‘ನಿನ್ನಿಂದ ಮಾತ್ರ ಇದು ಸಾಧ್ಯ’ – ಮ್ಯಾಕ್ಸ್‌ವೆಲ್ ದ್ವಿಶತಕಕ್ಕೆ ರನ್ ಮೆಷಿನ್ ವಿರಾಟ್ ಕೊಹ್ಲಿ ಮೆಚ್ಚುಗೆ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಎಬ್ಬಿಸಿದ ರನ್ ಸುನಾಮಿಗೆ ಇಡೀ ಕ್ರಿಕೆಟ್ ಲೋಕವೇ ದಂಗಾಗಿ ಹೋಗಿದೆ. ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ದ್ವಿಶತಕದ ಇನ್ನಿಂಗ್ಸ್ ಆಡಿದ ಮ್ಯಾಕ್ಸ್ವೆಲ್ಗೆ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರು ಶುಭಹಾರೈಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮ್ಯಾಕ್ಸಿ ಬೆಂಕಿ ಆಟವನ್ನು ಬಾಯಿತುಂಬಾ ಹೊಗಳಿದ್ದಾರೆ.
ಇದನ್ನೂ ಓದಿ: ಮ್ಯಾಕ್ಸಿ ಬೆಂಕಿ ಆಟಕ್ಕೆ ಅಫ್ಘಾನಿಸ್ತಾನ ಧೂಳಿಪಟ – ಗ್ಲೇನ್ ಮ್ಯಾಕ್ಸ್ವೆಲ್ ದಾಖಲೆಯ ಭರ್ಜರಿ ದ್ವಿಶತಕ
ಮ್ಯಾಕ್ಸ್‌ವೆಲ್ ಅವರ ಸಿಡಿಲಬ್ಬರ್ ಇನ್ನಿಂಗ್ಸ್ ನೋಡಿದ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ವಾಸಿಂ ಅಕ್ರಮ್, ಮಿಸ್ಬಾ ಉಲ್ ಹಕ್, ಡೇಲ್ ಸ್ಟೇಯ್ನ್ ಅವರಂತಹ ದಿಗ್ಗಜರು ತಮ್ಮ ಕ್ರಿಕೆಟ್ ಜೀವನದಲ್ಲಿ ಇಂತಹ ಇನ್ನಿಂಗ್ಸ್ ನೋಡಿರಲಿಲ್ಲ ಎಂದಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅದ್ಭುತ ಇನ್ನಿಂಗ್ಸ್ ಕಂಡು ಶತಕಗಳಲ್ಲಿಯೇ ದಾಖಲೆ ಬರೆದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೂಡಾ ಶಹಾಬ್ಬಾಸ್ ಗಿರಿ ಕೊಟ್ಟಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮ್ಯಾಕ್ಸ್ವೆಲ್ರನ್ನು ಹಾಡಿ ಹೊಗಳಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹೊಗಳಿ ವಿಶೇಷವಾದ ಕಾಮೆಂಟ್ ಮಾಡಿದ್ದಾರೆ. ಮ್ಯಾಕ್ಸಿ ಫೋಟೋವನ್ನು ಹಂಚಿಕೊಂಡಿರುವ ಕೊಹ್ಲಿ, ‘ನಿನ್ನಿಂದ ಮಾತ್ರ ಇದು ಸಾಧ್ಯ’ ಎಂದು ಬರೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಒಂದೇ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರೇ ಆರ್‌ಸಿಬಿಯ ಬ್ಯಾಟಿಂಗ್ ಕ್ರಮಾಂಕದ ಜೀವಾಳ. ಅಂತಹ ಪರಿಸ್ಥಿತಿಯಲ್ಲಿ, ವಿರಾಟ್ ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್ ಇಡೀ ವರ್ಷದಲ್ಲಿ ಕನಿಷ್ಠ 2 ರಿಂದ 3 ತಿಂಗಳುಗಳನ್ನು ಒಟ್ಟಿಗೆ ಕಳೆಯುತ್ತಾರೆ. ಆದ್ದರಿಂದ, ವಿರಾಟ್ ಈ ಆಸ್ಟ್ರೇಲಿಯಾದ ಆಲ್ ರೌಂಡರ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ವಿಶ್ವಕಪ್-2023ರ 39ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 46.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 292 ರನ್‌ಗಳ ಗುರಿ ತಲುಪಿತು. ಆಸೀಸ್ ಪರ ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿಶತಕ ಸಿಡಿಸಿದರು. ಮ್ಯಾಕ್ಸ್‌ವೆಲ್ ಕೇವಲ 128 ಎಸೆತಗಳನ್ನು ಎದುರಿಸಿ 21 ಬೌಂಡರಿ, 10 ಸಿಕ್ಸರ್‌ಗಳ ನೆರವಿನಿಂದ ಅಜೇಯ 201 ರನ್ ಸಿಡಿಸಿದರು.