ಮೈತ್ರಿ ಧರ್ಮ ಪಾಲನೆಗೆ ಸಿದ್ಧ ಎಂದ ಸುಮಲತಾ! – ಜೆಡಿಎಸ್‌ಗೆ ಲಾಭವೋ? ನಷ್ಟವೋ?

ಮೈತ್ರಿ ಧರ್ಮ ಪಾಲನೆಗೆ ಸಿದ್ಧ ಎಂದ ಸುಮಲತಾ! – ಜೆಡಿಎಸ್‌ಗೆ ಲಾಭವೋ? ನಷ್ಟವೋ?

ಲೋಕಸಭಾ ಅಖಾಡಕ್ಕೆ ಅಭ್ಯರ್ಥಿಗಳನ್ನು ಘೋಷಿಸೋ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಭರ್ಜರಿ ರಣತಂತ್ರ ರೂಪಿಸುತ್ತಿವೆ. ಭಿನ್ನಮತನದ ಬೆಂಕಿ ನಡುವೆಯೇ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆಯನ್ನೂ ನಡೆಸಿವೆ. ಆದ್ರೆ ಜೆಡಿಎಸ್ ಮಾತ್ರ ಸಿಕ್ಕಿರೋ ಮೂರು ಕ್ಷೇತ್ರಗಳಲ್ಲಿ ಮಂಡ್ಯ ಜಿಲ್ಲೆಗೆ ಅಭ್ಯರ್ಥಿಯನ್ನ ಆಯ್ಕೆ ಮಾಡೋದೇ ದೊಡ್ಡ ಸವಾಲಾಗಿದೆ. ಯಾಕಂದ್ರೆ ಐದು ವರ್ಷಗಳ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆ ಇಂದಿಗೂ ಹಸಿಹಸಿಯಾಗಿಯೇ ಇದೆ. ಕಳೆದ ಬಾರಿಯಂತೆ ಈ ಬಾರಿಯೂ ಮೈತ್ರಿ ಪಾಲಿಟಿಕ್ಸ್ ಜೋರಾಗಿದೆ.  ಕಾಂಗ್ರೆಸ್​ನಿಂದ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಿದ್ರೆ ಅತ್ತ ಮೈತ್ರಿ ಅಭ್ಯರ್ಥಿಯಾಗಿ ಸಿ.ಎಸ್ ಪುಟ್ಟರಾಜುಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ. ಇದ್ರ ನಡುವೆ ಸಂಸದೆ ಸುಮಲತಾ ಅಂಬರೀಶ್ ನೀಡಿರೋ ಹೇಳಿಕೆ ಸಂಚಲನ ಸೃಷ್ಟಿಸಿದೆ. ಮಂಡ್ಯ ರಾಜಕೀಯ ದಿಕ್ಸೂಚಿಯನ್ನೇ ಬದಲಿಸೋ ಮುನ್ಸೂಚನೆ ನೀಡಿದೆ. ಅಷ್ಟಕ್ಕೂ ಸುಮಲತಾ ಹೇಳಿದ್ದೇನು..? ಮಂಡ್ಯ ಕಣದಲ್ಲಿ ಯಾರೆಲ್ಲಾ ಸ್ಪರ್ಧೆಗೆ ಇಳಿಯಲಿದ್ದಾರೆ..? ಜೆಡಿಎಸ್ ಗೆ ಲಾಭವೋ ನಷ್ಟವೋ..? ಕಾಂಗ್ರೆಸ್ ಕಥೆ ಏನು..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾಗೆ ಮೈತ್ರಿ ಶಾಕ್ – ಪಕ್ಷವೊಂದರ ಚಿಹ್ನೆಯಡಿ ಸ್ಪರ್ಧಿಸಬೇಕೆಂಬ ಪ್ರಯತ್ನ ವಿಫಲ..!

2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ವಾಭಿಮಾನದ ಹೆಸರಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ರಣರೋಚಕ ಗೆಲುವು ಸಾಧಿಸಿದ್ದರು. ಅಷ್ಟದಿಕ್ಕುಗಳಲ್ಲೂ ದಳಪತಿಗಳನ್ನ ದಿಕ್ಕೆಡಿಸಿ ಮರ್ಮಾಘಾತ ನೀಡಿದ್ರು. ಬಳಿಕ ಜೆಡಿಎಸ್ ನಾಯಕರ ವಿರುದ್ಧ ಬುಸುಗುಡ್ತಾನೇ ಬಂದಿದ್ದ ಸುಮಲತಾ ಇದೀಗ ಸಾಫ್ಟ್ ಆದಂತಿದೆ. ಬಿಜೆಪಿ ಟಿಕೆಟ್ ಮಿಸ್ ಆದ ಬೆನ್ನಲ್ಲೇ ತಮ್ಮ ವರಸೆ ಬದಲಿಸಿದ್ದಾರೆ. ಅಷ್ಟೇ ಯಾಕೆ ಜೆಡಿಎಸ್​ಗೆ ಸಪೋರ್ಟ್ ಮಾಡೋ ಬಗ್ಗೆಯೂ ಮಾತನಾಡಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ನಾಯಕರ ನಡುವಿನ ಕದನ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಸುಮಲತಾರಿಂದಾಗಿ ಜೆಡಿಎಸ್ ಸೋಲುವ ಭೀತಿ, ಜೆಡಿಎಸ್​ನಿಂದ ಸುಮಲತಾಗೆ ಹಿನ್ನಡೆ ಆಗುವ ಆತಂಕ ಇಬ್ಬರಿಗೂ ಕಾಡುತ್ತಿದೆ. ಇಷ್ಟು ದಿನ ಜೆಡಿಎಸ್ ಅಂದ್ರೆ ಕೆಂಡ ತುಳಿದಂತೆ ಆಡ್ತಿದ್ದ ಸುಮಲತಾ ಇದೀಗ ಮಾತಿನ ವರಸೆಯನ್ನೇ ಬದಲಿಸಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಬಿಜೆಪಿ ಹೈಕಮಾಂಡ್ ಸೂಚಿಸಿದ್ರೆ ಮೈತ್ರಿಧರ್ಮ ಪಾಲನೆಗೆ ಸಿದ್ಧ ಎನ್ನುವ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್‌ಗೆ ನನ್ನ ಅಗತ್ಯ ಇದ್ಯಾ ಅಂತ ಮೊದಲು ಕೇಳಬೇಕು ಅನ್ನೋ ಮೂಲಕ ಸುಮಲತಾ ತಮ್ಮ ಪಟ್ಟು ಸಡಿಲಿಸುವ ಸುಳಿವು ಕೊಟ್ಟಿದ್ದಾರೆ. ನನಗೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ, ಗೆಲುವು ಸುಲಭ ಅನ್ನೋ ಆಫರ್‌ ಇದೆ. ಒಳ್ಳೆ ಹೆಸರಿದೆ, ಗೆಲುವು ಈಸಿ. ಹಾಗಂತ ನನನೆ ಬೇರೆ ಕ್ಷೇತ್ರ ಬೇಕಿಲ್ಲ. ಕಾರಣ ನನಗೆ ಮಂಡ್ಯನೇ ಬೇಕು. ಮಂಡ್ಯಕ್ಕೂ ನನಗೂ ಭಾವನಾತ್ಮಕವಾದ ಸಂಬಂಧ ಇದೆ. ಬಿಜೆಪಿ ಹೈಕಮಾಂಡ್‌ ಹೇಳಿದ್ರೆ ಮೈತ್ರಿ ಅಭ್ಯರ್ಥಿಗೆ ಸಹಕಾರ ನೀಡೋಕೆ ನಾನು ಸಿದ್ಧ ಎಂದಿದ್ದಾರೆ.

ಜೆಡಿಎಸ್ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿರೋ ಸುಮಲತಾ ಮೈತ್ರಿ ಧರ್ಮ ಪಾಲನೆಗೆ ಸಿದ್ಧ ಎಂದಿದ್ದಾರೆ. ಆದ್ರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸೋದನ್ನ ಮಾತ್ರ ಮರೆತಿಲ್ಲ. ಮಂಡ್ಯಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾದ ಸ್ಟಾರ್​​​ ಚಂದ್ರು ವಿರುದ್ಧ ಕಿಡಿ ಕಾರಿದ್ದಾರೆ. ಹಣಕ್ಕಾಗಿ ಕಾಂಗ್ರೆಸ್ ಟಿಕೆಟ್ ಮಾರಾಟವಾಗಿದೆ ಅನ್ನೋ ಗಂಭೀರ ಆರೋಪ ಹೊರಿಸಿದ್ದಾರೆ. ಆದ್ರಿಲ್ಲಿ ಸುಮಲತಾ ನಡೆಯಿಂದ ಒಂದಂತು ಸ್ಪಷ್ಟ ಆಗ್ತಿದೆ. ಇಷ್ಟು ದಿನ ಮಂಡ್ಯ ಕ್ಷೇತ್ರ ನನ್ನದೇ, ನಾನೇ ಬಿಜೆಪಿ ಅಭ್ಯರ್ಥಿ, ಟಿಕೆಟ್ ಸಿಗದಿದ್ರೂ ಕ್ಷೇತ್ರ ಬಿಡೋ ಮಾತೇ ಇಲ್ಲ ಎನ್ನುತ್ತಿದ್ದ ಸುಮಲತಾ ದಿಢೀರ್ ನಿರ್ಧಾರ ಬದಲಿಸಿದ್ದೇಕೆ ಅಂತಾ ನೋಡಿದ್ರೆ ಅಲ್ಲಿ ಬೇರೆಯದ್ದೇ ಚಾಪ್ಟರ್ ಓಪನ್ ಆಗ್ತಿದೆ.

ಸುಮಲತಾ ಅಂಬರೀಶ್ ಹೇಳಿ ಕೇಳಿ ಮಂಡ್ಯದ ಪಕ್ಷೇತರ ಸಂಸದೆ. 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋಕೆ ಸಾಕಷ್ಟು ಕಾರಣಗಳಿದ್ದವು. ಅಂಬರೀಶ್ ನಿಧನದ ಅನುಕಂಪ, ಸ್ವಾಭಿಮಾನದ ಕಹಳೆ, ಜೆಡಿಎಸ್ ಜೊತೆಗಿನ ವಿರೋಧ, ದೊಡ್ಡಗೌಡ್ರ ಕುಟುಂಬ ರಾಜಕಾರಣ, ಬಿಜೆಪಿಯ ಬೆಂಬಲ, ಕಾಂಗ್ರೆಸ್ ನಾಯಕರ ಪರೋಕ್ಷ ಸಪೋರ್ಟ್, ದರ್ಶನ್ ಹಾಗೂ ಯಶ್ ಅವರ ಅಬ್ಬರ ಪ್ರಚಾರ. ಹೀಗೆ ಈ ಎಲ್ಲಾ ವಿಚಾರಗಳೂ ಸುಮಲತಾ ಗೆಲುವಿಗೆ ಕಾರಣವಾಗಿದ್ದವು. ಆದ್ರೆ ಈ ಬಾರಿ ದರ್ಶನ್, ಯಶ್ ಪ್ರಚಾರ ಮಾಡಬಹುದು ಅನ್ನೋದನ್ನ ಬಿಟ್ರೆ ಯಾವ ಸಿಂಪತಿಯೂ ಉಳಿದಿಲ್ಲ. ಅಲ್ಲದೆ ಕ್ಷೇತ್ರದಲ್ಲಿ ಸುಮಲತಾಗೆ ವಿರೋಧಿ ಅಲೆಯೂ ಇದೆ. ಜನರ ಕೈಗೆ ಸಿಗಲ್ಲ, ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಸಭೆಗಳನ್ನ ಬಿಟ್ರೆ ಬೇರೇನೂ ಮಾಡಿಲ್ಲ ಎಂಬ ಆರೋಪವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಲ ಯಾವ ಪಕ್ಷದ ಬೆಂಬಲವೂ ಸಿಕ್ಕಿಲ್ಲ. ಇದೇ ಕಾರಣಕ್ಕೆ ಸುಮಲತಾ ಮೈತ್ರಿಗೆ ಬೆಂಬಲ ನೀಡೋಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ.

ಒಟ್ಟಾರೆ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಘೋಷಣೆಯಾದ್ರೆ ಸುಮಲತಾ ಸ್ಪರ್ಧೆಯಿಂದ ಹಿಂದೆ ಸರೀತಾರಾ? ಮೈತ್ರಿ ಧರ್ಮ ಪಾಲನೆ ಮಾಡ್ತಾರಾ? ಸುಮಲತಾರನ್ನು ಜೆಡಿಎಸ್​​ ಪ್ರಚಾರಕ್ಕೆ ಆಹ್ವಾನಿಸುತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಸುಮಲತಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇ ಆದಲ್ಲಿ ಸಿಕ್ಕಿರೋ ಭರವಸೆಗಳೇನು? ಸುಮಲತಾ ಹೆಸರಲ್ಲಿ ರಾಜಕಾರಣ ಮಾಡ್ತಿದ್ದ ಬೆಂಬಲಿಗರ ಕಥೆ ಏನು ಅನ್ನೋದನ್ನ ಕಾದು ನೋಡ್ಬೇಕು.

Sulekha