ಸೈಫ್ ಮೇಲೆ ಅಟ್ಯಾಕ್ ಆಗಿದ್ದೇಗೆ? ನಿಜವಾಗಿಯೂ ಚುಚ್ಚಿದ್ದು ಕಳ್ಳನಾ?
ಕರೀನಾ ಮಾತ್ರ ಬಚಾವ್ ಆಗಿದ್ದು ಹೇಗೆ?
ಬಾಲಿವುಡ್‌ನ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಸೈಫ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಮುಂಬೈನಲ್ಲಿ ತುಂಬಾ ಆಸ್ತಿಯನ್ನು ಹೊಂದಿದ ಸೈಫ್ ಅಲಿಖಾನ್ ಬಳಿ ಬಂಗಲೆ, ಬೆಲೆ ಬಾಳುವ ಕಾರುಗಳು, ಆಳು ಕಾಳುಗಳಿಗೇನು ಕಮ್ಮಿ ಇಲ್ಲ. ಮನೆ ಸುತ್ತಲೂ ಕ್ಯಾಮರಾ ಕಣ್ಗಾವಲು, ಸೆಕ್ಯೂರಿಟಿ ಗಾರ್ಡ್, ಗನ್‌ಮ್ಯಾನ್ ಹೀಗೆ ಫುಲ್ ಸೆಕ್ಯೂರಿಟಿ ಇದೆ. ಇನ್ನೂ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ ಸೈಪ್‌ಗೆ ಬಾಡಿಗಾರ್ಡ್ ಕೂಡ ಇದ್ದಾರೆ. ಮನೆಯ ಒಳಗೆ ಒಬ್ಬ ಅಪರಿಚಿತ ವ್ಯಕ್ತಿ ಬರಬೇಕು ಅಂದರೆ ಮೊದಲು ಸೆಕ್ಯೂರಿಟಿ ಗಾರ್ಡ್, ಮನೆ ಅಂಗಳದಲ್ಲಿ ಓಡಾಡುವ ಸಾಕು ನಾಯಿಗಳು, ಗನ್‌ಮ್ಯಾನ್, ಬಾಡಿಗಾರ್ಡ್ ಹಾಗೂ ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಬೇಕು. ಇದಾದರೂ ಕೂಡ ಮನೆ ಕೆಲಸದವರು, ಕುಟುಂಬದ ಸದಸ್ಯರು ಇವರೆಲ್ಲರನ್ನ ದಾಟಿ ಒಬ್ಬ ನಟನನ್ನು ಅಪರಿಚಿತ ವ್ಯಕ್ತಿ ಭೇಟಿ ಮಾಡಬೇಕು. ಇಷ್ಟೆಲ್ಲಾ ಸುರಕ್ಷತಾ ವ್ಯವಸ್ಥೆಗಳಿದ್ದರೂ ಕೂಡ ಸೈಫ್ ಮನೆ ಒಳಗೆ ಪರಿಚಿತ ವ್ಯಕ್ತಿ ಹೋಗಲು ಹೇಗೆ ಸಾಧ್ಯವಾಯ್ತು? ಅನ್ನೋ ಪ್ರಶ್ನೆಗಳಿಗೆ ಉತ್ತರವಿಲ್ಲ.
ಇದನ್ನೂ ಓದಿ: ಶಿವಣ್ಣ ರೀ ಎಂಟ್ರಿ ರಿವೀಲ್! – ಯಕ್ಷಲೋಕ ಸೃಷ್ಟಿಸುತ್ತಾರಾ?
ಅಷ್ಟಕ್ಕೂ ಸೈಫ್ ಮನೆಗೆ ಕಳ್ಳ ಬಂದಿದ್ದು ಇಂದು ಬೆಳಗ್ಗೆ 3 ಗಂಟೆಯ ಸುಮಾರಿಗೆ. ಈ ಹೊತ್ತಲ್ಲಿ ಸೈಫ್ ಮನೆ ಬಾಗಿಲು ಓಪನ್ ಇತ್ತಾ? ಅಥವಾ ಕಳ್ಳ ಕಿಟಕಿ ಮೂಲಕ ಮನೆ ಒಳಗೆ ಪ್ರವೇಶ ಮಾಡಿದ್ದನಾ? ಕಳ್ಳ ಒಳಬರುವಾಗ ಸೆಕ್ಯೂರಿಟಿ ಗಾರ್ಡ್, ಗನ್‌ಮ್ಯಾನ್, ಬಾಡಿಗಾರ್ಡ್ ಯಾರೂ ಕೂಡ ಇರಲಿಲ್ಲವಾ? ಇಷ್ಟೆಲ್ಲಾ ಸೆಕ್ಯೂರಿಟಿ ಇದ್ದರೂ ಕೂಡ ಗೇಟ್ ಹಾರಿ ಬರಲು ಹೇಗೆ ಸಾಧ್ಯ? ಈ ಘಟನೆ ಹೇಗೆ ಆಗಿರಬಹುದು ಎನ್ನುವುದಕ್ಕೆ ಸರಿಯಾದ ಉತ್ತರಗಳು ಸಿಗುತ್ತಿಲ್ಲ. ಮನೆಗೆ ಪ್ರವೇಶಿಸಿದ ವ್ಯಕ್ತಿ ಕೆಲಸದಾಕೆಯೊಂದಿಗೆ ಜಗಳವಾಡಿದ್ದಾನೆ ಎನ್ನಲಾಗುತ್ತಿದೆ. ಈ ವೇಳೆ ಸೈಫ್ ಅಲಿ ಖಾನ್ ಹಾಗೂ ಕುಟುಂಬಸ್ಥರಿಗೆ ಎಚ್ಚರವಾಗಿದ್ದು ಕೂಡಲೇ ದರೋಡೆಕೋರರನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ನಟನ ಮೇಲೆ 6 ಕಡೆ ಚಾಕುವಿನಿಂದ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ನಟ ಸೈಫ್ ಅಲಿ ಖಾನ್‌ಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.
ಸೈಫ್ ರಾಜಮನೆತನದಿಂದ ಬಂದವರು. ಮುಂಬೈನಲ್ಲಿ ಕೋಟ್ಯಾಂತರ ಆಸ್ತಿಯ ಒಡೆಯ. ಬಾಲಿವುಡ್ ನಟರಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿದ ನಟರ ಪೈಕಿ ಸೈಫ್ ಅಲಿ ಖಾನ್ ಒಬ್ಬರು. ಇವರ ಮನೆ ಅರಮನೆಗೇನು ಕಡಿಮೆ ಇಲ್ಲ. ಹೀಗಾಗಿ ಇದನ್ನೆಲ್ಲಾ ನೋಡಿಕೊಳ್ಳಲು ಹಾಗೂ ಸೈಫ್ ರಕ್ಷಣೆಗಾಗಿ ಸಾಕಷ್ಟು ಭದ್ರತೆ ಇದೆ. ಇದೆಲ್ಲವನ್ನೂ ಮೀರಿ ಒಬ್ಬ ವ್ಯಕ್ತಿ ಮನೆ ಒಳಗೆ ಪ್ರವೇಶ ಮಾಡಿದ್ದಾನೆ ಅಂದರೆ ಆ ಕಳ್ಳನಿಗೆ ಸೈಫ್ ಮನೆಯವರದ್ದೇ ಸಹಕಾರ ಇರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ದಾಳಿ ಮಾಡಿದ ಬಳಿಕ ಆ ವ್ಯಕ್ತಿ ಮನೆಯಿಂದ ತಪ್ಪಿಸಿಕೊಂಡಿದ್ದಾನೆ. ಇಷ್ಟೊಂದು ಸುಲಭವಾಗಿ ತಪ್ಪಿಸಿಕೊಂಡಿದ್ದಾನೆ ಅಂದರೆ ಆತನಿಗೆ ಯಾರದ್ದೋ ಸಹಕಾರ ಇರಬೇಕು ಎನ್ನುವ ಶಂಕೆಯೂ ಇದೆ. ಹೀಗಾಗಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ.
ನಟಿ ಕರೀನಾ ಕಪೂರ್ ಬಚಾವ್ ಆಗಿದ್ದು ಹೇಗೆ?
ಸೈಫ್ ಅಲಿ ಖಾನ್ ಅವರ ಮನೆಗೆ ದುಷ್ಕರ್ಮಿಗಳು ನುಗ್ಗಿ ಅವರಿಗೆ ಚಾಕು ಇರಿದಿದ್ದಾರೆ. ಆರು ಕಡೆ ಗಂಭೀರ ಗಾಯಗಳಾಗಿವೆ. ಆದರೆ ಕರೀನಾ ಕಪೂರ್ ಅವರು ಇದರಿಂದ ಬಚಾವ್ ಆಗಿದ್ದು ಹೇಗೆ? ಅನ್ನೋ ಪ್ರಶ್ನೆಗಳು ಕಾಡುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳು ಹರಿದಾಡಿವೆ. ಅಂದಹಾಗೇ ಘಟನೆ ನಡೆದಾಗ ಸೈಫ್ ಅಲಿ ಖಾನ್ ಅವರು ಮಾತ್ರ ಮನೆಯಲ್ಲಿ ಇದ್ದರು. ಕರೀನಾ ಕಪೂರ್ ಅವರು ಸೋನಂ ಕಪೂರ್, ರಿಯಾ ಕಪೂರ್ ಜೊತೆ ಪಾರ್ಟಿಗೆ ತೆರಳಿದ್ದರು. ಕರೀನಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪಾರ್ಟಿ ಮಾಡುತ್ತಿರುವ ಫೋಟೋ ಕೂಡ ಹಂಚಿಕೊಂಡಿದ್ದರು. ಇದಕ್ಕೆ ‘ಗರ್ಲ್ಸ್ ನೈಟ್ ಇನ್’ ಎಂದು ಕ್ಯಾಪ್ಶನ್ ನೀಡಿದ್ದರು. ಹೀಗಾಗಿ ಹಲ್ಲೆ ನಡೆಯುವ ಸಂದರ್ಭದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಇದರಿಂದ ಅವರು ಬಚಾವ್ ಆಗಿದ್ದಾರೆ.
ರಾಜಕೀಯ ಸ್ವರೂಪ ಪಡೆದ ಅಟ್ಯಾಕ್
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದಿರುವ ಹಲ್ಲೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಅಕೌಂಟ್‌ನಲ್ಲಿ ಟ್ವೀಟ್ ಮಾಡಿರುವ ಶಿವಸೇನೆ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ, “ರಾಜಧಾನಿ ಮುಂಬೈನಲ್ಲಿ ಸೆಲೆಬ್ರಿಟಿಗಳೇ ಸುರಕ್ಷತೆಯ ಕೊರತೆ ಎದುರಿಸುತ್ತಿದ್ದಾರೆ ಎಂದರೆ ಜನಸಾಮಾನ್ಯರು ಪರಿಸ್ಥಿತಿ ಹೇಗಿರಬೇಡ..?” ಎಂದು ಪ್ರಶ್ನಿಸಿದ್ದಾರೆ.