ಸಾವಿಗೂ ಮುನ್ನ ಜನತೆಗೆ ವೃಕ್ಷಮಾತೆ ಭಾವುಕ ಸಂದೇಶ – ಸಾಲುಮರದ ತಿಮ್ಮಕ್ಕ ಅವರ ಪತ್ರದಲ್ಲಿ ಏನಿದೆ?

ಸಾವಿಗೂ ಮುನ್ನ ಜನತೆಗೆ ವೃಕ್ಷಮಾತೆ ಭಾವುಕ ಸಂದೇಶ – ಸಾಲುಮರದ ತಿಮ್ಮಕ್ಕ ಅವರ ಪತ್ರದಲ್ಲಿ ಏನಿದೆ?

ಪರಿಸರವಾದಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (114) ಇಂದು ನಮ್ಮನ್ನ ಅಗಲಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸಾಲು ಮರದ ತಿಮ್ಮಕ್ಕ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾವಿಗೂ ಮುನ್ನ ಸಾಲು ಮರದ ತಿಮ್ಮಕ್ಕ ನಾಡಿನ ಜನತೆಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಗಿಡ-ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ಮಹಾತಾಯಿ ಸಾಲುಮರದ ತಿಮ್ಮಕ್ಕ – ‘ವೃಕ್ಷ ಮಾತೆ’ಯಾದ ಕಥೆಯಿದು!

ವೃಕ್ಷಮಾತೆಯ ಸಂದೇಶವೇನು?

ಸಾವಿನ ಅಂತಿಮ ಕ್ಷಣದಲ್ಲಿ ವೃಕ್ಷಮಾತೆ ತಿಮ್ಮಕ್ಕ ನಾಡಿನ ಜನತೆಗೆ ಕೊನೆಯ ಸಂದೇಶ ನೀಡಿದ್ದಾರೆ. ಪ್ರೀತಿಯ ನನ್ನ ನಾಡಿನ ಜನತೆಗೆ ನಿಮ್ಮ ಪ್ರೀತಿಯ ಅಜ್ಜಿ ವ್ಯಕ್ಷಮಾತೆ ಸಾಲುಮರದ ತಿಮ್ಮಕ್ಕ ಮಾಡುವ ನಮಸ್ಕಾರಗಳು. ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ಇರುವಷ್ಟು ದಿನ ಯಾರಿಗೂ ತೊಂದರೆ, ಹಿಂಸೆಯಾಗದಂತೆ ಪ್ರೀತಿ ಬದುಕಿ, ಬಡವ, ಶ್ರೀಮಂತ, ಭಿಕ್ಷುಕ, ಅಸಹಾಯಕ ಎನ್ನದೆ ಎಲ್ಲರೂ ಒಂದೇ ತರಹ ಬದುಕಿ ಎಂದು ಬರೆದಿದ್ದಾರೆ.

ಎಲ್ಲರನ್ನು ಗೌರವಿಸಿ, ಪ್ರೀತಿಸಿ, ದೇಶವನ್ನು ಪ್ರೀತಿಸಿ, ದೇಶ ಚೆನ್ನಾಗಿದ್ದರೆ ಎಲ್ಲರೂ ಚಂದ. ಚಿಕ್ಕವರಾಗಲಿ, ದೊಡ್ಡವರಾಗಲಿ, ಬಡವರಾಗಲಿ, ಶ್ರೀಮಂತರಾಗಲಿ, ಗಿಡ ನೆಟ್ಟು ಮರಗಳನ್ನಾಗಿ ಬೆಳೆಸಿ ಗೋ ಕಟ್ಟೆಗಳನ್ನು ಕಟ್ಟಿಸಿ, ಕೆರೆ ಕಟ್ಟಿಸಿ, ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿಸಿ, ಹಣ್ಣು ಬಿಡುವ ಮರಗಳನ್ನು ಬೆಳೆಸಿ, ಹಕ್ಕಿಪಕ್ಷಿಗಳಿಗೆ ಆಧಾರವಾಗಲಿ ಎಂದು ಪತ್ರದಲ್ಲಿ ಬರೆದಿದ್ದಾರೆ.

ದೇಶದಲ್ಲಿರುವ ಎಲ್ಲರಿಗೂ ಒಳ್ಳೆಯದಾಗಲಿ, ದೇಶ ಚೆನ್ನಾಗಿರಲಿ ಬಡವನನ್ನು ಕಂಡು ಭಿನ್ನ-ಭೇದ ಮಾಡಬೇಡಿ ಮನುಷ್ಯರೆಲ್ಲ ಒಂದೇ, ಹಸಿದವರಿಗೆ ಅನ್ನ ಕೊಡಿ ನಾನು ಮಾಡಿದ ಗಿಡ ನೆಡುವ ಉಳಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿ ಎಂದು ತಿಮ್ಮಕ್ಕ ಪರಿಸರ ಪ್ರೇಮ ಮೆರೆದಿದ್ದಾರೆ.

ನನ್ನ ಮಗನಾದ ಉಮೇಶ ದೇಶದಲ್ಲೆಲ್ಲ ಗಿಡ ನೆಡುವ ಮತ್ತು ನಡೆಸುವ ಕಾರ್ಯ ಮಾಡುತ್ತಾ ಸಾಗಬೇಕು. ಮತ್ತೊಮ್ಮೆ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ, ಎಲ್ಲರಿಗೂ ಸತಿಪತಿ ಭಾಗ್ಯ ಇರಲಿ, ಮಕ್ಕಳ ಭಾಗ್ಯವಿರಲಿ. ನಿಮ್ಮ ಮನೆ ಚೆನ್ನಾಗಿರಲಿ, ದೇಶ ಚೆನ್ನಾಗಿರಲಿ, ಮಕ್ಕಳಿಗೆಲ್ಲ ಒಳ್ಳೆಯ ವಿದ್ಯೆ ಬರಲಿ, ಎಲ್ಲರೂ ಗಿಡ ಮರಗಳನ್ನು ಬೆಳೆಸಿ. ನನ್ನ ಪತಿ, ದೇವರ ಆಶೀರ್ವಾದ ಮತ್ತು ನನ್ನ ಆಶೀರ್ವಾದ ನನ್ನ ಮಗನ ಮೇಲಿರಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಿಮ್ಮಕ್ಕ ಸಾವಿಗೂ ಮುನ್ನ ಸಂದೇಶ ನೀಡಿದ್ದಾರೆ.

Shwetha M