ಹಿರಿಯ ನಟ ದ್ವಾರಕೀಶ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ – ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದನವನದ ಕುಳ್ಳ
ಹಿರಿಯ ನಟ ದ್ವಾರಕೀಶ್ ಅವರು ಇಹಲೋಕ ತ್ಯಜಿಸಿದ್ದಾರೆ. ಮಂಗಳವಾರ ಬೆಳಗ್ಗೆ ದ್ವಾರಕೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಟೌನ್ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ಹಿರಿಯ ನಟ ದ್ವಾರಕೀಶ್ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ರಾಜ್ಯ ಸರಕಾರ ಸಂತಾಪ ಸೂಚಿಸಿದ್ದು, ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: ದ್ವಾರಕೀಶ್ ಮತ್ತು ವಿಷ್ಣುವರ್ದನ್ ನಡುವೆ ಸ್ನೇಹದಲ್ಲಿ ಬಿರುಕು ಮೂಡಿದ್ದು ಹೇಗೆ?
ದ್ವಾರಕೀಶ್ ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 11.30 ರಿಂದ 12.30ರ ಒಳಗೆ ನಡೆಯಲಿದ್ದು, ಟಿ ಆರ್ ಮಿಲ್ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಮೊದಲಿಗೆ ಪ್ರೇತ ಸಂಸ್ಕಾರ. ಆನಂತರ ಕಿವಿಯಲ್ಲಿ ನಾರಾಯಣ ಸ್ಮರಣೆ. ಚಿತಾ ಅಗ್ನಿ ಹೋಮದ ನಂತರ ಚಿತಾ ಶುದ್ಧಿ , ಭೂ ಸ್ಪರ್ಶ ದಹನ ಮಾಡಿ, ಆಮೇಲೆ ಅಗ್ನಿ ದಿಗ್ಬಂಧನ ಮಾಡಲಾಗುತ್ತಿದೆ. ಕೊನೆಯಲ್ಲಿ ಹಿರಿ ಮಗನಿಂದ ಅಗ್ನಿ ಸ್ಪರ್ಶ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಇನ್ನು ಹಿರಿಯ ನಟ ದ್ವಾರಕೀಶ್ ಅವರ ನಿಧನಕ್ಕೆ ಸ್ಯಾಂಡಲ್ವುಡ್ ಕಂಬನಿ ಮಿಡಿದಿದೆ. ಚಂದನವನದ ಕಲಾವಿದರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಎಕ್ಸ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಹಿರಿಯ ನಟ ದ್ವಾರಕೀಶ್ ಅವರ ಕೊಡುಗೆ ಅಪಾರ. ಅವರ ಅದ್ಭುತ ಅಭಿನಯವು ದಶಕಗಳ ಕಾಲ ಜನರನ್ನ ರಂಜಿಸಿ ಮನದಲ್ಲಿ ಇನ್ನು ಹಾಗೇ ಉಳಿದಿದೆ. ಸಿನಿಮಾ ಕಡೆಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಾಗೂ ಯುವ ನಟರಿಗೆ ಬೆಂಬಲ ಕೊಡುವಲ್ಲಿ ದ್ವಾರಕೀಶ್ ಮೊದಲಿಗರಾಗಿದ್ದರು. ಹೀಗಾಗಿಯೇ ಕನ್ನಡ ಚಿತ್ರರಂಗ ರೂಪಿಸುವಲ್ಲಿ ಅವರ ಬಹುಮುಖಿ ಪಾತ್ರವೂ ಒಂದು. ಸದ್ಯ ಅವರ ನಿಧನದ ಸುದ್ದಿ ತಿಳಿದು ದುಃಖವಾಗಿದೆ. ಸಿನಿಮಾ ರಂಗದಲ್ಲಿ ಅವರ ಅಪೂರ್ವ ಪ್ರಯಾಣವನ್ನು ನಾವು ಸದಾ ಸ್ಮರಿಸುತ್ತೇವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ದುಃಖ ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಟ್ವಿಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ದ್ವಾರಕೀಶ್
ಸ್ಯಾಂಡಲ್ವುಡ್ ಹಿರಿಯ ನಟ ದ್ವಾರಕೀಶ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ದ್ವಾರಕೀಶ್ ಬೆಳಕಾಗಿದ್ದಾರೆ. ಬುಧವಾರ ಅವರ ಕಣ್ಣುಗಳನ್ನು ಬೇರೆಯವರಿಗೆ ಕಸಿ ಮಾಡಲಿದ್ದಾರೆ.