ಭಾರತ U-19 ತಂಡಕ್ಕೆ ಸಮಿತ್ ದ್ರಾವಿಡ್ – ಆಸಿಸ್ ಸರಣಿಗೆ ನಾಲ್ವರು ಕನ್ನಡಿಗರಿಗೆ ಚಾನ್ಸ್
ಏಕದಿನ & ಟೆಸ್ಟ್ ಸಿರೀಸ್ ನಡೆಯೋದೆಲ್ಲಿ?

ಭಾರತ U-19 ತಂಡಕ್ಕೆ ಸಮಿತ್ ದ್ರಾವಿಡ್ – ಆಸಿಸ್ ಸರಣಿಗೆ ನಾಲ್ವರು ಕನ್ನಡಿಗರಿಗೆ ಚಾನ್ಸ್ಏಕದಿನ & ಟೆಸ್ಟ್ ಸಿರೀಸ್ ನಡೆಯೋದೆಲ್ಲಿ?

ರಾಹುಲ್ ದ್ರಾವಿಡ್. ಟೀಂ ಇಂಡಿಯಾ ಕಂಡ ಲೆಜೆಂಡರಿ ಕ್ರಿಕೆಟರ್. ಅಭಿಮಾನಿಗಳಿಂದ ಪ್ರೀತಿಯಿಂದ ದಿ ವಾಲ್ ಅಂತಾ ಕರೆಸಿಕೊಳ್ಳೋ ರಾಹುಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ದಿಗ್ಗಜ. ಈಗಲೂ ಸಹ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನ ಐಕಾನ್. ಸಚಿನ್​ ನಂತರ ಭಾರತದ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ನಿಲ್ಲುವ ದ್ರಾವಿಡ್ ಈ ಎರಡು ಮಾದರಿಯಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಳು ಆಟಗಾರರಲ್ಲಿ ರಾಹುಲ್ ಕೂಡ ಒಬ್ಬರು. ಟೀಂ ಇಂಡಿಯಾ ಹೆಡ್ ಕೋಚ್ ಆಗಿ ತಂಡವನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದು ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ಅದೇ ರಾಹುಲ್ ದ್ರಾವಿಡ್ ಅವರ ಪುತ್ರ ಕೂಡ ಕ್ರಿಕೆಟ್​​ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಮಹಾರಾಜ್ ಟ್ರೋಫಿ ಟಿ20 ಕ್ರಿಕೆಟ್‌ನ ತಮ್ಮ ಚೊಚ್ಚಲ ಪಂದ್ಯದಲ್ಲೇ ಅಮೋಘ ಪ್ರದರ್ಶನ ನೀಡಿದ್ರು. ಆ ನಂತರದ ಪಂದ್ಯಗಳಲ್ಲೂ  ಸಮಿತ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ U-19 ವಿರುದ್ಧದ ಸರಣಿಯಲ್ಲಿ ಭಾರತದ U-19 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ಇನ್ನೂ ಮೂವರು ಕನ್ನಡಿಗರಿಗೂ ಚಾನ್ಸ್ ಸಿಕ್ಕಿದೆ. ಅಷ್ಟಕ್ಕೂ ಸಮಿತ್ ದ್ರಾವಿಡ್​ಗೆ ಅವಕಾಶ ಸಿಕ್ಕಿದ್ದೇಗೆ? ಯಾವೆಲ್ಲಾ ಕನ್ನಡಿಗರು ಆಸ್ಟ್ರೇಲಿಯಾ ವಿರುದ್ಧ ಸ್ಥಾನ ಪಡೆದಿದ್ದಾರೆ? ಸಮಿತ್ ದ್ರಾವಿಡ್ ಅಪ್ಪನಿಗಿಂತ ವಿಭಿನ್ನ ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:   ತರುಣ್‌ – ಸೋನಲ್‌ ಗೆ ಮತ್ತೊಮ್ಮೆ ಮದುವೆ! – ಮಾಲ್ಡೀವ್ಸ್‌ ನಲ್ಲಿ ಹನಿಮೂನ್

ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಶೈನ್ ಆಗ್ತಿರುವ ಸಮಿತ್ ದ್ರಾವಿಡ್ ಭಾರತ U-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ U-19 ವಿರುದ್ಧದ ಬಹು-ಫಾರ್ಮ್ಯಾಟ್ ಸರಣಿಗಾಗಿ ಭಾರತದ U-19 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪುದುಚೇರಿ ಮತ್ತು ಚೆನ್ನೈನಲ್ಲಿ ನಡೆಯಲಿರುವ ಮೂರು ಏಕದಿನ ಮತ್ತು ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ U-19 ತಂಡವನ್ನು ಎದುರಿಸಲಿದೆ. ಮಹಾರಾಜಾ ಟ್ರೋಫಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದ ಸಮಿತ್ ದ್ರಾವಿಡ್, ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಕದಿನ ಮತ್ತು ನಾಲ್ಕು ದಿನಗಳ ತಂಡಗಳ ಭಾಗವಾಗಿದ್ದಾರೆ. ಸೆಪ್ಟೆಂಬರ್ 21ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಪುದುಚೇರಿ ಆತಿಥ್ಯ ವಹಿಸಲಿದೆ. ಬಳಿಕ 2 ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ.

ಕಿರಿಯರ ತಂಡದಲ್ಲಿ ಕರ್ನಾಟಕದ ನಾಲ್ವರಿಗೆ ಚಾನ್ಸ್

ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧದ ಸರಣಿಗಾಗಿ ಕರ್ನಾಟಕದ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಸೇರಿದಂತೆ ಕಾರ್ತಿಕೇಯ ಕೆ.ಪಿ, ಸಮರ್ಥ್ ಎನ್ ಏಕದಿನ ಹಾಗೂ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗಿ ಹಾರ್ದಿಕ್ ರಾಜ್ ಏಕದಿನ ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ. 15 ಸದಸ್ಯರ ಏಕದಿನ ತಂಡದ ನಾಯಕರಾಗಿ ಉತ್ತರ ಪ್ರದೇಶದ ಯುವ ಆಟಗಾರ ಮೊಹಮ್ಮದ್ ಅಮಾನ್ ಆಯ್ಕೆಯಾಗಿದ್ದು, ಇನ್ನು ಉಪನಾಯಕನಾಗಿ ಗುಜರಾತ್​ನ ರುದ್ರ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಟೆಸ್ಟ್ ತಂಡದ ನಾಯಕತ್ವವನ್ನು ಮಧ್ಯ ಪ್ರದೇಶದ ಸೋಹಮ್ ಪಟವರ್ಧನ್​ಗೆ ನೀಡಲಾಗಿದ್ದು, ಉಪನಾಯಕನಾಗಿ ಪಂಜಾಬ್​ನ ವಿಹಾನ್ ಮಲ್ಹೋತ್ರಾ ಆಯ್ಕೆಯಾಗಿದ್ದಾರೆ.

ಮಹಾರಾಜ ಟ್ರೋಫಿಯಲ್ಲಿ ಮಿಂಚಿದ್ರೂ ಐಪಿಎಲ್ ಆಡೋದು ಡೌಟ್

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಸಂಚಲನ ಸೃಷ್ಟಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಸಮಿತ್ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಐಪಿಎಲ್ 2025ರ ಹರಾಜಿನಲ್ಲಿ ಕಾಣಿಸಿಕೊಳ್ಳಲು ಅವರು ಅರ್ಹತೆ ಹೊಂದಿಲ್ಲ ಎನ್ನಲಾಗಿದೆ. ಐಪಿಎಲ್​ ನಿಯಮಗಳ ಪ್ರಕಾರ, ಆಟಗಾರನು ಹರಾಜಿನಲ್ಲಿ ಭಾಗವಹಿಸಲು ಕನಿಷ್ಠ ಎರಡು ಲಿಸ್ಟ್ ಎ ಅಥವಾ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಹಾಗೆಯೇ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಬೇಕು. ಸಮಿತ್ ದ್ರಾವಿಡ್ ಅವರ ಹೆಸರು ರಾಜ್ಯ ಕ್ರಿಕೆಟ್ ಸಂಸ್ಥೆಯಡಿಯಲ್ಲಿ ನೋಂದಾಯಿತವಾಗಿದೆ ನಿಜ. ಆದರೆ ಕರ್ನಾಟಕ ಪರ ಯಾವುದೇ ಲಿಸ್ಟ್ ಎ ಅಥವಾ ಪ್ರಥಮ ದರ್ಜೆ ಪಂದ್ಯಗಳನ್ನಾಡಿಲ್ಲ. ಬಿಸಿಸಿಐ ನಿಯಮದ ಪ್ರಕಾರ, ಐಪಿಎಲ್​ನಲ್ಲಿ ಭಾಗವಹಿಸಬೇಕಾದ ಆಟಗಾರನು ಭಾರತೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಟೂರ್ನಿಯ ಯಾವುದಾರೂ ಎರಡು ಪಂದ್ಯಗಳನ್ನಾಡುವುದು ಕಡ್ಡಾಯ. ಆದರೆ ಇತ್ತ ಸಮಿತ್ ದ್ರಾವಿಡ್ ಕರ್ನಾಟಕ ಸೀನಿಯರ್ ತಂಡದ ಪರ ಯಾವುದೇ ಪ್ರಮುಖ ಟೂರ್ನಿ ಆಡದ ಕಾರಣ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಮುಂಬರುವ ರಣಜಿ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಸಮಿತ್ ದ್ರಾವಿಡ್ ಅವಕಾಶ ಪಡೆದರೆ, ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಾಗಲಿದ್ದಾರೆ. ಹೀಗಾಗಿ ಡಿಸೆಂಬರ್ ತಿಂಗಳೊಳಗೆ ಸಮಿತ್ ಕರ್ನಾಟಕ ಪರ ಕಣಕ್ಕಿಳಿದರೆ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ.

ಒಟ್ನಲ್ಲಿ ಕನ್ನಡಿಗರಲ್ಲಿ ಪ್ರತಿಭೆ ಇದ್ರೂ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು ಕಡಿಮೆಯೇ ಇದೆ. ಈ ಪೈಕಿ ಸಿಕ್ಕ ಚಾನ್ಸ್​​ನಲ್ಲಿ ಇಡೀ ಜಗತ್ತೇ ಮೆಚ್ಚುವಂತೆ ರಾಹುಲ್ ದ್ರಾವಿಡ್ ಸಾಧನೆಗಳನ್ನ ಮಾಡಿದ್ದಾರೆ. ಕೋಚ್ ಆಗಿಯೂ ಕೋಡ ವಿಶ್ವವನ್ನೇ ಗೆದ್ದಿದ್ದಾರೆ. ಸೋ ಅಪ್ಪನಂತೆಯೇ ಮಗನೂ ಅದೇ ದಾರಿಯಲ್ಲಿ ಹೊರಟಿದ್ದಾನೆ. ಇದೀಗ ಆಸ್ಟ್ರೇಲಿಯಾ ವಿರುದ್ಧ ಅಂಡರ್ 19 ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡ್ಕೊಂಡಿದ್ದಾರೆ. ಹಾಗೇ ಇನ್ನೂ ಮೂವರು ಕನ್ನಡಿಗರಿಗೆ ಅವಕಾಶ ಸಿಕ್ಕಿದೆ. ಎಲ್ಲಾ ಕನ್ನಡಿಗರಿಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಗಲಿ. ಭಾರತದ ಪರ ಅದ್ಭುತ ಪ್ರದರ್ಶನ ನೀಡಲಿ ಅನ್ನೋದೇ ಕೋಟಿ ಕೋಟಿ ಕನ್ನಡಿಗರ ಆಶಯ.  ನಮಸ್ಕಾರ.

Shwetha M

Leave a Reply

Your email address will not be published. Required fields are marked *