ʼಸಲಾರ್ʼ ಬಿಗ್ ರೆಕಾರ್ಡ್ – ಮೊದಲ ದಿನವೇ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್!
ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಸಿನಿಮಾ ‘ಸಲಾರ್’ ರಿಲೀಸ್ ಆಗಿದೆ. ಶುಕ್ರವಾರ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಮೊದಲ ದಿನವೇ ‘ಸಲಾರ್’ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್‌ನಲ್ಲೂ ‘ಸಲಾರ್’ ಅಬ್ಬರ ಜೋರಾಗಿದ್ದು, ಮೊದಲ ದಿನವೇ ಭರ್ಜರಿ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಯಾವ ಸಿನಿಮಾಗಳೂ ಇಲ್ಲಿಯವರೆಗೆ ಮಾಡದಷ್ಟು ಗಳಿಕೆ ಮಾಡಿದೆ.
ಇದನ್ನೂ ಓದಿ: ಪ್ರಭಾಸ್ ಮತ್ತು ಪೃಥ್ವಿರಾಜ್ ಜೋಡಿಯ ಸಲಾರ್ ಸಿನಿಮಾ ಹೇಗಿದೆ? – ಕಣ್ಣೀರಿಡ್ತಿರೋದ್ಯಾಕೆ ಪ್ರಭಾಸ್ ಫ್ಯಾನ್ಸ್?
ಹೌದು, ‘ಸಲಾರ್’ ಚಿತ್ರವನ್ನು ಕೆಲವರು ‘ಉಗ್ರಂ’ ಕಥೆ ಹಾಗೂ ‘ಕೆಜಿಎಫ್ 2’ ಮೇಕಿಂಗ್ಗೆ ಹೋಲಿಕೆ ಮಾಡಿದ್ದರು. ಇನ್ನು ಡಂಕಿ ಸಿನಿಮಾ ಕೂಡ ಗುರುವಾರ ರಿಲೀಸ್ ಆಗಿತ್ತು. ಹೀಗಾಗಿ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಅವರು ಸಾಕಷ್ಟು ನರ್ವಸ್ ಆಗಿದ್ದರು. ಚಿತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಅವರನ್ನು ಕಾಡಿತ್ತು. ಈ ಭಯ ಈಗ ದೂರವಾಗಿದೆ. ‘ಸಲಾರ್’ ಸಿನಿಮಾ ಮೊದಲ ದಿನವೇ ದಾಖಲೆ ಬರೆದಿದ್ದು, ಹೊಂಬಾಳೆ ಫಿಲ್ಮ್ಸ್ಗೆ ಭರ್ಜರಿ ಲಾಭ ಆಗಿದೆ.
ವರದಿಗಳ ಪ್ರಕಾರ ‘ಸಲಾರ್’ ಭಾರತದಲ್ಲಿ 95 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾದ ಗಳಿಕೆ 175 ಕೋಟಿ ರೂಪಾಯಿ ಆಗಿದೆ. ಈ ಚಿತ್ರದಿಂದ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ದೊಡ್ಡ ಗೆಲುವು ಕಂಡಿದ್ದಾರೆ. ಕ್ರಿಸ್ಮಸ್ ರಜೆ ಇರುವುದರಿಂದ ಸಿನಿಮಾ ಮತ್ತಷ್ಟು ಗಳಿಕೆ ಮಾಡಲಿದೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ.
‘ಬಾಹುಬಲಿ 2’ ಚಿತ್ರದ ಬಳಿಕ ಪ್ರಭಾಸ್ ಅವರು ದೊಡ್ಡ ಗೆಲುವು ಕಾಣಲು ವಿಫಲರಾಗಿದ್ದರು. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸಿನಿಮಾಗಳು ನೆಲಕಚ್ಚಿದ್ದವು. ಈಗ ಅವರ ವೃತ್ತಿ ಬದುಕಿಗೆ ದೊಡ್ಡ ಗೆಲುವು ಸಿಕ್ಕಿದೆ. ಗುರುವಾರ (ಡಿಸೆಂಬರ್ 21) ಮಧ್ಯರಾತ್ರಿಯಿಂದಲೇ ಶೋಗಳು ಇದ್ದಿದ್ದರಿಂದ ಸಿನಿಮಾಗೆ ಸಹಕಾರಿ ಆಗಿದೆ.
‘ಸಲಾರ್’ ಸಿನಿಮಾ ‘ಉಗ್ರಂ’ ರಿಮೇಕ್ ಎಂದು ಪ್ರಶಾಂತ್ ನೀಲ್ ಅವರು ಇತ್ತೀಚೆಗೆ ಒಪ್ಪಿಕೊಂಡಿದ್ದರು. ಮೇಕಿಂಗ್ನಲ್ಲಿ ‘ಕೆಜಿಎಫ್’ ಶೈಲಿ ಇದೆ ಎಂದು ಕೂಡ ಹೇಳಿದ್ದರು. ಈ ವಿಚಾರಗಳನ್ನು ಹೇಳಿಕೊಳ್ಳಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ದೇವ ಪಾತ್ರದಲ್ಲಿ ಪ್ರಭಾಸ್, ವರದರಾಜ್ ಮನ್ನಾರ್ ಪಾತ್ರದಲ್ಲಿ ಪೃಥ್ವಿರಾಜ್ ಗಮನ ಸೆಳೆದಿದ್ದಾರೆ. ಕನ್ನಡದ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.