ಬಂಡೀಪುರ-ನಾಗರಹೊಳೆ ಸಫಾರಿಗೆ ರೇಟ್ ಡಬಲ್ – ಸೆಪ್ಟೆಂಬರ್ 1ರಿಂದಲೇ ದರ ಹೆಚ್ಚಳ ಜಾರಿ

ಬಂಡೀಪುರ, ನಾಗರಹೊಳೆ ಸಫಾರಿಗೆ ಪ್ಲ್ಯಾನ್ ಮಾಡುವವರು ಈ ಸುದ್ದಿ ಓದಲೇಬೇಕು. ಯಾಕೆಂದರೆ, ಇನ್ನೊಂದು ವಾರದಲ್ಲಿ ಸಫಾರಿ ದರ ಡಬಲ್ ಆಗಲಿದೆ. ಟಿಕೆಟ್ ದರ ಹೆಚ್ಚಳವಾಗಿದ್ದು ಸೆಪ್ಟೆಂಬರ್ 1ರಿಂದಲೇ ಜಾರಿಯಾಗಲಿದೆ.
ಇದನ್ನೂ ಓದಿ:ನಿನ್ನ ಓಡಿ ಹೋಗೋಕೆ ಬಿಡ್ತೀನಾ? – ಓಡುತ್ತಿದ್ದ ಕಂದಮ್ಮನ ಬಾಲ ಹಿಡಿದು ಎಳೆದು ನಿಲ್ಲಿಸಿದ ತಾಯಾನೆ!
ಬಂಡೀಪುರ ಮತ್ತು ನಾಗರಹೊಳೆ ಸಫಾರಿಗೆ ಹೋಗುವುದೆಂದರೆ ಪ್ರವಾಸಿಗರಿಗೆ ಅದೇನೋ ಸಂಭ್ರಮ. ಇದೀಗ ಸೆಪ್ಟೆಂಬರ್‌ನಿಂದ ಸಫಾರಿಗೆ ಹೋಗುವವರಿಗೆ ಶಾಕ್ ಕಾದಿದೆ. ಯಾಕೆಂದರೆ, ಸೆಪ್ಟೆಂಬರ್ ನಿಂದ ಸಫಾರಿ ದರ ಡಬಲ್ ಆಗಲಿದೆ. ಬಂಡೀಪುರ (ಮೇಲುಕಾಮನಹಳ್ಳಿ ಗೇಟ್) ಮತ್ತು ನಾಗರಹೊಳೆ (ಕಾಕನಕೋಟೆ, ದಮ್ಮನಕಟ್ಟೆ, ಅಂತರಸಂತೆ, ನಾಣಚ್ಚಿ, ವೀರಹೊಸಳ್ಳಿ) ಕಡೆ ಸಫಾರಿ ಹೋಗಲು ದರ ಏರಿಕೆಯಾಗಿದೆ. ಬಸ್ ಸಫಾರಿ ವಯಸ್ಕರ ಟಿಕೆಟ್ ದರವು ₹650ರಿಂದ ಬರೋಬ್ಬರಿ ₹1,000 ರೂಪಾಯಿ ಏರಿಕೆಯಾಗಿದೆ. ಮಕ್ಕಳ ಟಿಕೆಟ್ ದರ ₹350ರಿಂದ ₹500ಕ್ಕೆ ಹೆಚ್ಚಳವಾಗಿದೆ. ಜೀಪ್ ಸಫಾರಿಗೆ ಹೋಗುವವರು, ವಯಸ್ಕರ ಪ್ರವೇಶ ಶುಲ್ಕ ₹1,000ದಿಂದ ₹1,500ಕ್ಕೆ ಏರಿಕೆಯಾಗಿದೆ. ಮಕ್ಕಳ ಟಿಕೆಟ್ ದರ ₹500ರಿಂದ ₹750ಕ್ಕೆ ತಲುಪಿದೆ. ಇದರ ಜೊತೆಗೆ, ವಾಹನ ನಿಲುಗಡೆ ಹಾಗೂ ಕ್ಯಾಮೆರಾ ಶುಲ್ಕದಲ್ಲೂ ಏರಿಕೆ ಮಾಡಲಾಗಿದೆ. ದರ ಏರಿಕೆಗೆ ಕಾರಣ ನೀಡಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಂದೀಶ್, “ಈ ಹಿಂದೆ ಸಫಾರಿ ಅವಧಿ ಕೇವಲ ಒಂದೂವರೆ ಗಂಟೆ ಇತ್ತು. ಈಗ ಪ್ರವಾಸಿಗರಿಗೆ ಹೆಚ್ಚಿನ ವನ್ಯಜೀವಿ ವೀಕ್ಷಣೆ ಅವಕಾಶ ಕಲ್ಪಿಸಲು ಅದನ್ನು 3 ಗಂಟೆಗಳಿಗೆ ವಿಸ್ತರಿಸಲಾಗಿದೆ. ಹಿಂದೆ 15-20 ಕಿ.ಮೀ. ಸಂಚರಿಸುತ್ತಿದ್ದ ವಾಹನಗಳು ಇನ್ನು ಮುಂದೆ 30ರಿಂದ 35 ಕಿ.ಮೀ. ವರೆಗೆ ಸಂಚರಿಸಲಿವೆ. ಇದರಿಂದ ಇಂಧನ ಮತ್ತು ನಿರ್ವಹಣಾ ವೆಚ್ಚ ವಿಪರೀತ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಯಿತು” ಎಂದು ಸ್ಪಷ್ಟಪಡಿಸಿದ್ದಾರೆ.
ಮೂರು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಹಾಗೂ ಸಫಾರಿ ಟಿಕೆಟ್ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆದರೆ, ಮಕ್ಕಳು ಪ್ರತ್ಯೇಕ ಆಸನ ಪಡೆಯದೆ ಪೋಷಕರ ಆಸನದಲ್ಲೇ ಪ್ರಯಾಣಿಸಬೇಕು ಎಂಬ ನಿಯಮ ವಿಧಿಸಲಾಗಿದೆ.

ನೋಡಿರಿ

