GTಯಲ್ಲಿ ಸುದರ್ಶನ್ ಸಿಡಿಲಬ್ಬರ 2027ರ ವಿಶ್ವಕಪ್ ತಂಡಕ್ಕೆ ಆಯ್ಕೆ?
ರೋಹಿತ್ ಸ್ಥಾನ ತುಂಬ್ತಾರಾ ಸಾಯಿ?

GTಯಲ್ಲಿ ಸುದರ್ಶನ್ ಸಿಡಿಲಬ್ಬರ  2027ರ ವಿಶ್ವಕಪ್ ತಂಡಕ್ಕೆ ಆಯ್ಕೆ?ರೋಹಿತ್ ಸ್ಥಾನ ತುಂಬ್ತಾರಾ ಸಾಯಿ?

2024ರ ಐಪಿಎಲ್‌ನಲ್ಲಿ ಮಿಂಚಿದ ಸಾಯಿ ಸುದರ್ಶನ್, 2025ರ ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.  2024ರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ತೋರಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ತಮಿಳುನಾಡಿನ ಎಡಗೈ ಬ್ಯಾಟರ್‌ ಬಿ.ಸಾಯಿ ಸುದರ್ಶನ್‌, 2025ರ ಐಪಿಎಲ್‌ನಲ್ಲೂ ತಮ್ಮ ಮಿಂಚಿನಾಟ ಮುಂದುವರಿಸಿದ್ದಾರೆ. ಆ ಮೂಲಕ 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಬೇಕಿರುವ ಎಲ್ಲಾ ಪ್ರಯತ್ನ ನಡೆಸಿದ್ದಾರೆ. ಭಾರತ ಪರ ಕೇವಲ 3 ಏಕದಿನ ಪಂದ್ಯಗಳನ್ನು ಆಡಿದ್ದರೂ, 2 ಅರ್ಧಶತಕ ಬಾರಿಸಿ ತಾವು ಅಂತರಾಷ್ಟ್ರೀಯ  ಕ್ರಿಕೆಟ್‌ಗೂ ಸೈ ಎನ್ನುವುದನ್ನು ಸಾಬೀತುಪಡಿಸುತ್ತಿದ್ದಾರೆ. ಮುಂಬೈ ವಿರುದ್ಧ, ಆರ್‌ಸಿಬಿ ವಿರುದ್ದ ಮಿಂಚು ಹರಿಸಿದ್ದಾರೆ.

ಡಿಸೆಂಬರ್ 2023 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ದೇಶೀಯ ಪಂದ್ಯಾವಳಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ.  2022 ರಲ್ಲಿ, ವಿಜಯ್ ಶಂಕರ್ ಗಾಯಗೊಂಡು ಪಂದ್ಯದಿಂದ ಹೊರಗುಳಿದ ನಂತರ ಇವರು ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಸುದರ್ಶನ್ ಜಿಟಿಯ ಐಪಿಎಲ್ 2022 ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.. ಸಿಎಸ್‌ಕೆ ವಿರುದ್ಧದ ಐಪಿಎಲ್ 2023 ರ ಫೈನಲ್‌ನಲ್ಲಿ 47 ಎಸೆತಗಳಲ್ಲಿ 96 ರನ್ ಗಳಿಸುವ ಮೂಲಕ ತಮ್ಮ ಅಗಾಧ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅವರ ಐಪಿಎಲ್ 2024 ರಲ್ಲಿ  ಸಿಎಸ್‌ಕೆ ವಿರುದ್ಧದ ಶತಕದ ಸಮಯದಲ್ಲಿ 1000 ಐಪಿಎಲ್ ರನ್‌ಗಳನ್ನು  ತಲುಪಿದ ಅತ್ಯಂತ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು. ಗುಜರಾತ್ ಟೈಟಾನ್ಸ್ ಐಪಿಎಲ್ 2025 ಕ್ಕೆ ಇವರನ್ನ ತನ್ನಲ್ಲೇ ಉಳಿಸಿಕೊಂಡಿತು.

ಸುದರ್ಶನ್ ಅವರ ತಂದೆ ತಾಯಿ ಕೂಡ ಕ್ರಿಡಾಪಟುಗಳು. ತಂಡೆ ಢಾಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುವಾಗಿದ್ದರೆ , ಇವರ ತಾಯಿ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದರು. ಮಗ ಕ್ರಿಕೆಟರ್ ಆಗಿ ಮಿಂಚು ಹರಿಸುತ್ತಿದ್ದಾರೆ.

 ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡ್ತಾರಾ ಸಾಯಿ?

ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲೂ ಆಡಿದ ಅನುಭವ ಪಡೆದಿರುವ ಸುದರ್ಶನ್‌, ಭಾರತ ಟೆಸ್ಟ್‌ ತಂಡಕ್ಕೂ ಸೂಕ್ತ ಆಟಗಾರ ಎನ್ನುವ ಅಭಿಪ್ರಾಯಗಳು ಹಲವು ಕ್ರಿಕೆಟ್‌ ತಜ್ಞರಿಂದ ವ್ಯಕ್ತವಾಗಿದೆ. ಐಪಿಎಲ್‌ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಲು ತೆರಳಲಿರುವ ಭಾರತ ತಂಡದೊಂದಿಗೆ ಸುದರ್ಶನ್‌ ಸಹ ಪ್ರಯಾಣಿಸುವ ಸಾಧ್ಯತೆ ಇದೆ. ಪ್ರಧಾನ ತಂಡದಲ್ಲಿ ಅವರಿಗೆ ಸ್ಥಾನ ಸಿಗದಿದ್ದರೂ ಮೀಸಲು ಆಟಗಾರನಾಗಿ ಅವರು ಇಂಗ್ಲೆಂಡ್‌ಗೆ ವಿಮಾನ ಹತ್ತಬಹುದು ಎಂದು ಹೇಳಲಾಗುತ್ತಿದೆ. 2027ರ ಏಕದಿನ ವಿಶ್ವಕಪ್‌ ವರೆಗೂ ರೋಹಿತ್‌ ಶರ್ಮಾ ಆಡುವ ನಿರೀಕ್ಷೆ ಇದೆ. ಆದರೂ, ಒಂದು ವೇಳೆ ರೋಹಿತ್‌ ನಿವೃತ್ತಿ ಘೋಷಿಸಿದರೆ ಶುಭ್‌ಮನ್‌ ಗಿಲ್‌ ಜೊತೆಗೆ ಆರಂಭಿಕನನ್ನಾಗಿ ಸಾಯಿ ಸುದರ್ಶನ್‌ರನ್ನೇ ಆಯ್ಕೆ ಮಾಡಬೇಕು ಎನ್ನುವ ಅಭಿಪ್ರಾಯಗಳು ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಹೀಗಾಗಿ ಐಪಿಎಲ್‌ನಲ್ಲಿ ಮಿಂಚುತ್ತಿರೋ ಸಾಯಿ ಸುದರ್ಶನ್‌ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೀತಾರಾ ಅನ್ನೋದನ್ನ ಕಾದು ನೋಡಬೇಕಿದೆ.

 

Kishor KV

Leave a Reply

Your email address will not be published. Required fields are marked *