ರೂಪಾ ವಿರುದ್ಧ ರೋಹಿಣಿ 1 ಕೋಟಿ ರೂ. ಮಾನನಷ್ಟ ಕೇಸ್ – ಕಾನೂನು ಕ್ರಮಕ್ಕೆ ಆಗ್ರಹ

ರೂಪಾ ವಿರುದ್ಧ ರೋಹಿಣಿ 1 ಕೋಟಿ ರೂ. ಮಾನನಷ್ಟ ಕೇಸ್ – ಕಾನೂನು ಕ್ರಮಕ್ಕೆ ಆಗ್ರಹ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಐಪಿಎಸ್ ಅಧಿಕಾರಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ಜಟಾಪಟಿ ಜೋರಾಗಿದೆ. ಸರ್ಕಾರ ನೋಟಿಸ್ ಕೊಟ್ಟ ಬಳಿಕ ಇಬ್ಬರ ನಡುವಿನ ಜಗಳ ಕೊಂಚ ಕಡಿಮೆಯಾಗಿದೆ.  ಇದೀಗ ತನ್ನ ಮೇಲೆ ಪದೇ ಪದೆ ಆರೋಪ ಮಾಡುತ್ತಿರುವ ಡಿ.ರೂಪಾ ಮೌದ್ಗಿಲ್ ಗೆ ರೋಹಿಣಿ ಸಿಂಧೂರಿ ಶಾಕ್ ನೀಡಿದ್ದಾರೆ.

ಹೌದು,  ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ತನ್ನ ವಿರುದ್ದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ನಗರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ & ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ..!

ರೂಪಾ ಅವರು ಕಳೆದ ಫೆ.18 ಮತ್ತು 19ರಂದು ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದಲೇ ರೂಪಾ ಈ ಕೃತ್ಯ ಎಸಗಿದ್ದಾರೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ದೂರಿನಲ್ಲಿ ರೋಹಿಣಿ ವಿವರಿಸಿದ್ದಾರೆ.

ಅಲ್ಲದೆ, ಐಎಎಸ್‌ ನಿಯಮಗಳಿಗೆ ವಿರುದ್ಧವಾಗಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ನನ್ನನ್ನು ಟೀಕೆ ಮಾಡಿದ್ದಾರೆ. ಇದು ನನಗೆ ಮಾತ್ರವಲ್ಲದೆ ಸರ್ಕಾರಕ್ಕೂ ಮುಜುಗುರ ಉಂಟು ಮಾಡಿದೆ. ಆದ್ದರಿಂದ, ನನಗಾಗಿರುವ ಮಾನನಷ್ಟಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವಾಗಿ ಕೊಡಿಸಿಕೊಡಬೇಕು. ರೂಪಾ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಕೋರಿದ್ದಾರೆ.

ರೋಹಿಣಿ ಸಿಂಧೂರಿ ಪರ ಹಾಜರಾದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, ದೂರುದಾರರು ಚಾಮರಾಜನಗರ ಹಾಗೂ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಆರೋಪಿ ಡಿ.ರೂಪಾ, ದೂರುದಾರರ ವಿರುದ್ಧ ಕಪೋಲಕಲ್ಪಿತ ಆರೋಪ ಮಾಡಿದ್ದಾರೆ. ಆದ್ದರಿಂದ ದೂರನ್ನು ವಿಚಾರಣೆಗೆ ಅಂಗೀಕರಿಸಬೇಕು. ಆರೋಪಿ ರೂಪಾ ಮೌದ್ಗಿಲ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ ಅವರು ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿದ್ದಾರೆ.

suddiyaana