ನಟ, ಐಎಎಸ್ ಅಧಿಕಾರಿ ಶಿವರಾಮ್ ಅನಾರೋಗ್ಯ – ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ನಟ, ಐಎಎಸ್ ಅಧಿಕಾರಿ ಶಿವರಾಮ್ ಅನಾರೋಗ್ಯ – ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಕನ್ನಡದ ಖ್ಯಾತ ನಟ ಕೆ. ಶಿವರಾಮ್ ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಡಿಯಕ್ ಅರೆಸ್ಟ್ ಹಾಗೂ ಬ್ರೈನ್ ಡೆಡ್ ಆಗಿದ್ದು, ನಗರದ ಎಚ್ ಸಿ ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಶಿವರಾಮ್ ಅವರ ಅಳಿಯ ಭರತ್ ಮಾಹಿತಿ ನೀಡಿದ್ದಾರೆ. ಕಳೆದ  20 ದಿನಗಳ ಹಿಂದೆ ರಕ್ತದೊತ್ತಡದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೆ. ಶಿವರಾಮ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರಿಗೆ ಡಯಾಲಿಸಿಸ್ ನೀಡಲಾಗುತ್ತಿದೆ. ಶಿವರಾಮ್ ಅವರು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಕ್​ ಪರ ಘೋಷಣೆ ಆರೋಪ – ವಿಧಾನಸಭೆ ಕಲಾಪ ಮತ್ತೊಂದು ದಿನಕ್ಕೆ ವಿಸ್ತರಣೆ

ಕೆ ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿದ್ದು, ಬುಧವಾರ ಅವರಿಗೆ ಹೃದಯಾಘಾತವಾಗಿದೆ. ಶಿವರಾಮ್ ಅವರ ಮೆದುಳು ನಿಷ್ಕ್ರಿಯವಾಗಿದೆ ಎನ್ನಲಾಗುತ್ತಿದ್ದು, ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧು ಚಂದ್ರಕೆ’, ‘ವಸಂತಕಾವ್ಯ’, ‘ಖಳನಾಯಕ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ನಾಗ’, ‘ಓ ಪ್ರೇಮ ದೇವತೆ’, 2007ರಲ್ಲಿ ಬಿಡುಗಡೆ ಆದ ‘ಟೈಗರ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. 2007 ರ ಬಳಿಕ ಶಿವರಾಮ್ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ.

ಕೆ ಶಿವರಾಮ್ ಅವರು ಐಎಎಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ನಿವೃತ್ತರಾದ ಬಳಿಕ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಕೆ ಶಿವರಾಮ್, 2013 ರಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದರು, ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು, 2016ರ ಬಳಿಕ ಬಿಜೆಪಿ ಪಕ್ಷ ಸೇರಿದ್ದರು. ಇದಲ್ಲದೆ, ಛಲವಾದಿ ಮಹಾಸಭಾದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

Shwetha M