ದಾರಿಯಲ್ಲಿ ಹೋಗುವಾಗ ಪ್ರತ್ಯಕ್ಷವಾದ ಕ್ರಿಕೆಟ್ ದೇವರು –ಅಭಿಮಾನಿಗೆ ಸಚಿನ್ ತೆಂಡೂಲ್ಕರ್ ಸರ್‌ಪ್ರೈಸ್
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆಯಾದ್ರೂ ಭೇಟಿ ಮಾಡಬೇಕು. ಕ್ರಿಕೆಟ್ ದೇವರನ್ನು ರಿಯಲ್ ಆಗಿ ನೋಡಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಕನಸು. ಕೆಲವರಿಗೆ ಮಾತ್ರ ಆ ಅದೃಷ್ಟ ಸಿಗುತ್ತೆ. ಆದರೆ, ಇಲ್ಲೊಬ್ಬರು ಅಭಿಮಾನಿಗೆ ಅದೃಷ್ಟವೇ ಹುಡುಕಿಕೊಂಡು ಬಂದಿದೆ.
ಇದನ್ನೂ ಓದಿ: ಕ್ರಿಕೆಟ್ ದೇವರು ಸಚಿನ್ ಸಾಲಿಗೆ ಸೇರಿದ ಕ್ಯಾಪ್ಟನ್ ಕೂಲ್ – ಧೋನಿಯ ನಂಬರ್ 7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧಾರ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನ ಟೀ ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬರು ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಟಿ-ಶರ್ಟ್ ಮೇಲೆ ಐ ಮಿಸ್ ಯು ತೆಂಡೂಲ್ಕರ್ ಎಂದು ಬರೆಯಲಾಗಿತ್ತು. ತನ್ನ ಮುಂದೆ ಸ್ಕೂಟರ್‌ನಲ್ಲಿ ಹೋಗುತ್ತಿರುವ ಅಭಿಮಾನಿಯ ಟೀ ಶರ್ಟ್ ಮೇಲಿನ ಬರಹ ನೋಡಿ ಅಚ್ಚರಿಗೊಂಡ ಸಚಿನ್, ಅಭಿಮಾನಿ ಬಳಿ ಕಾರು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ತನ್ನ ಅಭಿಮಾನಿಯನ್ನು ನಿಲ್ಲಿಸಿ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯನ್ನು ಕೇಳಿದ್ದಾರೆ. ಆಗ ಅಭಿಮಾನಿಗೆ ದಾರಿ ಕೇಳಿದ್ದು ಯಾರು ಎಂದು ತಿರುಗಿ ನೋಡಿದಾಗ ಆದ ಸಂತಸ ಹೇಳತೀರದಾಗಿದೆ. ತನ್ನ ಕ್ರಿಕೆಟ್‌ನ ಆರಾಧ್ಯದೈವ ಸಚಿನ್ ತನಗೆ ಕೊಟ್ಟ ಸರ್‌ಪ್ರೈಸ್‌ಗೆ ಅಭಿಮಾನಿಗೆ ಆಶ್ಚರ್ಯದ ಜೊತೆಗೆ ಸಂಭ್ರಮ. ನಂತರ ಸಚಿನ್ ಅಭಿಮಾನಿಗೆ ಟಿ-ಶರ್ಟ್ ತೋರಿಸಲು ಹೇಳಿದರು.
ನಂತರ ಅಭಿಮಾನಿಗೆ ಪ್ರೀತಿಯಿಂದ ಶೇಕ್ ಹ್ಯಾಂಡ್ ಮಾಡಿದ್ದಾರೆ. ಜೊತೆಗೆ ಅಭಿಮಾನಿಗೆ ಆಟೋಗ್ರಾಫ್ ಕೂಡಾ ನೀಡಿದ್ದಾರೆ. ನಂತರ ಅಭಿಮಾನಿ ಜೊತೆ ಸೆಲ್ಫಿಗೂ ಫೋಸ್ ನೀಡಿದ್ದಾರೆ.
ಈ ವೀಡಿಯೊವನ್ನು ಸಚಿನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಮೇಲೆ ತುಂಬಾ ಪ್ರೀತಿಯನ್ನು ನಾನು ನೋಡಿದಾಗ, ನನ್ನ ಹೃದಯವು ಸಂತೋಷದಿಂದ ತುಂಬುತ್ತದೆ. ಅನಿರೀಕ್ಷಿತವಾಗಿ ಬರುವ ಜನರ ಪ್ರೀತಿಯಿಂದ ಜೀವನ ತುಂಬಾ ವಿಶೇಷವಾಗಿಸುತ್ತದೆ ಎಂದು ಬರೆದುಕೊಂಡಿದ್ದಾರೆ.