ಪರ ಹೋರಾಟಗಳನ್ನು ನಾವು ಒಟ್ಟಾಗಿ ಎದುರಿಸೋಣ. ನಾವಿರುವ ಜಾಗ ನಮಗೆ ಮುಖ್ಯ’ ಎಂದು ಹೇಳಿದ್ದಾರೆ.

ಮೂಲತಃ ತೆಲುಗಿನವರಾದ ನಟ ಸಾಯಿಕುಮಾರ್ ಅವ್ರಿಗೆ ಕನ್ನಡ, ಕನ್ನಡದ ನೆಲ ಅಂದರೆ ಅಪಾರ ಪ್ರೀತಿ. ತನ್ನನ್ನ ನಟನಾಗಿ ಪೋಷಿಸಿದ್ದು ಕರ್ನಾಟಕ ಅನ್ನೋ ಹೆಮ್ಮೆ ಅವರಿಗೆ. ಕನ್ನಡ ನಾಡಿನ ಸುದ್ದಿಗೆ ಬಂದರೆ ಹೋರಾಟಕ್ಕೆ ಸಿದ್ಧ ಅನ್ನೋ ರೀತಿ ಸೋಷಿಯಲ್ ಮೀಡಿಯಾದಲ್ಲಿ, ‘ಬೆಳಗಾವಿ ನಮ್ಮದು’ ಎಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ತೆಲುಗಿನವರಾದರೂ ನಮ್ಮ ಕನ್ನಡ ನಾಡಿನ ಮೇಲೆ ಅಭಿಮಾನ ತೋರಿದ್ದಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಟ ನೀನಾಸಂ ಸತೀಶ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿ ಯಾವಾಗಲೂ ಕನ್ನಡಿಗರದ್ದೇ. ಅಲ್ಲಿನ ಜನರೆಲ್ಲರೂ ನಮ್ಮವರೆ ಎಂದಿರುವ ನಟ ನೀನಾಸಂ ಸತೀಶ್, ‘ಭಾರತ ವೈವಿಧ್ಯತೆಯಲ್ಲಿ ಏಕತೆ ಕಾಣುವ ದೇಶ. ಮುಂಬಯಿಯಲ್ಲಿ ಕನ್ನಡಿಗರಿದ್ದಾರೆ, ಸಿಂಗಾಪುರದಲ್ಲಿ ಕನ್ನಡಿಗರಿದ್ದಾರೆ. ಹಾಗೆಂದ ಮಾತ್ರಕ್ಕೆ ಅದ್ಯಾವುದು ಕರ್ನಾಟಕವಲ್ಲ. ಬೆಳಗಾವಿಯಲ್ಲಿ ಯಾರೂ ಬೇಕಾದರೂ ಜೀವನ ಮಾಡಬಹುದು. ಹಾಗಂತ ಅದು ಅವರದ್ದಲ್ಲ, ಕರ್ನಾಟಕದ್ದು. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಪ್ರೀತಿಯಿಂದ ಜೀವನ ಮಾಡಬೇಕು. ನಾವು ಎಲ್ಲರನ್ನು ಪ್ರೀತಿಸುತ್ತೇವೆ ಎಂದ ಮಾತ್ರಕ್ಕೆ ಅದನ್ನು ಬಲಹೀನತೆ ಎಂದುಕೊಂಡು ನಮ್ಮ ಮೇಲೆ ಪ್ರಹಾರ ಮಾಡಬಾರದು’ ಎಂದಿದ್ದಾರೆ. ಇನ್ನೂ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ‘ಕನ್ನಡಿಗರು ಯಾರಿಗೂ ತೊಂದರೆ ಕೊಡುವಂಥವರಲ್ಲ. ನಾವು ಯಾರ ಸ್ವಾಭಿಮಾನಕ್ಕೂ ಧಕ್ಕೆ ತರುವುದಿಲ್ಲ. ಹಾಗಂತ ನಮ್ಮ ನಾಡು, ನುಡಿ, ಜಲ, ಸ್ವಾಭಿಮಾನದ ವಿಚಾರದಲ್ಲಿ ಕೈ ಕಟ್ಟಿ ಕೂರುವಂತವರೂ ಅಲ್ಲ. ನಿಮ್ಮ ನಡತೆಯ ಮೇಲೆ ಎಚ್ಚರವಿರಲಿ. ಇಲ್ಲದಿದ್ದರೆ ಎಚ್ಚರಿಸಬೇಕಾದಿತು’ ಎಂದು ಬರೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

suddiyaana