2,000 ನೋಟು ರದ್ದಾಗುತ್ತಿದ್ದಂತೆ ಚಿನ್ನಾಭರಣಗಳಿಗೆ ಫುಲ್‌ ಡಿಮ್ಯಾಂಡ್‌!

2,000 ನೋಟು ರದ್ದಾಗುತ್ತಿದ್ದಂತೆ ಚಿನ್ನಾಭರಣಗಳಿಗೆ ಫುಲ್‌ ಡಿಮ್ಯಾಂಡ್‌!

ನವದೆಹಲಿ: ದೇಶದಾದ್ಯಂತ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿರುವುದಾಗಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಸೆಪ್ಟೆಂಬರ್‌ 30ರವರೆಗೆ 2,000 ಸಾವಿರ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿದೆ. ಈ ಬೆನ್ನಲ್ಲೇ ಚಿನ್ನಕ್ಕೆ ಹಿಂದೆಗಿಂತಲೂ ಹೆಚ್ಚು ಡಿಮ್ಯಾಂಡ್‌ ಶುರುವಾಗಿದೆ.

ಕಳೆದ ಶುಕ್ರವಾರ  2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ತಿಳಿಸಿತ್ತು. ಇದೀಗ 2,000 ಮುಖಬೆಲೆಯ ನೋಟುಗಳನ್ನು ಇಟ್ಟುಕೊಂಡವರು ಚಿನ್ನಾಭರಣ ಖರೀದಿಸುತ್ತಿದ್ದಾರೆ. ಕೆಲ ಗ್ರಾಹಕರು ಚಿನ್ನದಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಸಾಕಷ್ಟು ಚಿನ್ನಾಭರಣ ಅಂಗಡಿಗಳಿಗೆ ಚಿನ್ನ ಖರೀದಿ ಸಂಬಂಧ ದೂರವಾಣಿ ಕರೆಗಳು ಬರುತ್ತಿವೆ ಎಂದು ಚಿನ್ನದ ವ್ಯಾಪಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 2000 ನೋಟು ರದ್ದಾಗುತ್ತಿದ್ದಂತೆ ಸರ್ಕಾರಿ ಕಚೇರಿಯಲ್ಲಿ ಸಿಕ್ತು ಕಂತೆ ಕಂತೆ ಹಣ!

ದೇಶದಲ್ಲಿ 2000 ಮುಖಬೆಲೆಯ ನೋಟು ವಿನಿಮಯಕ್ಕೆ ಆರ್‌ಬಿಐ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಒಂದು ಸಲಕ್ಕೆ 20 ಸಾವಿರ ರೂಪಾಯಗಿಂತ ಹೆಚ್ಚು ಹಣ ವಿನಿಮಯ ಮಾಡಬಾರದು. ಖಾತೆದಾರರು 50 ಸಾವಿರ ರೂಪಾಯಿಗಿಂತ ಹೆಚ್ಚಿನ ಮೌಲ್ಯದ 2000 ರೂಪಾಯಿ ನೋಟು ನೀಡಿದರೆ ಅದಕ್ಕೆ ಪಾನ್‌ ಕಾರ್ಡ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆ ಒದಗಿಸಬೇಕು‌ ಎಂದು ಆರ್‌ಬಿಐ ಹೇಳಿದೆ. ಹೀಗಾಗಿ ಭಾರಿ ಪ್ರಮಾಣದಲ್ಲಿ 2000 ರೂಪಾಯಿ ನೋಟು ದಾಸ್ತಾನು  ಮಾಡಿ ಇಟ್ಟುಕೊಂಡವರು ತಮ್ಮಲ್ಲಿ ಇರುವ ನೋಟುಗಳನ್ನು ನೀಡಿ ಚಿನ್ನ ಖರೀದಿ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

2 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ಚಿನ್ನ, ಬೆಳ್ಳಿ, ಆಭರಣ ಅಥವಾ ಮುತ್ತು-ರತ್ನಗಳನ್ನು ಖರೀದಿಸಿದರೆ ಅದಕ್ಕೆ ಪಾನ್‌ ಅಥವಾ ಆಧಾರ್‌ ಸಂಖ್ಯೆ ನೀಡಿ ಕೆವೈಸಿ (KYC) ವಿವರ ಭರ್ತಿ ಮಾಡಬೇಕಿಲ್ಲ. ಈ ಅವಕಾಶ ಬಳಸಿಕೊಳ್ಳುತ್ತಿರುವ ಜನರು 2000 ರೂಪಾಯಿ ನೋಟು ನೀಡಿ ಚಿನ್ನ ಖರೀದಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ಆದರೆ, 2000 ರೂಪಾಯಿ ನೋಟುಗಳು ಸಾಕಷ್ಟು ಜನರ ಬಳಿ ಇಲ್ಲ. ಹೀಗಾಗಿ ಈ ಹಿಂದೆ 500 ರೂಪಾಯಿ, 1000 ರೂಪಾಯಿ ನೋಟು ರದ್ದಾದಾಗ ಚಿನ್ನದ ಅಂಗಡಿಗಳಿಗೆ ಮುಗಿಬಿದ್ದಷ್ಟು ಜನ ಈ ಬಾರಿ ಇಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

suddiyaana