ತಾಲಿಬಾನ್ ವಿದೇಶಾಂಗ ಸಚಿವರ ಜೊತೆ ಎಸ್.ಜೈಶಂಕರ್ ಮಾತುಕತೆ – ಇತಿಹಾಸದಲ್ಲಿ ಇದೇ ಮೊದಲು

ತಾಲಿಬಾನ್ ವಿದೇಶಾಂಗ ಸಚಿವರ ಜೊತೆ ಎಸ್.ಜೈಶಂಕರ್ ಮಾತುಕತೆ – ಇತಿಹಾಸದಲ್ಲಿ ಇದೇ ಮೊದಲು ಇತಿಹಾಸದಲ್ಲೇ ಮೊದಲ ಬಾರಿಗೆ ತಾಲಿಬಾನ್ ವಿದೇಶಾಂಗ ಸಚಿವರ ಜೊತೆ ಎಸ್.ಜೈಶಂಕರ್ ಮಾತುಕತೆ ನಡೆಸಿದ್ದಾರೆ. ಪ್ರಾದೇಶಿಕ ಚಲನಶೀಲತೆಯಲ್ಲಿ ಹೊಸ ಅಧ್ಯಾಯ ಇದು ಎನ್ನಲಾಗಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ತಾಲಿಬಾನ್ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಜೊತೆ ಭಾರತವು ನಡೆಸಿದ ಮೊದಲ ಸಚಿವ ಮಟ್ಟದ ಸಂಪರ್ಕ ಇದಾಗಿರುವುದರಿಂದ ಈ ಕರೆ ಮಹತ್ವದ್ದಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರ್ಮಿಕ ಪ್ರೇರಿತ ದಾಳಿಯಲ್ಲಿ ಪಾಕಿಸ್ತಾನದ ನಂಟು ಹೊಂದಿರುವ ಭಯೋತ್ಪಾದಕರು, 26 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪಹಲ್ಗಾಮ್ ದಾಳಿಯನ್ನು ಅಫ್ಘಾನಿಸ್ತಾನ ಖಂಡಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಅವರು ಖಂಡಿಸಿದ್ದಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು. ದೇಶಗಳ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಚರ್ಚಿಸಲಾಯಿತು ಎಂದು ಎಕ್ಸ್ನಲ್ಲಿ ಜೈಶಂಕರ್ ಪೋಸ್ಟ್ ಹಾಕಿದ್ದಾರೆ
ಜಮ್ಮು ಮತ್ತು ಕಾಶ್ಮೀರದ ಘಟನೆಗಳಿಗೆ ತಾಲಿಬಾನ್ ಕಾರಣ ಎಂಬ ಪಾಕಿಸ್ತಾನ ಸುಳ್ಳು ಸುದ್ದಿ ಹರಡಿದೆ ಎಂದು ಜೈಶಂಕರ್ ಇದೇ ವೇಳೆ ತಿಳಿಸಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳಲ್ಲಿ ಸುಳ್ಳು ಮತ್ತು ಆಧಾರರಹಿತ ವರದಿಗಳ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಅಪನಂಬಿಕೆಯನ್ನು ಸೃಷ್ಟಿಸುವ ಇತ್ತೀಚಿನ ಪ್ರಯತ್ನಗಳನ್ನು ಮುತಾಕಿ ದೃಢವಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.