ಬರದ ಹಿನ್ನೆಲೆ ಸಿಂಪಲ್ ದಸರಾ ಆಚರಣೆ – ನಾಡಹಬ್ಬಕ್ಕೆ 18 ಕೋಟಿ ರೂ. ಅನುದಾನ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ನಾಡಹಬ್ಬ ಮೈಸೂರು ದಸರಾಗೆ ಈ ಬಾರಿ ಬರದ ಕರಿನೆರಳು ಬಿದ್ದಿದೆ. ಈ ಹಿನ್ನೆಲೆ ದಸರಾವನ್ನು ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಸರಾಗೆ 18 ಕೋಟಿ ರೂ. ಅನುದಾನ ನೀಡಿದೆ.
ಬರದ ಹಿನ್ನೆಲೆ ಈ ಬಾರಿ ದಸರಾವನ್ನು ಸರಳ ಹಾಗೂ ಸಾಂಪ್ರಾದಾಯಿಕವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಕಳೆದ ದಸರಾಗಿಂತ ಕಡಿಮೆ ಹಣ ವೆಚ್ಚ ಮಾಡುವ ಗುರಿ ಹೊಂದಲಾಗಿದ್ದು, ಪ್ರಾಯೋಜಕತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಬಾರಿ ಸರಳ ದಸರಾ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 18 ಕೋಟಿ ರೂ. ಅನುದಾನ ನೀಡಿದೆ. ಅಗತ್ಯವಿದ್ದರೆ ಹೆಚ್ಚಿನ ಅನುದಾನ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನಾಡಹಬ್ಬ ದಸರಾ ಮೇಲೆ ಬರದ ಕರಿ ನೆರಳು -ಖಾಸಗಿ ಪ್ರಾಯೋಜಕತ್ವಕ್ಕೆ ಮೊರೆ ಹೋದ ಸರ್ಕಾರ!
”ದಸರಾ ಮಹೋತ್ಸವ ಉದ್ಘಾಟನಾ ದಿನದಂದು ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಕುಸ್ತಿ, ಸಿನಿಮಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಜತೆಗೆ ಯುವಕರನ್ನು ಆಕರ್ಷಿಸಲು ಯುವ ಸಂಭ್ರಮ ಮತ್ತು ಯುವ ದಸರಾ ಕಾರ್ಯಕ್ರಮಗಳು ಇರಲಿದೆ. ಒಂದು ಕಡೆ ಆಹಾರ ಮೇಳ ಇರಲಿದೆ. ನಗರದ ಇನ್ನೊಂದು ಕಡೆಯೂ ಆಹಾರ ಮೇಳ ನಡೆಸುವ ಆಲೋಚನೆ ಇದೆ. ಮೆರವಣಿಗೆಯಲ್ಲಿಭಾಗವಹಿಸುವ ಕಲಾತಂಡಗಳ ಆಯ್ಕೆ ಸಂಬಂಧ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ದಸರಾ ಆಚರಣೆ ಸಂಬಂಧ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳೊಂದಿಗೆ 10 ಸಭೆಗಳನ್ನು ನಡೆಸಲಾಗಿದ್ದು, ಸಂಪೂರ್ಣ ಸಿದ್ದತೆ ಮಾಡಲಾಗಿದೆ. ಈಗಾಗಲೇ 18 ಉಪ ಸಮಿತಿಗಳನ್ನು ರಚಿಸಲಾಗಿದ್ದು,ಶೀಘ್ರದಲ್ಲಿಯೇ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿಅ. 6ರಿಂದ ಯುವ ಸಂಭ್ರಮ ನಡೆಯಲಿದೆ. ಚಂದನವನದ ತಾರಾ ದಂಪತಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವರಾದ ಕೆ.ವೆಂಕಟೇಶ್, ಶಿವರಾಜ್ ಎಸ್. ತಂಗಡಗಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.