ಪುಟಿನ್ ಭಾರತ ಭೇಟಿಗೆ ಮುಹೂರ್ತ ಫಿಕ್ಸ್ – ಟ್ರಂಪ್ ಕೆಂಗಣ್ಣಿಗೆ ಗುರಿಯಾಗ್ತಾರಾ ಮೋದಿ?

ಪುಟಿನ್ ಭಾರತ ಭೇಟಿಗೆ ಮುಹೂರ್ತ ಫಿಕ್ಸ್ –  ಟ್ರಂಪ್ ಕೆಂಗಣ್ಣಿಗೆ ಗುರಿಯಾಗ್ತಾರಾ ಮೋದಿ?

ಟ್ರಂಪ್ ಸುಂಕ ಸಮರದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 23 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಈ ಅಧಿಕೃತ ಭೇಟಿ ನಡೆಯಲಿದೆ.   

 ಡಿಸೆಂಬರ್ 4 ಮತ್ತು 5 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತ ಭೇಟಿಯ ಸಂದರ್ಭದಲ್ಲಿ ಪುಟಿನ್ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ರಷ್ಯಾದ ನಾಯಕನನ್ನು ಬರಮಾಡಿಕೊಳ್ಳಲಿದ್ದು, ಅವರ ಗೌರವಾರ್ಥವಾಗಿ ಔತಣಕೂಟವನ್ನು ಆಯೋಜಿಸಲಿದ್ದಾರೆ.

ಇದನ್ನೂ ಓದಿ: ಸಿಕ್ಕ ಸಿಕ್ಕಲ್ಲಿ ಕಸ ಹಾಕಿದ್ರೆ ಹುಷಾರ್!‌ – ನಿಮ್ಮ ಮೇಲೆ ಬೀಳುತ್ತೆ ಕ್ರಿಮಿನಲ್‌ ಕೇಸ್!‌

 ಆಗಸ್ಟ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಸ್ಕೋಗೆ ಭೇಟಿ ನೀಡಿದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷರ ಭಾರತ ಭೇಟಿಯನ್ನು ಘೋಷಿಸಲಾಗಿತ್ತು. ಆ ಸಮಯದಲ್ಲಿ ದಿನಾಂಕಗಳನ್ನು ಅಂತಿಮಗೊಳಿಸಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಪುಟಿನ್ ಭೇಟಿಯಾಗಿದ್ದರು. ಲಿಮೋಸಿನ್‌ನಲ್ಲಿ ಅವರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದರು. ಆರ್ಥಿಕ, ಹಣಕಾಸು ಮತ್ತು ಇಂಧನ ಕ್ಷೇತ್ರಗಳಲ್ಲಿನ ಸಹಕಾರದ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದರು. ರಷ್ಯಾದ ವಿರುದ್ಧ ವ್ಯಾಪಾರ ಸಂಬಂಧ ಇಟ್ಟುಕೊಂಡಿದ್ದಕ್ಕೆ ಹೆಚ್ಚು ಸುಂಕ ವಿಧಿಸುತ್ತಿರುವ ಟ್ರಂಪ್ , ಪುಟಿನ್ ಭಾರತ ಭೇಟಿಯಿಂದ  ಕೆರಳುವ ಸಾಧ್ಯತೆ ಹೆಚ್ಚಿದೆ,

Kishor KV