ತಿರುಪತಿ ಆಯ್ತು.. ಈಗ ಶಬರಿಮಲೆ ತುಪ್ಪದಲ್ಲೂ ಗೋಲ್ ಮಾಲ್! – ತನಿಖೆಗೆ ಆದೇಶಿಸಿದ ಕೇರಳ ಹೈಕೋರ್ಟ್!

ತಿರುಪತಿ ಆಯ್ತು.. ಈಗ ಶಬರಿಮಲೆ ತುಪ್ಪದಲ್ಲೂ ಗೋಲ್ ಮಾಲ್! – ತನಿಖೆಗೆ ಆದೇಶಿಸಿದ ಕೇರಳ ಹೈಕೋರ್ಟ್!

ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ತುಪ್ಪ ಕಲಬೆರಕೆ ಕೇಸ್‌ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶಬರಿಮಲೆ ದೇವಸ್ಥಾನದಲ್ಲೂ ತುಪ್ಪದ ಹಗರಣವೊಂದು ಬೆಳಕಿಗೆ ಬಂದಿದೆ. ಆದ್ಯ ಶಿಷ್ಟ ತುಪ್ಪದಲ್ಲೂ ಗೋಲ್‌ಮಾಲ್‌ ನಡೆದಿದ್ದು ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್‌ ಆದೇಶಿಸಿದೆ.

ಇದನ್ನೂ ಓದಿ:  ಅತ್ತೆ ಮಗನಿಗೆ ಜೈ..! – ಗಿಲ್ಲಿನೇ ಗೆಲ್ಲೋದು ಎಂದು ಅಶ್ವಿನಿಗೂ ಗೊತ್ತಾಯ್ತಾ?

ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳ್ಳತನದ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಇದೀಗ ಈ ದೇವಸ್ಥಾನದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ದೇವಾಲಯದಲ್ಲಿ ಆದ್ಯ ಶಿಷ್ಟ ತುಪ್ಪ (ನೈವೇದ್ಯಕ್ಕೆ ಬಳಸಿದ ನಂತರ ಉಳಿದ ತುಪ್ಪ) ಮಾರಾಟದಲ್ಲಿ 35 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ತಿರುವಾಂಕೂರು ದೇವಸ್ವಂ ಬೋರ್ಡ್ ಶಬರಿಮಲೆ ವಿಶೇಷ ಆಯುಕ್ತರ ವರದಿಯ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿ.ರಾಜಾ ವಿಜಯರಾಘವನ್ ಮತ್ತು ಕೆ.ವಿ.ಜಯಕುಮಾರ್ ನೇತೃತ್ವದ ಪೀಠ ವಿಚಾರಣೆ ನಡೆಸಿದೆ. ಈ ಸಂಬಂಧ ವಿಜಿಲೆನ್ಸ್ ಮತ್ತು ಆಂಟಿ-ಕರಪ್ಷನ್ ಬ್ಯೂರೋ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಉನ್ನತ ಅಧಿಕಾರಿಗಳ ತಂಡವನ್ನು ರಚಿಸಿ ಸಂಪೂರ್ಣ ತನಿಖೆ ನಡೆಸಲು ಆದೇಶಿಸಿದೆ.

2025 ನ.17ರಿಂದ ಡಿ.26ರವರೆಗೆ ಮತ್ತು 2025ರ ಡಿ.27ರಿಂದ 2026ರ ಜ.2ರವರೆಗಿನ ಅವಧಿಯಲ್ಲಿ ಈ ಅಕ್ರಮ ನಡೆದಿದೆ. ಒಂದು ಪ್ಯಾಕೆಟ್ 100 ಮಿ.ಲೀ. ತುಪ್ಪ 100 ರೂ.ಯಂತೆ ಮಾರಾಟವಾಗುತ್ತದೆ. ಸುಮಾರು 3,52,050 ಪ್ಯಾಕೆಟ್‌ಗಳನ್ನು ತಯಾರಿಸಲಾಗಿತ್ತು. ಇದರಲ್ಲಿ 89,300 ಪ್ಯಾಕೆಟ್‌ಗಳು ಮಾರಾಟವಾದರೂ ಕೇವಲ 75,450 ಪ್ಯಾಕೆಟ್‌ಗಳ ಹಣವನ್ನು ಮಾತ್ರ ಖಾತೆಗೆ ಜಮಾ ಮಾಡಲಾಗಿದೆ. ಇದರಿಂದ ಸುಮಾರು 13.68 ಲಕ್ಷ ರೂ. ಅಕ್ರಮವಾಗಿ ಉಳಿದಿದೆ.

ಓರ್ವ ಉದ್ಯೋಗಿ ಸುನಿಲ್ ಕುಮಾರ್ ಪೊಟ್ಟಿ 2025ರ ನ.24ರಿಂದ 30ರ ಅವಧಿಯಲ್ಲಿ 68,200 ರೂ.ಗಳನ್ನು ತಡವಾಗಿ ಜಮಾ ಮಾಡಿದ್ದು, ರಸೀದಿ ನೀಡದೆ ಮಾರಾಟ ಮಾಡಿದ್ದಾರೆ ಎಂದು ಈಗಾಗಲೇ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ವಿಚಾರಣೆ ವೇಳೆ ಕೋರ್ಟ್ ತೀವ್ರವಾಗಿ ಟೀಕಿಸಿದ್ದು, ಕೇವಲ ಎರಡು ತಿಂಗಳಲ್ಲಿ 35 ಲಕ್ಷ ರೂ.ಗಿಂತ ಹೆಚ್ಚು ಹಣ ಅಕ್ರಮವಾದರೆ, ಉಳಿದ ಸಮಯದಲ್ಲಿ ಹಾಗೂ ಇತರ ಆದಾಯ ಮೂಲಗಳಲ್ಲಿ ಎಷ್ಟು ದೊಡ್ಡಮಟ್ಟದ ಭ್ರಷ್ಟಾಚಾರ ಆಗಿರಬಹುದು ಎಂದು ಪ್ರಶ್ನಿಸಿದೆ. ಇದನ್ನು ಗಂಭೀರ ಅಪರಾಧಿಕ ಉಲ್ಲಂಘನೆ ಎಂದು ಹೇಳಿದ ನ್ಯಾಯಾಲಯವು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲು ಸೂಚಿಸಿದೆ. ಒಂದು ತಿಂಗಳೊಳಗೆ ಪ್ರಗತಿ ವರದಿ ಸಲ್ಲಿಸುವಂತೆಯೂ ಆದೇಶಿಸಿದೆ. ತನಿಖೆಯ ಅಂತಿಮ ವರದಿ ಸಲ್ಲಿಸುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಷರತ್ತನ್ನು ವಿಧಿಸಿದೆ.

Shwetha M