ಚುನಾವಣಾ ಅಖಾಡದಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ – ಘಟಾನುಘಟಿಗಳಿಂದ ಉಮೇದುವಾರಿಕೆ ಸಲ್ಲಿಕೆ

ಚುನಾವಣಾ ಅಖಾಡದಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ – ಘಟಾನುಘಟಿಗಳಿಂದ ಉಮೇದುವಾರಿಕೆ ಸಲ್ಲಿಕೆ

ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಕೋಟೆಯಲ್ಲಿ ಆರ್. ಅಶೋಕ್ ಶಕ್ತಿಪ್ರದರ್ಶನ ತೋರಿಸಿದ್ದಾರೆ. ಪದ್ಮನಾಭನಗರದ ಪವರ್‌ಫುಲ್ ನಾಯಕ ಆರ್. ಅಶೋಕ್, ಕನಕಪುರ ಕೋಟೆಯ ಡಿ.ಕೆ ಬಾಸ್ ಅಡ್ಡಾದಲ್ಲಿ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ತನ್ನ ಅಪಾರ ಬೆಂಬಲಿಗರೊಂದಿಗೆ ಬಂದ ಆರ್. ಅಶೋಕ್ ಶಕ್ತಿಪ್ರದರ್ಶನ ತೋರಿಸುವ ಮೂಲಕ ಮೆರವಣಿಗೆ ನಡೆಸಿದರು. ಈ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಅಶ್ವಥ್ ನಾರಾಯಣ್ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಆರ್. ಅಶೋಕ್‌ಗೆ ಸಾಥ್ ನೀಡಿದರು. ನಂತರ ತಹಶೀಲ್ದಾರ್ ಕಚೇರಿಯಲ್ಲಿ ಆರ್. ಅಶೋಕ್ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ:  ಸೋಮವಾರವೇ ಶುಭವೆಂದು ನಾಮಿನೇಷನ್ ಭರಾಟೆ – ಬೆಂಬಲಿಗರ ಜೊತೆ ಘಟಾನುಘಟಿಗಳ ಶಕ್ತಿಪ್ರದರ್ಶನ!

ಬಿಜೆಪಿಯಿಂದ ಮುನಿಸಿಕೊಂಡು ಬಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವ ಲಕ್ಷ್ಮಣ್ ಸವದಿ ಕೂಡಾ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ತೋರಿಸುವ ಮೂಲಕ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸವದಿ ಭರ್ಜರಿ ರೋಡ್ ಶೋ ಕೂಡಾ ನಡೆಸಿದ್ದಾರೆ. ಅಥಣಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಱಲಿ ನಡೆಸಿದ ಲಕ್ಷ್ಮಣ ಸವದಿ ನಂತರ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಸುವಾಗ ನೆರೆದಿದ್ದ ಅಪಾರ ಕಾರ್ಯಕರ್ತರನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಡೂರಿನಲ್ಲಿ ಜೆಡಿಎಸ್ ಪರ ಕಣಕ್ಕಿಳಿದಿರುವ ವೈ.ಎಸ್. ವಿ ದತ್ತಾ ನಾಮಪತ್ರ ಸಲ್ಲಿಸಿದ್ದಾರೆ. ದೇವೇಗೌಡರ ಮಾನಸ ಪುತ್ರ ಎಂದೇ ಕರೆಸಿಕೊಂಡಿರುವ ವೈಎಸ್‌ವಿ ದತ್ತಾ ಕಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ, ಮಾಜಿ ಸಚಿವ ಎಚ್‌ ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ. ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆಗಾಗಿ ಸ್ವತಃ ದೇವೇಗೌಡರೇ ಕಡೂರಿಗೆ ಆಗಮಿಸಿದ್ದರು. ಬೃಹತ್‌ ಮೆರವಣಿಗೆ ನಡೆಸಿ ಚುನಾವಣಾ ಕಚೇರಿಗೆ ಬಂದ ವೈಎಸ್‌ವಿ ದತ್ತಾ ಅಧಿಕಾರಿ ಚುನಾವಣಾ ಕವಿರಾಜ್‌ಗೆ ನಾಮಪತ್ರ ಸಲ್ಲಿದ್ದಾರೆ. ಈ ವೇಳೆ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಹಣ ನೀಡಿದ್ದಾರೆ.

ಇನ್ನು ರಾಜಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಾರ್ಯಕರ್ತರೊಂದಿಗೆ ಆಗಮಿಸಿರುವ ಸುರೇಶ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದರು.

suddiyaana