‘800’ ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ಸಚಿನ್ ತೆಂಡೂಲ್ಕರ್ – ಗೆಳೆಯ ಮುತ್ತಯ್ಯ ಮುರುಳಿಧರನ್ ಪಟ್ಟ ಕಷ್ಟ ಎಲ್ಲರಿಗೂ ಗೊತ್ತಾಗಬೇಕು ಎಂದ ಕ್ರಿಕೆಟ್ ದೇವರು

‘800’ ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ಸಚಿನ್ ತೆಂಡೂಲ್ಕರ್ – ಗೆಳೆಯ ಮುತ್ತಯ್ಯ ಮುರುಳಿಧರನ್ ಪಟ್ಟ ಕಷ್ಟ ಎಲ್ಲರಿಗೂ ಗೊತ್ತಾಗಬೇಕು ಎಂದ ಕ್ರಿಕೆಟ್ ದೇವರು

ಕ್ರೀಡಾಂಗಣಕ್ಕೆ ಕಾಲಿಟ್ಟಾಗ ಗಂಭೀರ, ಬೌಲಿಂಗ್ ಮಾಡುವಾಗ ಭೀಕರ, ಗ್ರೌಂಡ್‌ನಿಂದ ಹೊರಗೆ ಬಂದಾಗ ನಗುಮೊಗದ ಸರದಾರ.. ಮುತ್ತಯ್ಯ ಮುರುಳಿಧರನ್ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ. ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಸ್ಪಿನ್ನರ್ ಮುತ್ತಯ್ಯ ಮರುಳಿಧರನ್ ನಿವೃತ್ತರಾಗಿ ಈಗಾಗಲೇ 13 ವರ್ಷಗಳು ಕಳೆದಿವೆ. ಈಗಲೂ ಈಗಲೂ ಏಕದಿನ ಹಾಗೂ ಟೆಸ್ಟ್ ಎರಡೂ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯ ಸಮೀಪಕ್ಕೂ ಕೂಡಾ ಯಾರೂ ಬಂದಿಲ್ಲ. ಇದೀಗ ಮುತ್ತಯ್ಯ ಮುರುಳಿಧರನ್ ಅವರ ಜೀವನಗಾಥೆ ಸಿನಿಮಾ ರೆಡಿಯಾಗಿದ್ದು, 800 ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮ ಹಲವು ವಿಶೇಷತೆಗಳಿಗೂ ಕಾರಣವಾಗಿದೆ.

ಇದನ್ನೂ ಓದಿ: ಮುತ್ತಯ್ಯ ಮುರಳೀಧರನ್ ಬಯೋಪಿಕ್ ರೆಡಿ – ‘800’ ಸಿನಿಮಾ ಟ್ರೇಲರ್ ರಿಲೀಸ್‌ಗೆ ಸಚಿನ್ ತೆಂಡುಲ್ಕರ್ ಗೆಸ್ಟ್

ಕ್ರಿಕೆಟ್ ಜಗತ್ತಿನ ಶ್ರೇಷ್ಠ ಸ್ಪಿನ್ ಬೌಲರ್ ಆದ ಮುರಳಿಧರನ್ ಅವರ ಜೀವನ ಪಯಣ ಈಗ ಸಿನಿಮಾ ಆಗಿದೆ. ಗೆಳೆಯನ ಬಯೋಪಿಕ್ ‘800’ ಸಿನಿಮಾ ಟ್ರೈಲರ್ ನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದ್ದಾರೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರು ಕ್ರಿಕೆಟ್ ದಿಗ್ಗಜರನ್ನು ನೋಡುವುದೇ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿತ್ತು. ಅದರಲ್ಲೂ ಒಬ್ಬರು ಕ್ರಿಕೆಟ್ ದೇವರು. ಮತ್ತೊಬ್ಬರು ವಿಶ್ವ ಕಂಡ ಶ್ರೇಷ್ಠ ಸ್ಪಿನ್ನರ್. ಇಬ್ಬರೂ ಕೂಡಾ ನಗು ನಗುತ್ತಾ ವೇದಿಕೆ ಮೇಲೆ ಬಂದಾಗ ಅಭಿಮಾನಿಗಳು ಪುಳಕಿತರಾಗಿದ್ದರು. ಇನ್ನು 800 ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ನಂತರ ಸಚಿನ್ ತೆಂಡುಲ್ಕರ್ ತನ್ನ ಬಹುಕಾಲದ ಗೆಳೆಯನ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಮುರಳೀಧರನ್ ಕತೆ, ಕಷ್ಟ ನನಗೆ ಗೊತ್ತು, ಅದು ಎಲ್ಲರಿಗೂ ಗೊತ್ತಾಗಬೇಕು ಎಂದರು. ಈ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ, ಎಲ್ಲರೂ ಸ್ಪೂರ್ತಿ ಪಡೆಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀಲಂಕಾದ ಲಿಜೆಂಡ್ ಕ್ರಿಕೆಟರ್ ಸನತ್ ಜಯಸೂರ್ಯ ಸಹ ಹಾಜರಿದ್ದರು.  ಮೂವರೂ ದಿಗ್ಗಜ ಕ್ರಿಕೆಟರ್‌ಗಳು ತಮ್ಮ ಕಾಲದ ಕ್ರಿಕೆಟ್‌ನ ಕೆಲ ನೆನಪುಗಳನ್ನು ಮೆಲಕು ಹಾಕಿದರು. ಮುರಳೀಧರನ್ ಎಂಥಹಾ ದಿಗ್ಗಜ ಆಟಗಾರ ಎಂದು ಹೇಳುತ್ತಾ, ಈ ವರೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,500 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸುಮಾರು 10 ಸಾವಿರ, ಅದಕ್ಕೂ ಮುನ್ನ ಸುಮಾರು 15 ಸಾವಿರ ಓವರ್ಗಳನ್ನು ಬೌಲಿಂಗ್ ಮಾಡಿರಬಹುದು ಎಂದರು ಸಚಿನ್. ಅದಕ್ಕೆ ಸನತ್ ಜಯಸೂರ್ಯ ಮಾತು ಸೇರಿಸಿ, ಒಮ್ಮೆಯಂತೂ ಟೆಸ್ಟ್ ಕ್ರಿಕೆಟ್‌ನ ಒಂದು ದಿನದ 90 ಓವರ್‌ಗಳಲ್ಲಿ 35 ಓವರ್‌ಗಳನ್ನು ಮುರಳಿಯೇ ಬೌಲಿಂಗ್ ಮಾಡಿದ್ದರು ಎಂದು ನೆನಪು ಮಾಡಿಕೊಂಡರು. ಯಾರು ನಿಮ್ಮ ಬೌಲಿಂಗ್ ಅನ್ನು ಚೆನ್ನಾಗಿ ರೀಡ್ ಮಾಡುತ್ತಿದ್ದರು ಎಂಬ ಪ್ರಶ್ನೆಗೆ, ”ಸಚಿನ್ ಬಹಳ ಚೆನ್ನಾಗಿ ರೀಡ್ ಮಾಡುತ್ತಿದ್ದರು, ಸೀಮ್ ಪೊಸಿಷನ್, ನನ್ನ ಕೈ ಚಲನೆ, ಪಿಚ್ ಎಲ್ಲವನ್ನೂ ರೀಡ್ ಮಾಡಿ ಆಡುತ್ತಿದ್ದರು. ಲಾರಾ ನನ್ನ ವಿರುದ್ಧ ಚೆನ್ನಾಗಿ ಆಡಿದ್ದಾರಾದರೂ ಅವರಿಗೆ ನನ್ನನ್ನು ರೀಡ್ ಮಾಡಲು ಆಗಿರಲಿಲ್ಲ. ಇನ್ನು ದ್ರಾವಿಡ್ ಅದ್ಭುತವಾದ ಬ್ಯಾಟ್ಸ್ಮ್ಯಾನ್ ಆದರೆ ಅವರಿಗೂ ನನ್ನನ್ನು ರೀಡ್ ಮಾಡಲು ಆಗಿರಲಿಲ್ಲ. ಸೆಹ್ವಾಗ್‌ ಗೂ ಸಹ” ಎಂದರು ಮುರಳೀಧರನ್. ಯಾವ ಬ್ಯಾಟ್ಸ್ಮನ್ ಹಾಗೂ ತಂಡಗಳನ್ನು ಔಟ್ ಮಾಡುವುದು ಸುಲಭವಾಗಿತ್ತು ಎಂಬ ಪ್ರಶ್ನೆಗೆ, ಯೂಸಫ್ ಯುಹಾನಾರನ್ನು ಔಟ್ ಮಾಡುವುದು ನನಗೆ ಬಹಳ ಸುಲಭವಾಗಿತ್ತು. ನನ್ನನ್ನು ಕಂಡರೆ ಹೆದರುತ್ತಿದ್ದ ತಂಡಗಳೆಂದರೆ ಅದು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಎಂದರು ಮುರಳಿಧರನ್. ಇನ್ನು ಸನತ್ ಜಯಸೂರ್ಯ ಮಾತನಾಡಿ, ನನಗೆ ವೆಂಕಟೇಶ್ ಪ್ರಸಾದ್ ವಿರುದ್ಧ ಬ್ಯಾಟಿಂಗ್ ಮಾಡಲು ಬಹಳ ಮಜ ಬರುತ್ತಿತ್ತು ಎಂದು ನೆನಪು ಮಾಡಿಕೊಂಡರು. ‘800’ ಸಿನಿಮಾನಲ್ಲಿ ಬಾಲ್ಯದಿಂದಲೂ ಮುರಳೀಧರನ್ ಪಟ್ಟ ಕಷ್ಟಗಳನ್ನು, ಶ್ರೀಲಂಕಾದಲ್ಲಿ ಅವರು ಎದುರಿಸಿದ ಅವಮಾನ, ಭಯೋತ್ಪಾದನೆ ಎಲ್ಲದನ್ನೂ ದೃಶ್ಯ ರೂಪದಲ್ಲಿ ಕಟ್ಟಿಕೊಡಲಾಗಿದೆ. ಸಿನಿಮಾವನ್ನು ಎಂಎಸ್ ಶ್ರೀಪತಿ ನಿರ್ದೇಶನ ಮಾಡಿದ್ದಾರೆ. ವಿವೇಕ್ ರಂಗಾಚಾರಿ ಮತ್ತು ಟ್ರೈನ್ ಮೋಷನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಮುರಳೀಧರನ್ ಪಾತ್ರದಲ್ಲಿ ಮಧುರ್ ಮಿತ್ತಲ್ ನಟಿಸಿದ್ದಾರೆ.

suddiyaana