ಆಂತರಿಕ ದಂಗೆಗೆ ಕಂಗೆಟ್ಟ ರಷ್ಯಾ – ಪುಟಿನ್ ವಿರುದ್ಧವೇ ಯುದ್ಧ ಸಾರಿದ ವ್ಯಾಗ್ನರ್ ಪಡೆ!

ಆಂತರಿಕ ದಂಗೆಗೆ ಕಂಗೆಟ್ಟ ರಷ್ಯಾ – ಪುಟಿನ್ ವಿರುದ್ಧವೇ ಯುದ್ಧ ಸಾರಿದ ವ್ಯಾಗ್ನರ್ ಪಡೆ!

ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದಲ್ಲಿ ಆಂತರಿಕ ದಂಗೆ ಭುಗಿಲೆದ್ದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪುಟಿನ್ ರ ಪರಮಾಪ್ತ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾ ನಗರಗಳಿಗೆ ಮುತ್ತಿಗೆ ಹಾಕಿದೆ. ಈ ನಡುವೆ ರಷ್ಯಾವನ್ನು ರಕ್ಷಿಸಿಯೇ ತೀರುತ್ತೇವೆ ಎಂದು ಪುಟಿನ್ ಪ್ರತಿಜ್ಞೆ ಮಾಡಿದ್ದಾರೆ.

ಪುಟಿನ್ ಆಪ್ತ ಹಾಗೂ ವ್ಯಾಗ್ನರ್ ಪಡೆಯ (Wagner Group) ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ಸದ್ಯ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin In Crisis) ವಿರುದ್ಧವೇ ತಿರುಗಿ ಬಿದ್ದಿದ್ದು, ತನ್ನ ಸೇನೆಯ ಮೇಲೆಯೇ ದಾಳಿ ಮಾಡುತ್ತಿರುವ ರಷ್ಯಾ ಸೇನೆಯ ವಿರುದ್ಧ ದಾಳಿ ನಡೆಸುತ್ತೇನೆ. ರಷ್ಯಾ ಸೇನಾ ನಾಯಕತ್ವವನ್ನೇ ಅಂತ್ಯಗೊಳಿಸಲು ಯಾವುದೇ ಕ್ರಮಕ್ಕೂ ನಾನು ಸಿದ್ಧನಿದ್ದೇನೆ ಎಂದು ಘಂಟಾಘೋಷವಾಗಿ ಹೇಳಿದ್ದಾನೆ.

ಇದನ್ನೂ ಓದಿ : ಯುಎಸ್ ವೀಸಾಗೆ ಚೆನ್ನೈಗೆ ಹೋಗಬೇಕೆಂದಿಲ್ಲ! – ಬೆಂಗಳೂರಿನಲ್ಲೇ ಅಮೆರಿಕಾ ರಾಯಭಾರ ಕಚೇರಿ?

ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾದ ವಿರುದ್ಧ ದಂಗೆ ಸಾರಿರುವುದರಿಂದ ಈ ಗುಂಪಿನ 30 ಸಾವಿರ ಸೈನಿಕರು ಮಾಸ್ಕೋದತ್ತ ಧಾವಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ಮಾಸ್ಕೋಗೆ ಬರುವ ಹೆದ್ದಾರಿಯನ್ನು ಮುಚ್ಚಲಾಗಿದ್ದು, ರಷ್ಯಾ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಇರುವ ರೊಸ್ಟೊವ್​​ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ರಷ್ಯಾ ಸೈನ್ಯದ ಹೆಲಿಕಾಪ್ಟರ್ ಒಂದನ್ನು ಹೊಡೆದುರುಳಿಸಿರುವುದಾಗಿ ವ್ಯಾಗ್ನರ್ ಗುಂಪು ಹೇಳಿಕೊಂಡಿದೆ. ಹಲವೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಮನೆಯಿಂದ ಹೊರಬರದಂತೆ ರೊಸ್ಟೊವ್ ರಾಜ್ಯಪಾಲ ವಸಿಲಿ ಗೊಲುಬೆವ್ ಅವರು ಜನರಿಗೆ ಮನವಿ ಮಾಡಿದ್ದಾರೆ.

Wagner Mercenary ಎಂಬುದು ಒಂದು ಖಾಸಗಿ ಪ್ಯಾರಾ ಮಿಲಿಟರಿ ಪಡೆಯಾಗಿದ್ದು, ಪುಟಿನ್ ಆಪ್ತ ಯೆವ್ಗೆನಿ ಪ್ರಿಗೋಜಿನ್ ಈ ಸೇನೆಯ ಮುಖ್ಯಸ್ಥನಾಗಿದ್ದಾನೆ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ, ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ. ಒಟ್ಟು 50 ಸಾವಿರ ಸೈನಿಕರನ್ನು ಹೊಂದಿರುವ ವ್ಯಾಗ್ನರ್ ಪಡೆ ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಅನ್ನೋದು ತಿಳಿದು ಬಂದಿತ್ತು. ಕಳೆದ ಜನವರಿಯಲ್ಲಿ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಉಪ್ಪು ತಯಾರಿಸುವ ಪಟ್ಟಣವಾದ ಸೊಲೆಡಾರ್ ಅನ್ನು ರಷ್ಯಾ ವಶಪಡಿಸಿಕೊಂಡಿತ್ತು. ಈ ಪ್ರದೇಶವನ್ನು ಗೆದ್ದ ಶ್ರೇಯಸ್ಸು ವಿಚಾರವಾಗಿ ವ್ಯಾಗ್ನರ್‌ ಪಡೆ ಮತ್ತು ರಷ್ಯಾ ಸೇನೆಯ ಬಗ್ಗೆ ಆಗಾಗ ಕಿತ್ತಾಟ ನಡೆಯುತ್ತಿತ್ತು. ಇದು ತಾರಕಕ್ಕೇರಿ ಈಗ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿದೆ.

ಇದಿಷ್ಟೇ ಅಲ್ಲದೇ, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ನಾವು ಕೇಳಿದ್ದರೂ ಕೂಡ ರಷ್ಯಾ ಸೇನೆ ನಮಗೆ ಸರಿಯಾಗಿ ಮದ್ದುಗುಂಡುಗಳನ್ನು ಪೂರೈಸಿಲ್ಲ. ರಷ್ಯಾದ ಮಿಲಿಟರಿ ನಾಯಕರು ಸರಿಯಾಗಿ ಸೇನೆಯನ್ನು ಮುನ್ನಡೆಸುತ್ತಿಲ್ಲ ಎಂದು ಆರೋಪ ಮಾಡಿದ್ದರೂ ಕೂಡ ರಷ್ಯಾ ಅಧ್ಯಕ್ಷ ಪುಟಿನ್‌ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಈ ವೈಮನಸ್ಸು ತಾರಕಕ್ಕೇರಿ ಯುದ್ಧದ ಹಂತಕ್ಕೆ ಬಂದು ನಿಂತಿದೆ. ಈ ಮಧ್ಯೆ ದೇಶದ ಸೇನೆಯ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ ಪ್ರಬಲ ಸೇನಾ ಪಡೆಯ ವ್ಯಾಗ್ನರ್‌ನ ಮುಖ್ಯಸ್ಥನನ್ನು ಬಂಧಿಸಲು ರಷ್ಯಾ ಆದೇಶಿಸಿದೆ. ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ಪ್ರತಿಸ್ಪರ್ಧಿ ಕ್ರೆಮ್ಲಿನ್ ಪಡೆಗಳ ನಡುವೆ ಹೆಚ್ಚುತ್ತಿರುವ ದ್ವೇಷದ ಮಧ್ಯೆ ಈ ಬೆಳವಣಿಗೆ ನಡೆದಿದೆ.

suddiyaana