7 ಪಂದ್ಯ.. 72 ಬಾಲ್.. 82 ರನ್! – ಸಮಿತ್ ದ್ರಾವಿಡ್ ಕಂಪ್ಲೀಟ್ ಫೇಲ್
AUS ಸರಣಿಗೆ ಸೆಲೆಕ್ಟ್ ಆಗಿದ್ದೇ ತಪ್ಪಾ?

7 ಪಂದ್ಯ.. 72 ಬಾಲ್.. 82 ರನ್! – ಸಮಿತ್ ದ್ರಾವಿಡ್ ಕಂಪ್ಲೀಟ್ ಫೇಲ್AUS ಸರಣಿಗೆ ಸೆಲೆಕ್ಟ್ ಆಗಿದ್ದೇ ತಪ್ಪಾ?

ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಈಗಾಗ್ಲೇ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸದ್ದು ಮಾಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಹಾಗೇ ಟೀಂ ಇಂಡಿಯಾ ಅಂಡರ್ 19 ತಂಡಕ್ಕೂ ಆಯ್ಕೆ ಆಗಿದ್ದಾರೆ.   ಈ ಮೂಲಕ ದ್ರಾವಿಡ್‌ ಮಗನ ಅಂತಾರಾಷ್ಟ್ರೀಯ ಕ್ರಿಕೆಟ್‌ ಕರಿಯರ್ ಆರಂಭವಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಬಹು ಸ್ವರೂಪದ ಸರಣಿಯ ಮೂಲಕ ಸಮಿತ್‌ ದ್ರಾವಿಡ್‌ ಬ್ಲ್ಯೂ ಜೆರ್ಸಿ ತೊಟ್ಟು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬಟ್ ಸಮಿತ್ ಸೆಲೆಕ್ಟ್ ಆಗಿದ್ದು ಕೆಲವರ ಕಣ್ಣು ಕೆಂಪಾಗಿಸಿದೆ. ಅದಕ್ಕೆ ಕಾರಣ ಮಹಾರಾಜ ಟ್ರೋಫಿಯಲ್ಲಿನ ಪ್ರದರ್ಶನ.

 ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಮುಡಾ ಕೇಸ್‌ ಸಂಕಷ್ಟ! – 23 ದಿನಗಳಲ್ಲಿ ಎರಡನೇ ಬಾರಿಗೆ ನಾಡದೇವತೆ ದರ್ಶನ ಪಡೆದ ಸಿಎಂ

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲೇ ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆದ್ದು ಬೀಗಿತ್ತು. ವಿಶ್ವಕಪ್ ಗೆಲುವಿನೊಂದಿಗೆ ದ್ರಾವಿಡ್ ಅವರ ಮುಖ್ಯ ಕೋಚ್ ಅವಧಿ ಕೂಡ ಮುಕ್ತಾಯಗೊಂಡಿತ್ತು. ಇದೀಗ ಅಪ್ಪನ ಹಾದಿಯಲ್ಲೇ ಮಗ ಸಮಿತ್ ದ್ರಾವಿಡ್ ಕೂಡ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡಲು ಶುರು ಮಾಡಿದ್ದಾರೆ. 18 ವರ್ಷದ ಸಮಿತ್ ದ್ರಾವಿಡ್, ಆಸ್ಟ್ರೇಲಿಯಾ ವಿರುದ್ಧದ ಅಂಡರ್ 19 ಸರಣಿಗೆ ಭಾರತ ತಂಡದ ಭಾಗವಾಗಿದ್ದಾರೆ. ಆದ್ರೆ ಸಮಿತ್ ಸೆಲೆಕ್ಟ್ ಆಗಿರೋದು ಕ್ರಿಕೆಟ್ ವಲಯದಲ್ಲಿ ಕೆಲವರ ಅಸಮಾಧಾನಕ್ಕೆ ಕಾರಣ ಆಗಿದೆ.

ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸದ್ದು ಮಾಡದ ಸಮಿತ್!

ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಎಲ್ಲರ ಗಮನ ಸೆಳೆದ ಆಟಗಾರನೆಂದರೆ ಸಮಿತ್ ದ್ರಾವಿಡ್. ಹೀಗೆ ಎಲ್ಲರ ಕೇಂದ್ರ ಬಿಂದುವಾಗಲು ಮುಖ್ಯ ಕಾರಣ ಹೆಸರಿನ ಹಿಂದೆಯಿದ್ದ ದ್ರಾವಿಡ್ ಎನ್ನುವ ಸರ್​​ನೇಮ್. ತಂದೆ ರಾಹುಲ್ ದ್ರಾವಿಡ್ ಅವರ ಸುಪುತ್ರನಾಗಿದ್ದರಿಂದ ಸಮಿತ್ ಟೂರ್ನಿಯ ಆರಂಭದಿಂದಲೇ ಸುದ್ದಿಯಲ್ಲಿದ್ದರು. ಆದರೆ ಟೂರ್ನಿ ಮುಗಿದಾಗ ಸಮಿತ್ ದ್ರಾವಿಡ್ ಸುದ್ದಿಯಾಗುತ್ತಿರುವುದು ಕಳಪೆ ಪ್ರದರ್ಶನದ ಕಾರಣದಿಂದ. ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ-20 ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಕೂಡ ಕಣಕ್ಕಿಳಿದಿದ್ರು. ಮೈಸೂರು ವಾರಿಯರ್ಸ್ ಪರ ಬ್ಯಾಟ್ ಬೀಸಿದ್ರು. ಮೈಸೂರು ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟಕ್ಕೂ ಏರಿದೆ. ಆದ್ರೆ ಮಹಾರಾಜ ಟ್ರೋಫಿಯಲ್ಲಿ ಸಮಿತ್‌ ದ್ರಾವಿಡ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. 7 ಪಂದ್ಯಗಳಲ್ಲಿ ಅವಕಾಶ ಪಡೆದ ಸಮಿತ್ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. 9 ಫೋರ್ ಹಾಗೂ 3 ಸಿಕ್ಸ್ ಬಾರಿಸಲಷ್ಟೇ ಶಕ್ತರಾಗಿದ್ದಾರೆ. 7 ಪಂದ್ಯಗಳನ್ನಾಡಿರುವ ಸಮಿತ್ ಕಲೆಹಾಕಿದ್ದು ಕೇವಲ 82 ರನ್​ಗಳು. ಈ 82 ರನ್​ಗಳನ್ನು ಬಾರಿಸಲು ತೆಗೆದುಕೊಂಡಿದ್ದು 72 ಎಸೆತಗಳನ್ನು ಎಂಬುದು ಇಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರರಲ್ಲಿ ಸಮಿತ್ ದ್ರಾವಿಡ್ ಹೆಸರೂ ಸೇರಿಕೊಂಡಿದೆ.

33 ರನ್ ಗಳಿಸಿದ್ದೇ ಸಮಿತ್ ಹೈಯೆಸ್ಟ್ ಸ್ಕೋರ್!

ಮೈಸೂರು ವಾರಿಯರ್ಸ್ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸಮಿತ್ ದ್ರಾವಿಡ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಕೇವಲ 5 ರನ್​ಗಳನ್ನ ಕಲೆ ಹಾಕಿದ್ರು. ಆ ಬಳಿಕ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 12, ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2, ಮಂಗಳೂರು ಡ್ರಾಗನ್ಸ್ ವಿರುದ್ಧ 16, ಶಿವಮೊಗ್ಗ ಲಯನ್ಸ್ ವಿರುದ್ಧ 7 ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ರನ್​ ​ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 33 ರನ್ ಬಾರಿಸಿದ್ದು ಸಮಿತ್ ಅವರ ಗರಿಷ್ಠ ಸ್ಕೋರ್. 7 ಪಂದ್ಯಗಳಲ್ಲೂ ಬ್ಯಾಟ್ ಬೀಸಿರುವ ಯಂಗ್ ಬ್ಯಾಟರ್ ಕಲೆಹಾಕಿದ್ದು ಕೇವಲ 84 ರನ್​ಗಳನ್ನ ಮಾತ್ರ. ಕೇವಲ 11.71 ಸರಾಸರಿಯಲ್ಲಷ್ಟೇ ರನ್​ಗಳಿಸಿದ್ದಾರೆ. ಸಮಿತ್​ರ ಇದೇ ಕಳಪೆ ಬ್ಯಾಟಿಂಗ್ ಕಾರಣದಿಂದಲೇ ಮೈಸೂರು ವಾರಿಯರ್ಸ್ ತಂಡವು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಕಣಕ್ಕಿಳಿಸಿರಲಿಲ್ಲ.

ಆಸ್ಟ್ರೇಲಿಯಾ ಸರಣಗೆ ಪ್ಲೇಯಿಂಗ್ 11ನಲ್ಲಿ ಸಿಗುತ್ತಾ ಚಾನ್ಸ್?

ಸದ್ಯ ಸಮಿತ್ ದ್ರಾವಿಡ್ ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಂಡರ್-19 ಸರಣಿಯೂ ಸೆಪ್ಟೆಂಬರ್ 21 ರಿಂದ ಆರಂಭವಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಪುದುಚೇರಿಯಲ್ಲಿ ಸೆಪ್ಟೆಂಬರ್ 21, 23 ಮತ್ತು 26 ರಂದು ನಡೆಯಲಿದ್ದು, ಭಾರತ ತಂಡವನ್ನು ಉತ್ತರ ಪ್ರದೇಶದ ಮೊಹಮ್ಮದ್ ಅಮಾನ್ ಮುನ್ನಡೆಸಲಿದ್ದಾರೆ. ಏಕದಿನ ಸರಣಿಯ ಬಳಿಕ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯವು ಸೆಪ್ಟೆಂಬರ್ 30ರಂದು ಆರಂಭವಾದರೆ, ಎರಡನೇ ಪಂದ್ಯ ಅಕ್ಟೋಬರ್ 7ರಿಂದ 10ರವರೆಗೆ ನಡೆಯಲಿದೆ. ಈ ಸರಣಿಯಲ್ಲಿ ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ಭಾರತ ಕಿರಿಯರ ತಂಡವನ್ನು ಮುನ್ನಡೆಸಲಿದ್ದಾರೆ. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಸಮಿತ್ ದ್ರಾವಿಡ್‌ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಗಿಟ್ಟಿಸಿಕೊಳ್ತಾರಾ ಅನ್ನೋದೇ ಕುತೂಹಲ ಮೂಡಿಸಿದೆ.

ಇನ್ನು ಆಸ್ಟ್ರೇಲಿಯಾ ವಿರುದ್ಧದ ಕಿರಿಯರ ಸರಣಿಯಲ್ಲಿ ಕರ್ನಾಟಕದ ಒಟ್ಟು ನಾಲ್ವರು ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸಮಿತ್ ದ್ರಾವಿಡ್, ಕಾರ್ತಿಕೇಯ ಕೆ.ಪಿ, ಸಮರ್ಥ್ ಎನ್. ಏಕದಿನ ಹಾಗೂ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗಿ ಹಾರ್ದಿಕ್ ರಾಜ್ ಏಕದಿನ ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ. ಒಟ್ನಲ್ಲಿ ಮಹಾರಾಜ ಟ್ರೋಫಿ ಆರಂಭದಲ್ಲಿ ಭರ್ಜರಿ ಸದ್ದು ಮಾಡಿದ್ದ ಸಮಿತ್ ಮುಕ್ತಾಯದ ಹೊತ್ತಿಗೆ ಕಳಪೆ ಪ್ರದರ್ಶನದ ಹಣೆಪಟ್ಟಿ ಹೊತ್ತಿದ್ದಾರೆ. ಸೋ ಆಸಿಸ್ ವಿರುದ್ಧದ ಸರಣಿಯಲ್ಲಿ ಸಮಿತ್ ಉತ್ತಮ ಪ್ರದರ್ಶನ ನೀಡಲಿ ಅನ್ನೋದು ಕನ್ನಡಿಗರ ಆಶಯ.

Shwetha M