ಅಣ್ವಸ್ತ್ರ ಪ್ರಯೋಗಕ್ಕೂ ಮುನ್ನ ರಷ್ಯಾ ಮಿಸೈಲ್ ಪರೀಕ್ಷೆ – ಅಮೆರಿಕಕ್ಕೆ ಪುಟಿನ್ ನೇರ ಸವಾಲು?
ರಷ್ಯಾ-ಉಕ್ರೇನ್ ಹಾಗೂ ಪ್ಯಾಲೆಸ್ತೀನ್-ಇಸ್ರೇಲ್ ನಡುವಿನ ಸಂಘರ್ಷದ ಕಿಚ್ಚು ಜಗತ್ತಿನ ಇತರೆ ರಾಷ್ಟ್ರಗಳಿಗೂ ಹಬ್ಬುತ್ತಿದೆ. ಅಂತಾರಾಷ್ಟ್ರೀಯ ಸಂಬಂಧಗಳು ಹದಗೆಡುತ್ತಿದ್ದು, ಆಘಾತಕಾರಿ ಬೆಳವಣಿಗೆಗೆ ಕಾರಣವಾಗಿದೆ. ದೇಶಗಳ ನಡುವಿನ ದ್ವೇಷದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹ, ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಯುತ್ತಿದೆ. ವಿಶ್ವದ ಬಲಾಢ್ಯ ರಾಷ್ಟ್ರಗಳು ಅಣ್ವಸ್ತ್ರಗಳ ಪ್ರಯೋಗದಲ್ಲಿ ರೇಸ್ಗೆ ಇಳಿದಿದ್ದು ವಿನಾಶದ ಆತಂಕ ಸೃಷ್ಟಿಸಿದೆ. ಒಂದರ ಹಿಂದೆ ಒಂದರಂತೆ ಪರಮಾಣು ಬಾಂಬ್ ಗಳ ಪರೀಕ್ಷೆ ನಡೆಸುತ್ತಿದೆ. ಇದೀಗ ರಷ್ಯಾ ಕೂಡ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿದೆ. ಇತ್ತೀಚೆಗಷ್ಟೇ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದದಿಂದ ಹಿಂದೆ ಸರಿದಿದ್ದ ರಷ್ಯಾದ ಈ ದಿಢೀರ್ ನಡೆ ಹತ್ತಾರು ಆತಂಕಗಳಿಗೆ ಕಾರಣವಾಗಿದೆ.
ಹಲವು ರಾಷ್ಟ್ರಗಳ ನಡುವೆ ಶೀತಲ ಸಮರದಂಥ ಸ್ಥಿತಿ ನಿರ್ಮಾಣವಾಗಿದ್ದು, ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಬಲಪಡಿಸುತ್ತಿವೆ. ರಷ್ಯಾ ಕೂಡ ಇದೇ ಹಾದಿಯಲ್ಲಿದೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಪದೇ ಪದೇ ಅಣ್ವಸ್ತ್ರ ಪ್ರಯೋಗದ ಮಾತುಗಳನ್ನು ಆಡುತ್ತಿತ್ತು. ಉಕ್ರೇನ್ ದೇಶ ನಮ್ಮ ಮೇಲೆ ಡರ್ಟಿ ಬಾಂಬ್ ಪ್ರಯೋಗ ಮಾಡಲಿದೆ ಎಂದು ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಪುಟಿನ್ ಆತಂಕ ಹೊರ ಹಾಕಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಮಾಡಿದೆ. ಕ್ಷಿಪಣಿ ಪರೀಕ್ಷೆಗೆ ಸಂಬಂಧಿಸಿದ ವಿಡಿಯೋವನ್ನು ರಷ್ಯಾ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ. ಸಮುದ್ರದಿಂದ ಉಡಾವಣೆಯಾಗುವ ಖಂಡಾಂತರ ಕ್ಷಿಪಣಿ ಬುಲಾವಾವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಾಗಿ ಘೋಷಿಸಿಕೊಂಡಿದೆ. ಆರ್ಕ್ಟಿಕ್ ಸಮುದ್ರದ ಯುರೋಪಿಯನ್ ರಾಷ್ಟ್ರಗಳ ಕರಾವಳಿಯ ಸಮುದ್ರದಲ್ಲಿ ಇದನ್ನು ಪರೀಕ್ಷಿಸಲಾಗಿದೆ ಎಂದು ರಷ್ಯಾ ತಿಳಿಸಿದೆ. ಇತ್ತೀಚೆಗಷ್ಟೇ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದದ ಅನುಮೋದನೆಯನ್ನು ರದ್ದುಪಡಿಸಿದ್ದ ರಷ್ಯಾ ಇತ್ತೀಚಿಗಿನ ದಿನಗಳಲ್ಲಿ ತನ್ನ ಪರಮಾಣು ಚಟುವಟಿಕೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರ ಭಾಗವಾಗಿ ಇದೀಗ ಕ್ಷಿಪಣಿಯ ಉಡಾವಣೆವನ್ನು ಯಶಸ್ವಿಯಾಗಿ ಮಾಡಿದೆ. ರಷ್ಯಾದ ಈ ನಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಉಕ್ರೇನ್ ವಿರುದ್ಧದ ಸಮರದಲ್ಲಿ ಪಾಶ್ಚಿಮಾತ್ಯ ದೇಶಗಳ ಹಸ್ತಕ್ಷೇಪ ಹೆಚ್ಚಾದರೆ ಪರಮಾಣು ಯುದ್ಧದಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಪುಟಿನ್ ಎಚ್ಚರಿಕೆ ನೀಡಿದ್ದರು. ಇದೀಗ ಪರಮಾಣು ಪರೀಕ್ಷೆಗೆ ಒತ್ತು ನೀಡುತ್ತಿರುವುದು ಆತಂಕ ಉಂಟುಮಾಡಿದೆ. ಅಮೆರಿಕಕ್ಕೆ ಸವಾಲೆಸೆಯುವಂತೆ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷಿಸುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ : ಇಸ್ರೇಲ್ ಶತ್ರುಗಳಿಗೆ ಕ್ಷಿಪಣಿಗಳನ್ನು ಕಳುಹಿಸಿದೆಯಾ ರಷ್ಯಾ – ಹೆಜ್ಬುಲ್ಲಾ ಬೆನ್ನಿಗೆ ನಿಂತಿದ್ದೇಕೆ ವ್ಯಾಗ್ನರ್?
ಖಂಡಾಂತರ ಕ್ಷಿಪಣಿಯನ್ನು ರಷ್ಯಾದ ಉತ್ತರ ಕರಾವಳಿಯ ಬಿಳಿ ಸಮುದ್ರದಲ್ಲಿ ನೀರೊಳಗಿನ ಸ್ಥಾನದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಎಂಪೆರರ್ ಅಲೆಕ್ಸಾಂಡರ್ ದಿ ಥರ್ಡ್ ಹೆಸರಿನ ಪರಮಾಣು ಜಲಾಂತರ್ಗಾಮಿ ನೌಕೆ ಇದಾಗಿದ್ದು, ತಲಾ 16 ಬುಲಾವಾ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನ ಹೊಂದಿದೆ. ಹಿಂದಿನ ಮಾದರಿಗಳಿಗಿಂತ ಹೆಚ್ಚು ಕೌಶಲ್ಯಯುತ ಮತ್ತು ನಿಶ್ಯಬ್ಧವಾಗಿರುವ ಕ್ಷಿಪಣಿ ಇದಾಗಿದೆ. 12 ಮೀಟರ್ ಅಂದರೆ 40-ಅಡಿ ಉದ್ದವಿದ್ದು, ಅಂದಾಜು 8,000 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿ ಆರು ಪರಮಾಣು ಸಿಡಿತಲೆಗಳನ್ನು ಹೊತ್ತು ಸಾಗಬಲ್ಲದು ಎಂದಿರುವ ರಷ್ಯಾದ ರಕ್ಷಣಾ ಸಚಿವಾಲಯ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನ ಹಾರಿಸುವ ಮೂಲಕ ಗುರಿ ಮುಟ್ಟಿದ್ದೇವೆ ಎಂದು ಹೇಳಿಕೊಂಡಿದೆ. ಈಗಾಗಲೇ ಒಂದು ಕ್ಷಿಪಣಿಯನ್ನ ಯಶಸ್ವಿಯಾಗಿ ಉಡಾಯಿಸರುವ ರಷ್ಯಾ ಇನ್ನೂ ಮೂರು ಕ್ಷಿಪಣಿಗಳು ನಿರ್ಮಾಣ ಹಂತದಲ್ಲಿವೆ ಎಂದು ಹೇಳಿಕೊಂಡಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸುವುದು ಪರೀಕ್ಷೆಗಳ ಅಂತಿಮ ಅಂಶವಾಗಿದ್ದು, ಇದರ ನಂತರ ಕ್ರೂಸರ್ ಅನ್ನು ನೌಕಾಪಡೆಗೆ ಸ್ವೀಕರಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದೆ.
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮತ್ತೆ ಪರಮಾಣು ಪರೀಕ್ಷೆಯತ್ತ ಹೆಜ್ಜೆ ಹಾಕುತ್ತಿದ್ದು, ಪಶ್ಚಿಮದಿಂದ ಬೆದರಿಕೆ ಎದುರಿಸುವ ನಿರೀಕ್ಷೆಯಲ್ಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ರಷ್ಯಾ ಮತ್ತು ಅಮೆರಿಕ ಪರಸ್ಪರ ಪೈಪೋಟಿಯಲ್ಲಿ ಕ್ಷಿಪಣಿ ಮತ್ತು ಪರಮಾಣುಗಳ ಪರೀಕ್ಷೆ ಆರಂಭಿಸಿದರೆ ಚೀನಾ, ಭಾರತ, ಪಾಕಿಸ್ತಾನದಂತಹ ರಾಷ್ಟ್ರಗಳೂ ಪರಮಾಣು ಪರೀಕ್ಷಾ ಸ್ಪರ್ಧೆಯನ್ನು ಹೆಚ್ಚಿಸಬಹುದು ಎಂಬುದು ಶಸ್ತ್ರಾಸ್ತ್ರ ನಿಯಂತ್ರಣ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಈ ಎಲ್ಲಾ ದೇಶಗಳು ಸಹ ಸ್ವಯಂ ನಿಷೇಧ ನೀತಿ ಪಾಲಿಸುತ್ತಿವೆ. ಪರಮಾಣು ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದ್ದರೂ ಆ ದೇಶದ ಕಾಂಗ್ರೆಸ್ ಅದನ್ನು ಇನ್ನೂ ಅನುಮೋದಿಸಿಲ್ಲ. ಎಂದು ಅವರು ನೆನಪಿಸಿದರು. ತಾವೂ ಕೂಡ ಅದೇ ನಿರ್ಧಾರ ಕೈಗೊಂಡಿದ್ದೇವೆ ಎಂಬುದು ಪುಟಿನ್ ಸಮರ್ಥನೆ. ಇದರ ನಡುವೆ ಮಿಸೈಲ್ ಟೆಸ್ಟ್ ಮಾಡಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಅಷ್ಟಕ್ಕೂ ರಷ್ಯಾ ಇಲ್ಲಿ ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗೆ ಮುಂದಾಗಿರೋದಕ್ಕೆ ಕಾರಣ ಉಕ್ರೇನ್ ಯುದ್ಧ. ಈಗಾಗಲೇ ಉಕ್ರೇನ್ ಗೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಮಿಲಿಟರಿ ಸಹಾಯ ಮಾಡುತ್ತಿವೆ. ಹೀಗಾಗಿ ರಷ್ಯಾ ತನ್ನ ಎದುರಾಳಿ ರಾಷ್ಟ್ರಗಳಿಗೆ ಬಿಸಿ ಮುಟ್ಟಿಸಲು ಕ್ಷಿಪಣಿಗಳ ಪರೀಕ್ಷೆಗೆ ಮುಂದಾಗಿದೆ ಎನ್ನಲಾಗಿದೆ.
ರಷ್ಯಾ ಹೀಗೆ ಅತ್ಯಾಧುನಿಕ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸುವು ಮೂಲಕ ಶತ್ರುರಾಷ್ಟ್ರಗಳಿಗೆ ಎಚ್ಚರಿಕೆ ನೀಡುತ್ತಿದೆ. ತಮ್ಮ ತಂಟೆಗೆ ಬಂದರೆ ಉಕ್ರೇನ್ ಮಾತ್ರವಲ್ಲ, ಬೇರೆ ರಾಷ್ಟ್ರಗಳಿಗೂ ಉತ್ತರ ಕೊಡುವುದಾಗಿ ಮೆಸೇಜ್ ರವಾನಿಸುತ್ತಿದೆ. ಈಗಾಗಲೇ ನಿಯೋಜನೆ ಮಾಡಿರುವ ಕ್ಷಿಪಣಿಗಳು ಶತ್ರುಗಳಿಗೆ ಮತ್ತೆ ಮತ್ತೆ ಯೋಚಿಸುವಂತೆ ಮಾಡಿವೆ. ಯಾರೇ ಅಡ್ಡ ಬಂದರೂ ಯುದ್ಧಕ್ಕೆ ಸಿದ್ಧ ಎನ್ನುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಹೇಳಿಕೆ ನೀಡಿದ್ದಾರೆ. ಕ್ಷಣ ಮಾತ್ರದಲ್ಲಿ ನೆಗೆಯುವ ಈ ಕ್ಷಿಪಣಿಗಳು ಶತ್ರುಗಳ ಕಣ್ಗಾವಲು ವ್ಯವಸ್ಥೆಯನ್ನ ತಪ್ಪಿಸಿಕೊಂಡು ಮಿಸೈಲ್ ಡಿಫೆನ್ಸ್ ಸಿಸ್ಟಮ್ ಕೂಡ ರಷ್ಯಾದ ಕ್ಷಿಪಣಿ ಎದುರು ಏನೂ ಮಾಡೋಕೆ ಆಗಲ್ಲ. ರಷ್ಯಾದ ಈ ನಡೆ ಉಕ್ರೇನ್ ವಿರುದ್ಧದ ಯುದ್ಧವನ್ನ ಇನ್ನಷ್ಟು ಭಯಾನಕ ಮಾಡುವ ಮುನ್ಸೂಚನೆ ನೀಡುತ್ತದೆ. ಉಕ್ರೇನ್ ಸರ್ವನಾಶಕ್ಕೆ ರಷ್ಯಾ ಪಣ ತೊಟ್ಟು ನಿಂತಿದ್ರೆ ಅತ್ತ ಉಕ್ರೇನ್ ಬೆನ್ನಿಗೆ ನ್ಯಾಟೋ ಹಾಗೂ ಅಮೆರಿಕ ನಿಂತಿರೋದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಒಂದ್ಕಡೆ ಖಂಡಾತರ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಯುತ್ತಿದ್ರೆ ಮತ್ತೊಂದೆಡೆ ವಿಶ್ವದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಪ್ರವೃತ್ತಿ ಹೆಚ್ಚಳವಾಗಿದೆ. ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ ಸ್ಟಿಟ್ಯೂಟ್ ಈ ಆಘಾತಕಾರಿ ವರದಿಯನ್ನು ಮಾಡಿದೆ. ಜಗತ್ತು ಮಾನವ ಇತಿಹಾಸದಲ್ಲಿ ಅತ್ಯಂತ ಅಪಾಯಕಾರಿ ಘಟ್ಟದಲ್ಲಿದೆ ಎನ್ನಲಾಗಿದೆ. ಒಂದೇ ವರ್ಷದ ಅವಧಿಯಲ್ಲಿ ಚೀನಾ ಬರೋಬ್ಬರಿ 60 ಅಣ್ವಸ್ತ್ರಗಳನ್ನ ಹೆಚ್ಚಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ.
ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ ಸ್ಟಿಟ್ಯೂಟ್ ಅಂದ್ರೆ SIPRI ವರದಿ ಪ್ರಕಾರ ಪ್ರಸ್ತುತ ಜಗತ್ತಿನಲ್ಲಿ ಒಟ್ಟಾರೆ 12,512 ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವಿದೆ. ಈ ಪೈಕಿ ಒಟ್ಟು ಪರಮಾಣು ಶಸ್ತ್ರಾಸ್ತ್ರಗಳಲ್ಲಿ 9,576 ಸಂಭಾವ್ಯ ಬಳಕೆಗೆ ಸಿದ್ಧವಾಗಿವೆ. ಒಟ್ಟು ಪರಮಾಣು ಶಸ್ತ್ರಾಸ್ತ್ರಗಳ ಪೈಕಿ ರಷ್ಯಾ ಮತ್ತು ಅಮೆರಿಕದಲ್ಲೇ ಶೇಕಡಾ 90ರಷ್ಟು ಪರಮಾಣು ಶಸ್ತ್ರಾಸ್ತ್ರಗಳಿವೆ. ಇನ್ನೊಂದು ಆಘಾತಕಾರಿ ಅಂಶ ಅಂದ್ರೆ ವಿಶ್ವದ ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾದಲ್ಲಿ ಸುಮಾರು 2,000 ಅಣ್ವಸ್ತ್ರಗಳು ತಕ್ಷಣದ ಬಳಕೆಗೆ ಸಿದ್ಧವಾಗಿದೆ. ಅಣ್ವಸ್ತ್ರಗಳನ್ನ ಕ್ಷಿಪಣಿಗಳಲ್ಲಿ ಅಳವಡಿಕೆ ಮಾಡಿದ್ದು ವಾಯುನೆಲೆಗಳಲ್ಲಿ ನಿಯೋಜಿಸಲಾಗಿದೆ. ರಷ್ಯಾದಲ್ಲಿ 5,899 ಪರಮಾಣು ಶಸ್ತ್ರಾಸ್ತ್ರಗಳಿದ್ದು ಮೊದಲ ಸ್ಥಾನದಲ್ಲಿದೆ. ಅಮೆರಿಕ ಎರಡನೇ ಸ್ಥಾನದಲ್ಲಿದ್ದರೆ ಚೀನಾ ಮೂರನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ 5,224 ಪರಮಾಣು ಶಸ್ತ್ರಾಸ್ತ್ರಗಳು ಹಾಗೂ ಚೀನಾ ಬಳಿ 410 ಶಸ್ತ್ರಾಸ್ತ್ರಗಳಿವೆ. ಚೀನಾ ನಂತರದ ಸ್ಥಾನದಲ್ಲಿ ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಿವೆ. ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಭಾರತ & ಪಾಕಿಸ್ತಾನದ ನಡುವೆ ಪ್ರಬಲ ಪೈಪೋಟಿ ನಡೀತಿದೆ. ಪಾಕ್ ಬಳಿ 170 ಪರಮಾಣು ಸಿಡಿತಲೆಗಳಿದ್ರೆ ಭಾರತದ ಬಳಿ 164 ಶಸ್ತ್ರಾಸ್ತ್ರಗಳಿವೆ. ಇನ್ನು ಉತ್ತರ ಕೊರಿಯಾ 30 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದಾಗಿ ವರದಿಯಾಗಿದೆ.
ಸದ್ಯಕ್ಕೆ ಯುದ್ಧ ನಡೆಯುತ್ತಿರೋದು ರಷ್ಯಾ ಮತ್ತು ಉಕ್ರೇನ್ ನಡುವೆ ಹಾಗೂ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ. ಮೊದಲೇ ಬದ್ಧವೈರಿರಾಷ್ಟ್ರಗಳಾಗಿರುವ ರಷ್ಯಾ ಮತ್ತು ಅಮೆರಿಕ ಬೆಂಬಲದ ವಿಚಾರದಲ್ಲೂ ಭಿನ್ನ ನಿಲುವು ಇದೆ. ಇತ್ತೀಚೆಗಷ್ಟೇ ಹಿರೋಶಿಮಾ ಮೇಲೆ ಹಾಕಿದ್ದ ನ್ಯೂಕ್ಲಿಯರ್ ಬಾಂಬ್ ಗಿಂತ 24 ಪಟ್ಟು ಶಕ್ತಿಯಾಲಿಯಾಗಿರುವ ಬಾಂಬ್ ತಯಾರಿಸುತ್ತಿರೋದಾಗಿ ಘೋಷಿಸಿಕೊಂಡಿದೆ. ಅಮೆರಿಕದ ಈ ನಡೆ ಇತರೆ ರಾಷ್ಟ್ರಗಳಿಗೆ ಆತಂಕ ಉಂಟು ಮಾಡಿದ್ದು ತಮ್ಮ ತಮ್ಮ ಮಿಲಿಟರಿ ಶಕ್ತಿಗಳನ್ನ ಹೆಚ್ಚಿಕೊಳ್ತಿದೆ. ಈ ವಿಚಾರದಲ್ಲಿ ರಷ್ಯಾ ಕೂಡ ಖಂಡಾಂತರ ಕ್ಷಿಪಣಿಯನ್ನ ಯಶಸ್ವಿಯಾಗಿ ಉಡಾವಣೆ ಮಾಡೋ ಮೂಲಕ ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದೆ.